ಜಮ್ಮು / ಕಿಶ್ವಾರ: ಜಮ್ಮು ಮತ್ತು ಕಾಶ್ಮೀರದ ಕಿಶ್ವಾರ ಜಿಲ್ಲೆಯ ದಚನ್ ಅರಣ್ಯ ಪ್ರದೇಶದಲ್ಲಿ ನಾಪತ್ತೆಯಾಗಿದ್ದ ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳ ಗುಂಡೇಟಿನಿಂದ ಜಜ್ಜಲ್ಪಟ್ಟ ಮೃತದೇಹಗಳು ಪತ್ತೆಯಾಗಿವೆ.
ಬುಧವಾರ ಸಂಜೆ ಗುಂಡಿನ ದಾಳಿ ನಡೆದ ಬಳಿಕ ಇಬ್ಬರು ಎಸ್‌ಪಿಒಗಳು ನಾಪತ್ತೆಯಾಗಿದ್ದರು. ರಶ್ಪಾಲ್ ಸಿಂಗ್ (45) ಮತ್ತು ಬಾಬಿ ಚಂದ್ (57) ಎಂದು ಗುರುತಿಸಲಾಗಿದ್ದು, ಈ ಹತ್ಯೆಯ ಹಿಂದೆ ಉಗ್ರರ ಕೈವಾಡವಿರುವ ಶಂಕೆಯನ್ನು ಭದ್ರತಾ ಪಡೆಗಳು ವ್ಯಕ್ತಪಡಿಸಿವೆ.
ಮಾರ್ವಾದ ದೆಹರ್ನಾ ಅರಣ್ಯ ಪ್ರದೇಶದಲ್ಲಿ ಪ್ರಯಾಣಿಸುತ್ತಿದ್ದಾಗ ಗುಂಡಿನ ಸದ್ದು ಕೇಳಿಸಿತ್ತು. ಕೂಡಲೇ ಎಸ್‌ಒಜಿ (SOG) ತಂಡ ಹಾಗೂ ಸ್ಥಳೀಯ ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಗುಂಡೇಟಿನಿಂದ ಗಾಯಗೊಂಡು ಮೃತಪಟ್ಟಿರುವ ಇಬ್ಬರು ಎಸ್‌ಪಿಒಗಳ ಬಳಿಯಿದ್ದ ಸೇವಾ ಶಸ್ತ್ರಾಸ್ತ್ರಗಳು (Service Weapons) ಕೂಡ ನಾಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ. ಘಟನಾ ಸ್ಥಳದಿಂದ ಸುಮಾರು 2 ಕಿ.ಮೀ ದೂರದಲ್ಲಿ ಮೃತದೇಹಗಳು ಪತ್ತೆಯಾಗಿವೆ.
ಉಗ್ರರ ಕೃತ್ಯದ ಶಂಕೆ: ಘಟನಾ ಸ್ಥಳದಲ್ಲಿ ಲಷ್ಕರ್-ಎ-ತೈಬಾ (LeT) ಉಗ್ರರ ನಂಟು ಇರಬಹುದು ಎಂದು ಶಂಕಿಸಲಾಗಿದ್ದು, ವಿದೇಶಿ ಉಗ್ರರು ಸೇರಿದಂತೆ ಮೂವರು ಈ ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ತನಿಖೆ ಮುಂದುವರಿದಿದೆ.
ರಾಜಕೀಯ ನಾಯಕರ ಖಂಡನೆ ಹಾಗೂ ಆಕ್ರೋಶ: ಕಿಶ್ವಾರದ ಬಿಜೆಪಿ ಶಾಸಕಿ ಶಗುನ್ ಪರಿಹಾರ್ ಅವರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಪಾಕಿಸ್ತಾನದ ದುಷ್ಕೃತ್ಯವಿದು ಎಂದು ಆರೋಪಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಒತ್ತಾಯಿಸಿದ್ದಾರೆ.
ಭದ್ರತಾಪಡೆಗಳಿಂದ ಬಿಗಿ ಕಣ್ಗಾವಲು: ಚಳಿಗಾಲ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಉಗ್ರರು ಎತ್ತರದ ಪ್ರದೇಶಗಳಿಂದ ಕೆಳಭಾಗಕ್ಕೆ ನುಸುಳುವ ಸಾಧ್ಯತೆಯಿದ್ದು, ಭದ್ರತಾ ಪಡೆಗಳು ಜಾಗೃತಗೊಂಡಿವೆ. ಓವರ್‌ಗ್ರೌಂಡ್ ವರ್ಕರ್‌ಗಳನ್ನು (OGWs) ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಗುತ್ತಿದೆ.
ಗಡಿಯಾಚೆಗಿನ ಉಗ್ರರ ಸಂಚನ್ನು ವಿಫಲಗೊಳಿಸಲು ಮತ್ತು ಹತ್ಯೆಗೈದ ಉಗ್ರರನ್ನು ಬೇಟೆಯಾಡಲು ಇಡೀ ಪ್ರದೇಶದಲ್ಲಿ ಬೃಹತ್ ಶೋಧ ಮತ್ತು ಕೂಂಬಿಂಗ್ ಕಾರ್ಯಾಚರಣೆ ಮುಂದುವರಿದಿದೆ.





Leave a comment