Home ಕ್ರೈಂ ನ್ಯೂಸ್ ಇಬ್ಬರು ಯುವಕರೊಂದಿಗೆ ಲಾಡ್ಜ್ ಗೆ ಬಂದಿದ್ದ ಯುವತಿ ಸ್ನಾನಕ್ಕೆ ಬಾತ್ ರೂಂಗೆ ಹೋದಾಗ ಸಾವನ್ನಪ್ಪಲು ಕಾರಣವೇನು? ಎಸ್ಪಿ ಶುಭನ್ವಿತಾ ಹೇಳಿದ್ದೇನು?
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಇಬ್ಬರು ಯುವಕರೊಂದಿಗೆ ಲಾಡ್ಜ್ ಗೆ ಬಂದಿದ್ದ ಯುವತಿ ಸ್ನಾನಕ್ಕೆ ಬಾತ್ ರೂಂಗೆ ಹೋದಾಗ ಸಾವನ್ನಪ್ಪಲು ಕಾರಣವೇನು? ಎಸ್ಪಿ ಶುಭನ್ವಿತಾ ಹೇಳಿದ್ದೇನು?

Share
ಯುವತಿ
Share

ಬೆಂಗಳೂರು: ಸ್ನೇಹಿತರೊಂದಿಗೆ ಪ್ರವಾಸಕ್ಕೆಂದು ಬಂದಿದ್ದ ಬೆಂಗಳೂರು ಮೂಲದ 23 ವರ್ಷದ ಯುವತಿಯೊಬ್ಬರು ಲಾಡ್ಜ್‌ ಒಂದರ ಬಾತ್‌ರೂಮ್‌ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ನಡೆದಿತ್ತು. ಮೃತ ಯುವತಿಯನ್ನು ಬೆಂಗಳೂರು ಮೂಲದ ವರ್ಷಾ (23) ಎಂದು ಗುರುತಿಸಲಾಗಿತ್ತು. ಆದರೆ ಸಾವಿಗೆ ಕಾರಣವೇನಿರಬಹುದು ಎಂದು ಹಾಸನ ಎಸ್ಪಿ ಅವರು ಪ್ರಾಥಮಿಕ ಮಾಹಿತಿ ನೀಡಿದ್ದಾರೆ.

ಘಟನೆಯ ವಿವರ:

ಸೆಪ್ಟೆಂಬರ್ 11ರಂದು ವರ್ಷಾ ತನ್ನ ಸ್ನೇಹಿತರಾದ ರಘು ಹಾಗೂ ದರ್ಶನ್ ಜೊತೆ ಬೆಂಗಳೂರಿನಿಂದ ಸಕಲೇಶಪುರ ಪ್ರವಾಸಕ್ಕೆ ಆಗಮಿಸಿದ್ದರು. ಅವರು ಹೆಟ್ಟೂರು ಹೋಬಳಿಯ ವಲಲಹಳ್ಳಿ ಕುಡಿಗೆ ಗ್ರಾಮದಲ್ಲಿರುವ ಶ್ರೀದೇವಿ ಲಾಡ್ಜ್‌ನಲ್ಲಿ ಕೊಠಡಿ ಪಡೆದು ತಂಗಿದ್ದರು. ವಿವಿಧ ಪ್ರವಾಸಿ ತಾಣಗಳನ್ನು ವೀಕ್ಷಿಸಿದ ಬಳಿಕ, ಸೆಪ್ಟೆಂಬರ್ 15ರಂದು ವರ್ಷಾ ಸ್ನಾನ ಮಾಡಲು ಬಾತ್‌ರೂಮ್‌ಗೆ ತೆರಳಿದ್ದರು.

