SUDDIKSHANA KANNADA NEWS/ DAVANAGERE/ DATE:16-09-2023
ದಾವಣಗೆರೆ: ಎಲ್ಲೆಡೆ ಗಣೇಶ (Ganesha)ಚತುರ್ಥಿ ಸಂಭ್ರಮ. ಜಿಲ್ಲಾಡಳಿತವು ಪಿಒಕೆ ಗಣೇಶ ಮೂರ್ತಿಗಳಿಗೆ ನಿಷೇಧ ಹೇರಿದೆ. ಪರಿಸರ ಸ್ನೇಹಿ ಗಣೇಶ ಚತುರ್ಥಿ ಆಚರಣೆಗೆ ಸೂಚಿಸಿದೆ. ಆದ್ರೆ, ದಾವಣಗೆರೆಯ ಸಿದ್ದಗಂಗಾ ಸ್ಕೂಲ್ ನಲ್ಲಿ ವಿಶೇಷವಾದ ಗಣೇಶನ ಮೂರ್ತಿ ಮೈದೆಳೆದಿದೆ.
ಈ ಗಣೇಶ ಮೂರ್ತಿ ತುಂಬಾನೇ ಸ್ಫೆಷಲ್. ಪರಿಸರ ಸ್ನೇಹಿ ಪೇಪರ್ ಗಣಪನ ನೋಡಲು ಚೆಂದವೋ ಚೆಂದ. ಹನ್ನೆರಡು ಅಡಿ ಎತ್ತರದ ಪರಿಸರ ಸ್ನೇಹಿ ಪೇಪರ್ ಗಣಪತಿಯನ್ನು ಸಿದ್ಧಗಂಗಾ ಸಂಸ್ಥೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರು
ಚಿತ್ರಕಲಾ ಶಿಕ್ಷಕರಾದ ನಟರಾಜ್, ಸ್ವಾತಿ, ಹೀನಾ ಕೌಸರ್, ಪ್ರಿಯಾಂಕ, ಸಹನಾ ಅವರ ಸಹಕಾರದಿಂದ ಸಂಸ್ಥೆಯ ಸಿದ್ಧಲಿಂಗ ಮಂಟಪದಲ್ಲಿ ತಯಾರಿಸುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ:
Bangalore: ಸುಲಭವಾಗಿ ಕನ್ನಡ ಕಲಿಯಬೇಕಾ? ಕನ್ನಡ ಡಿಸ್ಕೋ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ ಬೆಂಗಳೂರಿನ 17 ವರ್ಷದ ಪೋರ…!
ಪೇಪರ್ ಗಣೇಶ ಮೂರ್ತಿಗೆ ಏನೇನು ಬಳಕೆ…?
ಹಳೆ ದಿನಪತ್ರಿಕೆ, ಡ್ರಾಯಿಂಗ್ ಪೇಪರ್, ಮೈದಾ ಅಂಟು, ಇದ್ದಿಲು ಪುಡಿ ಬಳಸಿ ನಿರ್ಮಿಸುತ್ತಿರುವ ಈ ಬೃಹತ್ ಗಣಪತಿ 20 ಕಿಲೋ ನಷ್ಟು ತೂಕವಿದ್ದು ಇಬ್ಬರು ಸುಲಭವಾಗಿ ಎತ್ತಬಹುದಾಗಿದೆ.
ಸುಂದರ ಮುಖ ಮುದ್ರೆಯ ಪ್ರಶಾಂತ ಪೇಪರ್ ಗಣಪತಿಯನ್ನು ನಿರ್ಮಿಸುವ ಕಾರ್ಯದಲ್ಲಿ ಮಕ್ಕಳು ಆಸಕ್ತಿ ಮತ್ತು ಭಕ್ತಿಯಿಂದ ಭಾಗವಹಿಸುತ್ತಿದ್ದಾರೆ. ಸಂಸ್ಥೆಯ ನಿರ್ದೇಶಕ ಡಾ. ಜಯಂತ್ರವರ ಮಾರ್ಗದರ್ಶನ, ಕಾರ್ಯದರ್ಶಿ ಹೇಮಂತ್ರವರ ನೆರವಿನೊಂದಿಗೆ ವಿನ್ಯಾಸಗೊಳ್ಳುತ್ತಿರುವ ಈ ಪೇಪರ್ ಗಣಪತಿಯನ್ನು ಸೋಮವಾರದಂದು ಬೆಳಿಗ್ಗೆ 11 ಗಂಟೆಗೆ ಪ್ರತಿಷ್ಠಾಪಿಸಿ ಪೂಜಾಕಾರ್ಯವನ್ನು ನೆರವೇರಿಸಲಾಗುವುದು.
ವಿಶಿಷ್ಠವಾದ ಈ ಪೇಪರ್ ಗಣಪತಿಯನ್ನು ಸೆಪ್ಟೆಂಬರ್ 28 ರಂದು ಅನಂತ ಪದ್ಮನಾಭ ವ್ರತದಂದು ವಿಸರ್ಜಿಸಲಾಗುವುದು. ಆಕರ್ಷಕವಾದ ಗಣಪನನ್ನು ಸಾರ್ವಜನಿಕರು ಮತ್ತು ಪಾಲಕರು ವೀಕ್ಷಷಣೆ ಮಾಡಬಹುದೆಂದು ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿʼಸೌಜ ತಿಳಿಸಿದ್ದಾರೆ.
ಸಿದ್ಧಗಂಗೆಯಲ್ಲಿ ಮೈದೆಳೆದಿದೆ ಗೌರಿ – ಗಣೇಶನ ಲೋಕ..!
