Home ದಾವಣಗೆರೆ ‘ವಂದೇ ಮಾತರಂ’ ಹೆಸರಲ್ಲಿ ಸಂವಿಧಾನ ಪಕ್ಕಕ್ಕಿಡಲು ಸಾಧ್ಯವಿಲ್ಲ: ಸುಪ್ರೀಂ ತೀರ್ಪು ಸ್ವಾಗತಿಸಿದ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್!
ದಾವಣಗೆರೆಬೆಂಗಳೂರು

‘ವಂದೇ ಮಾತರಂ’ ಹೆಸರಲ್ಲಿ ಸಂವಿಧಾನ ಪಕ್ಕಕ್ಕಿಡಲು ಸಾಧ್ಯವಿಲ್ಲ: ಸುಪ್ರೀಂ ತೀರ್ಪು ಸ್ವಾಗತಿಸಿದ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್!

Share
ವಂದೇ ಮಾತರಂ
Share

ಬೆಂಗಳೂರು: ‘ವಂದೇ ಮಾತರಂ’ ಹಾಡದಿದ್ದರೆ ಒಬ್ಬ ವ್ಯಕ್ತಿಯನ್ನು ಅಪರಾಧಿಯನ್ನಾಗಿ ಮಾಡಲು ಸಾಧ್ಯವಿಲ್ಲ ಎಂಬ ಸಂವಿಧಾನಾತ್ಮಕ ನಿಲುವನ್ನು ಸುಪ್ರೀಂ ಕೋರ್ಟ್ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಧಾರ್ಮಿಕ ನಂಬಿಕೆ ಅಥವಾ ಆತ್ಮಸಾಕ್ಷಿಯ ಕಾರಣದಿಂದ ಯಾರಾದರೂ ಹಾಡಲು ನಿರಾಕರಿಸಿದರೆ ಅವರನ್ನು ಕ್ರಿಮಿನಲ್ ಕ್ರಮಕ್ಕೆ ಒಳಪಡಿಸಬಾರದು ಎಂದು ನ್ಯಾಯಾಲಯ ವಿಚಾರಣೆ ವೇಳೆ ಹೇಳಿದೆ. ಇದು ನಮ್ಮ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳು ಎಷ್ಟು ಗಟ್ಟಿಯಾಗಿವೆ ಎಂಬುದಕ್ಕೆ ಮತ್ತೊಂದು ಉದಾಹರಣೆ. ದೇಶದ ಸರ್ವೋಚ್ಚ ನ್ಯಾಯಾಲಯದ ಈ ಅಭಿಪ್ರಾಯವನ್ನು ನಾವು ಸ್ವಾಗತಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ. ಕೆ. ಹರಿಪ್ರಸಾದ್ ಹೇಳಿದ್ದಾರೆ. 

ಕಾಂಗ್ರೆಸ್ ಪಕ್ಷ ಎಐಸಿಸಿ ಕಾರ್ಯಕಾರಿ ಸಮಿತಿಯಲ್ಲಿ ಹಾಗೂ ಕರ್ನಾಟಕದಲ್ಲಿ ಈಗಾಗಲೇ ಸರ್ಕಾರಿ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ನ ಮೊದಲ ಎರಡು ಚರಣಗಳನ್ನು ಹಾಡುವ ನಿರ್ಧಾರ ತೆಗೆದುಕೊಂಡಿದೆ. ಈ ವಿಚಾರದಲ್ಲಿ ಪಕ್ಷದ ನಿಲುವು ಸ್ಪಷ್ಟವಾಗಿದೆ. ದೇಶಭಕ್ತಿ ಎನ್ನುವುದು ಯಾರನ್ನಾದರೂ ಒಂದು ಹಾಡನ್ನು ಕಡ್ಡಾಯವಾಗಿ ಹಾಡುವಂತೆ ಒತ್ತಾಯಿಸುವುದರಲ್ಲಿ ಇಲ್ಲ. ದೇಶಭಕ್ತಿ ಎಂದರೆ ಸಂವಿಧಾನವನ್ನು ಗೌರವಿಸುವುದು, ದೇಶದ ವೈವಿಧ್ಯತೆಯನ್ನು ಗೌರವಿಸುವುದು ಮತ್ತು ಪ್ರತಿಯೊಬ್ಬ ನಾಗರಿಕನ ಆತ್ಮಸಾಕ್ಷಿಯ ಸ್ವಾತಂತ್ರ್ಯವನ್ನು ರಕ್ಷಿಸುವುದೂ ಹೌದು ಎಂದಿದ್ದಾರೆ. 

ಸ್ವಾತಂತ್ರ್ಯ ಹೋರಾಟದ ಕಾಲದಲ್ಲೇ ವಂದೇ ಮಾತರಂ ಕುರಿತು ರಾಷ್ಟ್ರೀಯ ನಾಯಕರು ಗಂಭೀರ ಚರ್ಚೆ ನಡೆಸಿ, ದೇಶದ ಬಹುತ್ವವನ್ನು ಗೌರವಿಸುವ ಮಾರ್ಗವನ್ನು ರೂಪಿಸಿದ್ದರು. ಆ ಐತಿಹಾಸಿಕ ಒಮ್ಮತವನ್ನು ಬದಿಗಿಟ್ಟು, ಸಂಪೂರ್ಣ ಆರು ಚರಣಗಳನ್ನು ಅಧಿಕೃತವಾಗಿ ಹಾಡಿಸುವ ಹೊಸ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಜನರ ಮೇಲೆ ಹೇರಿಕೆ ಮಾಡಿದೆ ಎಂದು ಕಿಡಿಕಾರಿದ್ದಾರೆ. 

ವಂದೇ ಮಾತರಂ ಹಾಡುವುದನ್ನು ಯಾರು ವಿರೋಧಿಸುತ್ತಿಲ್ಲ. ಆದರೆ ಹಾಡನ್ನು ಗೌರವಿಸುವ ಹೆಸರಿನಲ್ಲಿ ಸಂವಿಧಾನವನ್ನು ಪಕ್ಕಕ್ಕೆ ಸರಿಸಲು ಸಾಧ್ಯವಿಲ್ಲ. ದೇಶಭಕ್ತಿಯ ಪ್ರಮಾಣಪತ್ರವನ್ನು ಬಿಜೆಪಿಯವರಿಂದ ಪಡೆದುಕೊಳ್ಳಬೇಕಾದ ಪರಿಸ್ಥಿತಿ ಈ ದೇಶದಲ್ಲಿಲ್ಲ. ದೇಶವನ್ನು ಪ್ರೀತಿಸುವ ಹಕ್ಕು ಪ್ರತಿಯೊಬ್ಬರಿಗೂ ಇರುವಂತೆ, ತನ್ನ ಆತ್ಮಸಾಕ್ಷಿಯಂತೆ ನಡೆದುಕೊಳ್ಳುವ ಹಕ್ಕು ಕೂಡ ಪ್ರತಿಯೊಬ್ಬ ನಾಗರಿಕನಿಗೂ ಇದೆ ಎಂದಿದ್ದಾರೆ.

Share

Leave a comment

Leave a Reply

Your email address will not be published. Required fields are marked *