ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ (CBI) ಎಫ್‌ಐಆರ್ ದಾಖಲಿಸಿಕೊಂಡು ತನಿಖೆಯನ್ನು ತೀವ್ರಗೊಳಿಸಿದೆ. ಮುಂಬೈ ಹೈಕೋರ್ಟ್ ನೀಡಿದ ಕಟ್ಟುನಿಟ್ಟಿನ ನಿರ್ದೇಶನದ ಬೆನ್ನಲ್ಲೇ ಸಿಬಿಐ ಈ ಪ್ರಮುಖ ಕ್ರಮ ಕೈಗೊಂಡಿದೆ.
ದಿಶಾ ಸಾಲಿಯಾನ್ ಸಾವಿನ ಪ್ರಕರಣದಲ್ಲಿ ಕ್ರಿಮಿನಲ್ ಸಂಚು, ಸಾಕ್ಷ್ಯ ನಾಶ, ನಕಲಿ ಆತ್ಮಹತ್ಯೆ ಕಥೆ ಸೃಷ್ಟಿ ಹಾಗೂ ಪುರಾವೆಗಳ ತಿದ್ದುಪಡಿ ಆರೋಪಗಳ ಕುರಿತು ತನಿಖೆ ನಡೆಸಲು ಸಿಬಿಐ ಮುಂದಾಗಿದೆ. ಈ ಎಫ್‌ಐಆರ್‌ನಲ್ಲಿ ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ, ಶಿವಸೇನೆ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ, ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್ ಸೇರಿದಂತೆ ಬಾಲಿವುಡ್ ನಟ-ನಟಿಯರಾದ ರಿಯಾ ಚಕ್ರವರ್ತಿ, ಶೋವಿಕ್ ಚಕ್ರವರ್ತಿ, ದಿನೋ ಮೋರಿಯಾ ಮತ್ತು ಸೂರಜ್ ಪಾಂಚೋಲಿ ಅವರ ಹೆಸರುಗಳನ್ನು ಉಲ್ಲೇಖಿಸಲಾಗಿದೆ.
ಇಷ್ಟೇ ಅಲ್ಲದೆ, ಅಂದಿನ ಮುಂಬೈ ಪೊಲೀಸ್ ಕಮಿಷನರ್ ಪರಮ್ ಬೀರ್ ಸಿಂಗ್, ಸಚಿನ್ ವಾಝೆ, ಡಿಸಿಪಿ ವಿಶಾಲ್ ಠಾಕೂರ್, ಮಾಲ್ವಾನಿ ಪೊಲೀಸ್ ಠಾಣೆಯ ಅಧಿಕಾರಿಗಳು, ಕಲಿನಾ ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಹಾಗೂ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರ ಪಾತ್ರದ ಕುರಿತೂ ತನಿಖೆ ನಡೆಯಲಿದೆ.
2020ರ ಜೂನ್ 8 ರಂದು ದಿಶಾ ಸಾಲಿಯಾನ್ ಮುಂಬೈನ ಕಟ್ಟಡವೊಂದರಿಂದ ಬಿದ್ದು ಶಂಕಿತ ರೀತಿಯಲ್ಲಿ ಮೃತಪಟ್ಟಿದ್ದರು. ಈ ಘಟನೆ ನಡೆದ ಕೆಲವೇ ದಿನಗಳಲ್ಲಿ (ಜೂನ್ 14, 2020) ಸುಶಾಂತ್ ಸಿಂಗ್ ರಜಪೂತ್ ಕೂಡ ಶವವಾಗಿ ಪತ್ತೆಯಾಗಿದ್ದರು. ಆರಂಭದಲ್ಲಿ ಮುಂಬೈ ಪೊಲೀಸರು ಇದನ್ನು ಆಕಸ್ಮಿಕ ಸಾವು (ADR) ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ, ದಿಶಾ ಕುಟುಂಬಸ್ಥರು ಕೊಲೆ ಆರೋಪ ಮಾಡಿದ್ದರೂ ಐದು ವರ್ಷಗಳ ಕಾಲ ಮರಣೋತ್ತರ ಪರೀಕ್ಷೆಯ ವರದಿಯನ್ನು ನೀಡದಿರುವುದನ್ನು ಹೈಕೋರ್ಟ್ ಪ್ರಶ್ನಿಸಿ, ಸಿಬಿಐ ತನಿಖೆಗೆ ಆದೇಶಿಸಿತ್ತು.
ದಿಶಾ ಅವರ ತಂದೆ ಸತೀಶ್ ಸಾಲಿಯಾನ್ ಈ ನಿರ್ಧಾರವನ್ನು ಸ್ವಾಗತಿಸಿದ್ದು, ತನಿಖಾ ಸಂಸ್ಥೆಗೆ ಅಗತ್ಯವಿರುವ ಎಲ್ಲಾ ಹೆಸರುಗಳು ಮತ್ತು ವಿವರಗಳನ್ನು ನೀಡಿದ್ದಾರೆ. ಮತ್ತೊಂದೆಡೆ, ಸುಶಾಂತ್ ಸಿಂಗ್ ರಜಪೂತ್ ಅವರ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಕೂಡ ಸಿಬಿಐ ಎಫ್‌ಐಆರ್ ದಾಖಲಿಸಿರುವುದನ್ನು ಸ್ವಾಗತಿಸಿದ್ದು, ಸತ್ಯಕ್ಕೆ ಎಂದಿಗೂ ಜಯ ಸಿಗಲಿದೆ ಎಂದು ಹೇಳಿದ್ದಾರೆ.





Leave a comment