ಚಿತ್ರಕೂಟ: ಸಾಮಾನ್ಯವಾಗಿ ಹತ್ತು-ಇಪ್ಪತ್ತು ರೂಪಾಯಿಯ ಚಾಕೊಲೇಟ್ ಜೀವನದ ದಿಕ್ಕನ್ನೇ ಬದಲಾಯಿಸಬಹುದಾ? ಉತ್ತರ ‘ಖಂಡಿತ ಹೌದು’ ಎನ್ನಬಹುದು. ಉತ್ತರ ಪ್ರದೇಶದ ಚಿತ್ರಕೂಟ ಜಿಲ್ಲೆಯಲ್ಲಿ ನಡೆದ ಇಂಥದ್ದೊಂದು ಅಪರೂಪದ ಹಾಗೂ ಅಚ್ಚರಿಯ ಘಟನೆಯು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರೇಯಸಿಯನ್ನು ಭೇಟಿಯಾಗಲು ಕೇವಲ ಒಂದು ಡೈರಿ ಮಿಲ್ಕ್ ಚಾಕೊಲೇಟ್ ಹಿಡಿದು ಹೋದ ಯುವಕನ ಬದುಕಿನಲ್ಲಿ ಕೆಲವೇ ಗಂಟೆಗಳಲ್ಲಿ ಇಡೀ ಮದುವೆಯೇ ನಡೆದುಹೋಗಿದೆ!
ಚಿತ್ರಕೂಟದ ನಿವಾಸಿ ಮನೋಜ್ ಎಂಬಾತ ತನ್ನ ಪ್ರೇಯಸಿ ರೀಟಾಳನ್ನು ಭೇಟಿಯಾಗಲು ಆಕೆಯ ಮನೆಗೆ ತೆರಳಿದ್ದ. ಚಾಕೊಲೇಟ್ ಕೊಟ್ಟು ಸ್ವಲ್ಪ ಮಾತನಾಡಿ ಬರೋಣ ಎಂಬುದು ಆತನ ಲೆಕ್ಕಾಚಾರವಾಗಿತ್ತು. ಆದರೆ ರೀಟಾಳ ಮನೆಗೆ ತಲುಪಿದ ಕೆಲವೇ ಕ್ಷಣಗಳಲ್ಲಿ ಹೊಲದ ಕೆಲಸ ಮುಗಿಸಿ ರೀಟಾಳ ತಂದೆ ಹಾಗೂ ಅಣ್ಣ ಮನೆಗೆ ವಾಪಸಾಗಿದ್ದಾರೆ. ಮನೆಯೊಳಗೆ ಮನೋಜ್‌ನನ್ನು ನೋಡಿದ ಕೂಡಲೇ ಆಕ್ರೋಶಗೊಂಡ ಕುಟುಂಬಸ್ಥರು ತೀವ್ರ ಗಲಾಟೆ ಮಾಡಿದ್ದಾರೆ. ಅಲ್ಲಿಂದ ತಪ್ಪಿಸಿಕೊಳ್ಳಲು ಮನೋಜ್ ಯತ್ನಿಸಿದರೂ ಕುಟುಂಬಸ್ಥರ ಕೈಗೆ ಸಿಕ್ಕಿಬಿದ್ದಿದ್ದಾನೆ.
ರಾತ್ರಿ ಪಂಚಾಯಿತಿ, ಬೆಳಗ್ಗೆ ಮದುವೆ: ಇಡೀ ರಾತ್ರಿ ಎರಡೂ ಕುಟುಂಬಗಳ ನಡುವೆ ಭಾರಿ ಪಂಚಾಯಿತಿ ಮತ್ತು ವಾಗ್ವಾದ ನಡೆದಿದೆ. ಕೊನೆಗೆ ಇವರ ಪ್ರೀತಿ ಇಷ್ಟು ಗಾಢವಾಗಿದ್ದರೆ ಇಬ್ಬರನ್ನೂ ಏಕೆ ಒಂದು ಮಾಡಬಾರದು ಎಂದು ಹಿರಿಯರು ನಿರ್ಧರಿಸಿ, ಮಾರನೇ ದಿನವೇ ಬೆಳಗ್ಗೆ ಇಬ್ಬರಿಗೂ ವಿವಾಹ ನೆರವೇರಿಸಿದ್ದಾರೆ.
ಮದುವೆ ಬಳಿಕ ಹೊಸ ಸಂಕಷ್ಟ: ಮದುವೆಯಾಗಿ ಪತ್ನಿಯನ್ನು ಸ್ವಂತ ಮನೆಗೆ ಕರೆತಂದ ಮನೋಜ್‌ಗೆ ಅಲ್ಲಿಯೂ ಮನೆಯವರ ತೀವ್ರ ವಿರೋಧ ಎದುರಾಗಿದೆ. ಪರಿಣಾಮವಾಗಿ ಆತ ಅತ್ತ ಅತ್ತೆ ಮನೆಗೂ ಹೋಗಲಾಗದೆ, ಇತ್ತ ಹೆತ್ತವರ ಮನೆಗೂ ಸೇರಲಾಗದೆ ಅಡ್ಡಕತ್ತರಿಯಲ್ಲಿ ಸಿಲುಕಿಕೊಂಡಿದ್ದಾನೆ.
ಸ್ಥಳೀಯರ ತಮಾಷೆ: “ಕೇವಲ ಒಂದು ಚಾಕೊಲೇಟ್ ಕೊಟ್ಟು ಜೀವನಪರ್ಯಂತ ಬಾಳಸಂಗಾತಿಯನ್ನು ಸಂಪಾದಿಸಿಕೊಂಡಿದ್ದಾನೆ” ಎಂದು ಸ್ಥಳೀಯರು ಆತನನ್ನು ನೋಡಿ ತಮಾಷೆಯಾಗಿ ಮಾತನಾಡಿಕೊಳ್ಳುತ್ತಿದ್ದಾರೆ.
ಮಾರುಕಟ್ಟೆಯಲ್ಲಿ ಡೈರಿ ಮಿಲ್ಕ್ ಬೆಲೆ ಎಷ್ಟೇ ಇರಲಿ, ಅದರ ನಿಜವಾದ ‘ಬೆಲೆ’ ಏನೆಂಬುದು ಈಗ ಮನೋಜ್‌ಗಿಂತ ಚೆನ್ನಾಗಿ ಮತ್ಯಾರಿಗೂ ಗೊತ್ತಿರಲಿಕ್ಕಿಲ್ಲ!





Leave a comment