ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ‘ಕಚ್ಚಾ ಬಾದಾಮ್’ ಡ್ಯಾನ್ಸ್ ರೀಲ್ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದ ಅಂಜಲಿ ಅರೋರಾ, ಮುಂಬರುವ ‘ಮಹಾಕಾವ್ಯ ಶ್ರೀ ರಾಮಾಯಣ ಕಥಾ’ ಚಿತ್ರದಲ್ಲಿ ಸೀತಾ ದೇವಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಟೀಸರ್ ಹಾಗೂ ಟ್ರೇಲರ್ ಬಿಡುಗಡೆಯಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಅವರ ಕ್ರಾಸ್-ಕಾಸ್ಟಿಂಗ್ ಕುರಿತು ತೀವ್ರ ವಿಮರ್ಶೆ ಹಾಗೂ ಟ್ರೋಲ್ ವ್ಯಕ್ತವಾಗಿತ್ತು.
ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಈ ಕುರಿತು ಮೌನ ಮುರಿದ ಅಂಜಲಿ ಅರೋರಾ, ಸಾರ್ವಜನಿಕರ ಟೀಕೆಗಳಿಗೆ ಅತ್ಯಂತ ನಿರುಮ್ಮಳವಾಗಿ ಉತ್ತರಿಸಿದ್ದಾರೆ. “ನನ್ನ ಸೋಶಿಯಲ್ ಮೀಡಿಯಾ ಇಮೇಜ್ ಹಾಗೂ ನನ್ನ ನಟನೆಯನ್ನು ಜನ ಪ್ರತ್ಯೇಕವಾಗಿ ನೋಡಬೇಕು” ಎಂದು ಅವರು ವಿನಂತಿಸಿಕೊಂಡಿದ್ದಾರೆ.
ನರ್ತನ ನನ್ನ ಹವ್ಯಾಸ, ಅದಕ್ಕೆ ನಾಚಿಕೆ ಇಲ್ಲ: ಟ್ರೋಲಿಗರ ಪ್ರಶ್ನೆಗಳಿಗೆ ಉತ್ತರಿಸಿದ ಅಂಜಲಿ, “ಜನರು ನಾನು ಸೋಶಿಯಲ್ ಮೀಡಿಯಾದಲ್ಲಿ ಡ್ಯಾನ್ಸ್ ಮಾಡುತ್ತಿದ್ದೆ, ಹೀಗಾಗಿ ಸೀತಾ ದೇವಿಯ ಪಾತ್ರ ಹೇಗೆ ಮಾಡಲು ಸಾಧ್ಯ ಎಂದು ಪ್ರಶ್ನಿಸುತ್ತಿದ್ದಾರೆ. ನೃತ್ಯ ಮಾಡುವುದು ಪ್ರತಿಯೊಬ್ಬರಿಗೂ ಇಷ್ಟ, ನಟ-ನಟಿಯರೂ ನೃತ್ಯ ಮಾಡುತ್ತಾರೆ. ನೃತ್ಯ ಮಾಡುವುದು ನನ್ನ ಹವ್ಯಾಸ (Hobby), ಅದಕ್ಕೆ ನನಗೇನೂ ನಾಚಿಕೆಯಿಲ್ಲ” ಎಂದು ನೇರವಾಗಿ ಹೇಳಿದ್ದಾರೆ.
ಸಾರ್ವಜನಿಕರಿಗೆ ಜಡ್ಜ್ ಮಾಡುವ ಹಕ್ಕಿದೆ: ಟ್ರೋಲ್‌ಗಳಿಂದ ತಮಗೆ ಯಾವುದೇ ಬೇಸರವಾಗಿಲ್ಲ ಎಂದು ತಿಳಿಸಿದ ನಟಿ, “ನಾವು ಸಾರ್ವಜನಿಕ ರಂಗದಲ್ಲಿದ್ದೇವೆ. ಜನರಿಗೆ ನಮ್ಮನ್ನು ಪಾಸಿಟಿವ್ ಅಥವಾ ನೆಗಟಿವ್ ಆಗಿ ಜಡ್ಜ್ ಮಾಡುವ ಸಂಪೂರ್ಣ ಹಕ್ಕಿದೆ. ಒಬ್ಬ ನಟಿಯಾಗಿ ನೀಡಿದ ಪಾತ್ರಕ್ಕೆ 100% ಶ್ರಮ ಹಾಕುವುದು ನನ್ನ ಧರ್ಮ. ಸಿನಿಮಾ ನೋಡುವಾಗ ನನ್ನ ವೈಯಕ್ತಿಕ ಜೀವನ ಮತ್ತು ರೀಲ್ಸ್ ಇಮೇಜ್ ಪಕ್ಕಕ್ಕಿಟ್ಟು ಚಿತ್ರವನ್ನು ನೋಡಿ” ಎಂದು ಪ್ರೇಕ್ಷಕರಲ್ಲಿ ಮನವಿ ಮಾಡಿದ್ದಾರೆ.
ಅಭಿಷೇಕ್ ಸಿಂಗ್ ನಿರ್ದೇಶನದ ಈ ಚಿತ್ರದಲ್ಲಿ ದೇವ್ ಶರ್ಮಾ (ಶ್ರೀರಾಮ) ಹಾಗೂ ರಜನೀಶ್ ದುಗ್ಗಲ್ (ರಾವಣ) ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಸೆಪ್ಟೆಂಬರ್ 25 ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.





Leave a comment