ಸೋಮವಾರದಂದು ಆಚರಿಸಲಿರುವ ಗೌರಿ-ಗಣೇಶ ಹಬ್ಬದ ಹಿನ್ನಲೆಯಲ್ಲಿ ಇಂದು ಸಿದ್ಧಗಂಗಾ ವಿದ್ಯಾಸಂಸ್ಥೆಯ ಒಂದು ಮತ್ತು ಎರಡನೇ ತರಗತಿ ಮಕ್ಕಳು ನೂರಾರು ಸಂಖ್ಯೆಯಲ್ಲಿ ಗೌರಿ-ಗಣೇಶ ವೇಷಧಾರಿಗಳಾಗಿ ಕಣ್ಮನ ಸೆಳೆದರು. ಪಾಲಕರು ಅತ್ಯಂತ ಸಂಭ್ರಮದಿಂದ ಈ ಮಕ್ಕಳಿಗೆ ಉಡುಗೆ-ತೊಡುಗೆ ಧರಿಸಿ ಕರೆ ತಂದಿದ್ದರು.
ವಿವಿಧ ರೀತಿಯ ಕಿರೀಟಗಳು, ಆನೆಯ ಮುಖವಾಡಗಳು ಒಂದಕ್ಕಿಂತ ಒಂದು ವಿಭಿನ್ನವಾಗಿ ಆಕರ್ಷಕವಾಗಿತ್ತು. ಗಾಂಭೀರ್ಯದಿಂದ ನಡೆದು ಬಂದ ಗಣೇಶಗಳ ಜೊತೆಗೂಡಿದ ಪುಟ್ಟ ಪುಟ್ಟ ಗೌರಿಗಳು ಭಕ್ತಿ ಸ್ಫುರಿಸುವಂತಿದ್ದರು. ಹೈಸ್ಕೂಲಿನ ಮಕ್ಕಳು ಈ ನಡೆದಾಡುವ ಗೌರಿ-ಗಣೇಶರಿಗೆ ಭಕ್ತಿಗೀತೆಯೊಂದಿಗೆ ಸ್ವಾಗತಿಸಿ ನಮಿಸಿದರು. ಪಾಲಕರ ನೆರವಿನಿಂದ ಶನಿವಾರ ಸಂಭ್ರಮದಿಂದ ಉಲ್ಲಾಸಮಯವಾಗಿತ್ತು.
ನೂರಾರು ಪರಿಸರ ಗಣಪತಿಗಳು;
ಶ್ರೀ ಸಿದ್ಧಗಂಗಾ ಸ್ಥಳೀಯ ಸಂಸ್ಥೆಯ ಸ್ಕೌಟ್-ಗೈಡ್ ಮಕ್ಕಳು ಅವರವರ ತಂಡದ ಮೇಲ್ವಿಚಾರಕರ ಸಹಯೋಗದಲ್ಲಿ ಶಾಲೆಯ ಆವರಣದಲ್ಲಿ ಪರಿಸರ ಸ್ನೇಹಿ ಗಣಪತಿಗಳನ್ನು ತಯಾರಿಸಿದರು. ಮನೆಯಿಂದ ತಂದ ಜೇಡಿಮಣ್ಣು ಗಣಪತಿಯ ಆಕಾರ ತಾಳಿತು. ಹೂಗಳಿಂದ, ಮಣಿಗಳಿಂದ ಗಣಪನನ್ನು ವಿಧ ವಿಧವಾಗಿ ಅಲಂಕರಿಸಿದರು.
ಪರಿಸರ ಗಣಪತಿ ಹೇಗೆ ತಯಾರಿಸೋದು…?
ಮೈದಾ ಹಿಟ್ಟು, ಟೊಮೋಟೋ, ಸೋಪು ಇತ್ಯಾದಿಗಳ ಬಳಕೆಯೂ ಇತ್ತು. ಮಕ್ಕಳ ಕೈ ಚಳಕದಿಂದ ಕೆಲವು ಸುಂದರಾಕೃತಿಯನ್ನು ಪಡೆದರೆ ಇನ್ನೂ ಕೆಲವು ಮಣ್ಣಿನ ಮುದ್ದೆಗಳನ್ನು ಅಂಟಿಸಿ ಗಣಪನ ಆಕಾರ ಪಡೆದಿದ್ದವು.
ಶ್ರದ್ಧೆಯಿಂದ ಮಣ್ಣಿನ ಮುದ್ದೆಗಳನ್ನು ಅಂಟಿಸಿ, ತಿದ್ದಿ-ತೀಡಿ ನಿರ್ದಿಷ್ಠ ಆಕಾರ ಕೊಡುತ್ತಿರುವ ಸ್ಕೌಟ್-ಗೈಡ್ ಮಕ್ಕಳನ್ನು ಇತರರು ಕುತೂಹಲದಿಂದ ವೀಕ್ಷಿಸಿದರು. ಶಿಕ್ಷಕರಾದ ರೇಖಾರಾಣಿ, ಶಶಿಕಲಾ, ಮಹೇಶ್, ಸುನೀತ, ದುಗ್ಗಪ್ಪ, ನಿರ್ಮಲ, ವೇದಾವತಿ, ಮಂಜುಳ, ಆರೋಗ್ಯಮ್ಮ, ಆಯೇಷಾ, ಬೀಬಿ ಆಯೇಷಾ ಇವರು ಮಕ್ಕಳ ಚಟುವಟಿಕೆಗೆ ಮಾರ್ಗದರ್ಶನ ನೀಡಿದರು. ಶಾಲೆಯಲ್ಲಿ ತಾವೇ ತಯಾರಿಸಿದ ಪರಿಸರ ಸ್ನೇಹಿ ಗಣಪನನ್ನು ಮಕ್ಕಳು ಮನೆಯಲ್ಲಿ ಪೂಜಿಸುವರು.