ಬಹಳ ಹೊತ್ತಾದರೂ ಆಕೆ ಹೊರಗೆ ಬಾರದಿದ್ದಾಗ ಸಂಶಯಗೊಂಡ ಸ್ನೇಹಿತರು ಬಾಗಿಲು ತಟ್ಟಿದ್ದಾರೆ. ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಬಾಗಿಲು ಮುರಿದು ಒಳಪ್ರವೇಶಿಸಿದಾಗ ವರ್ಷಾ ಅಪ್ರಜ್ಞಾನಾವಸ್ಥೆಯಲ್ಲಿ ಕುಸಿದು ಬಿದ್ದಿರುವುದು ಕಂಡುಬಂದಿದೆ. ಕೂಡಲೇ ಆಕೆಯನ್ನು ಹೆಟ್ಟೂರು ಆಸ್ಪತ್ರೆಗೆ ಕರೆದೊಯ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಸಕಲೇಶಪುರ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಆಕೆ ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಎಲ್‌ಪಿಜಿ ಗೀಸರ್ ಗ್ಯಾಸ್ ಸೋರಿಕೆ ಶಂಕೆ:

ಆರಂಭಿಕ ತನಿಖೆಯಲ್ಲಿ ಲಾಡ್ಜ್‌ನ ಬಾತ್‌ರೂಮ್ ಕೇವಲ 3×5 ಅಡಿ ವಿಸ್ತೀರ್ಣ ಹೊಂದಿದ್ದು, ಸೂಕ್ತ ಗಾಳಿ-ಬೆಳಕಿನ ವ್ಯವಸ್ಥೆ ಇರಲಿಲ್ಲ ಎಂಬುದು ತಿಳಿದುಬಂದಿದೆ. ಅಲ್ಲಿ ಅಳವಡಿಸಲಾಗಿದ್ದ ಎಲ್‌ಪಿಜಿ ಗ್ಯಾಸ್ ಗೀಸರ್‌ನಿಂದ ಅಪಾಯಕಾರಿ ಕಾರ್ಬನ್ ಮೊನಾಕ್ಸೈಡ್ ಅನಿಲ ಸೋರಿಕೆಯಾಗಿ, ಉಸಿರುಗಟ್ಟಿ ಸಾವನ್ನಪ್ಪಿರಬಹುದು ಎಂಬ ಬಲವಾದ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಪೊಲೀಸ್ ತನಿಖೆ ಹಾಗೂ ಪೋಷಕರ ದೂರು:

ವಿಷಯ ತಿಳಿದ ತಕ್ಷಣ ಸಕಲೇಶಪುರ ಗ್ರಾಮಾಂತರ ಪೊಲೀಸರು ಹಾಗೂ ಡಿವೈಎಸ್‌ಪಿ ಮಾಲತೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ ಅವರ ಮಾಹಿತಿಯಂತೆ, ಘಟನೆ ಬಗ್ಗೆ ಬೆಂಗಳೂರಿನಲ್ಲಿದ್ದ ಯುವತಿಯ ಪೋಷಕರಿಗೆ ಮಾಹಿತಿ ನೀಡಲಾಗಿದ್ದು, ಅವರು ಸ್ಥಳಕ್ಕೆ ಆಗಮಿಸಿ ಯುಡಿಆರ್ ದೂರು ದಾಖಲಿಸಿದ್ದಾರೆ.

ಮೃತದೇಹದ ಮೇಲೆ ಯಾವುದೇ ಬಾಹ್ಯ ಗಾಯದ ಗುರುತುಗಳು ಕಂಡುಬಂದಿಲ್ಲ. ಮೃತದೇಹವನ್ನು ಹಾಸನದ ಹೆಚ್‌ಐಎಂಎಸ್  ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ವರ್ಷಾ ಅವರ ತಾಯಿ ಲಾಡ್ಜ್ ನಿರ್ವಹಣೆ ಹಾಗೂ ಘಟನೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಪೊಲೀಸರು ಜೊತೆಯಲ್ಲಿದ್ದ ಇಬ್ಬರು ಸ್ನೇಹಿತರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಲಾಡ್ಜ್ ಮಾಲೀಕರ ನಿರ್ಲಕ್ಷ್ಯದ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವ ಸಾಧ್ಯತೆಯಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಸಾವಿಗೆ ನಿಖರ ಕಾರಣ ಏನೆಂಬುದು ಸ್ಪಷ್ಟವಾಗಲಿದೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles