ಆಮ್‌ಸ್ಟರ್‌ಡ್ಯಾಮ್: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಹಿರಿಯ ಹಾಗೂ ದಿಗ್ಗಜ ಬ್ಯಾಟರ್ ಸ್ಟೀವ್ ಸ್ಮಿತ್ ತಮ್ಮ ಟೆಸ್ಟ್ ಕ್ರಿಕೆಟ್ ಭವಿಷ್ಯದ ಕುರಿತು ದೊಡ್ಡ ಮಟ್ಟದ ಅನುಮಾನ ವ್ಯಕ್ತಪಡಿಸಿದ್ದಾರೆ. ಮುಂದಿನ ವರ್ಷ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಪ್ರತಿಷ್ಠಿತ ಆಶಸ್ ಟೆಸ್ಟ್ ಸರಣಿಯಲ್ಲಿ ತಾವು ಆಡುವುದು ಇನ್ನೂ ಖಚಿತವಿಲ್ಲ ಎಂದು ತಿಳಿಸಿರುವ 37 ವರ್ಷದ ಸ್ಮಿತ್, ಪ್ರಸ್ತುತ ಸರಣಿಯಿಂದ ಸರಣಿಗೆ (Series-by-series) ತಮ್ಮ ವೃತ್ತಿಜೀವನವನ್ನು ಮೌಲ್ಯಮಾಪನ ಮಾಡುತ್ತಿರುವುದಾಗಿ ಹೇಳಿದ್ದಾರೆ.
ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, “ನಾನು ಮುಂದಿನ ಆಶಸ್ ಸರಣಿಯ ವೇಳೆಗೆ ತಂಡದಲ್ಲ ಇರುತ್ತೇನೋ ಇಲ್ಲವೋ ನನಗೇ ತಿಳಿದಿಲ್ಲ. ಪ್ರಸ್ತುತ ಪ್ರತಿ ಸರಣಿಯ ಆಧಾರದ ಮೇಲೆ ನನ್ನ ಭವಿಷ್ಯವನ್ನು ನಿರ್ಧರಿಸುತ್ತಿದ್ದೇನೆ. ಕಳೆದ 15 ವರ್ಷಗಳ ನನ್ನ ಕ್ರಿಕೆಟ್ ಪಯಣ ನಿಜಕ್ಕೂ ಅತ್ಯದ್ಭುತವಾಗಿತ್ತು. ನಾನು ಕ್ರಿಕೆಟ್‌ನಲ್ಲಿ ಸಾಕಷ್ಟು ಸಾಧನೆ ಮಾಡಿದ್ದೇನೆ ಮತ್ತು ಇಂದಿಗೂ ಆಟವನ್ನು ಆನಂದಿಸುತ್ತಿದ್ದೇನೆ” ಎಂದು ಹೇಳುವ ಮೂಲಕ ತಮ್ಮ ನಿವೃತ್ತಿಯ ಸುಳಿವು ನೀಡಿದ್ದಾರೆ.
2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಮೇಲಿದೆ ಪ್ರಮುಖ ಗುರಿ:
ಟೆಸ್ಟ್ ಕ್ರಿಕೆಟ್‌ಗಿಂತ ಹೆಚ್ಚಾಗಿ ಚುಟುಕು ಮಾದರಿಯ ಟಿ20 ಕ್ರಿಕೆಟ್‌ನಲ್ಲಿ ಮುಂದುವರಿಯಲು ಸ್ಮಿತ್ ಆಸಕ್ತಿ ತೋರಿಸಿದ್ದಾರೆ. 2028ರಲ್ಲಿ ನಡೆಯಲಿರುವ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆಗೊಂಡಿದ್ದು, ಆಸ್ಟ್ರೇಲಿಯಾ ಪರ ಒಲಿಂಪಿಕ್ಸ್‌ನಲ್ಲಿ ಆಡುವುದು ತಮ್ಮ ಪ್ರಮುಖ ಗುರಿಯಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದೇ ಕಾರಣಕ್ಕಾಗಿ ಅವರು ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್ (ETPL) ನಲ್ಲಿ ಆಮ್‌ಸ್ಟರ್‌ಡ್ಯಾಮ್ ಫ್ಲೇಮ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ದಕ್ಷಿಣ ಆಫ್ರಿಕಾ ಪ್ರವಾಸದ ಸವಾಲು:
ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. 2018ರ ಸ್ಯಾಂಡ್‌ಪೇಪರ್ (ಬಾಲ್ ಟ್ಯಾಂಪರಿಂಗ್) ವಿವಾದದ ಬಳಿಕ ಸ್ಮಿತ್ ದಕ್ಷಿಣ ಆಫ್ರಿಕಾದಲ್ಲಿ ಆಡಲಿರುವ ಮೊದಲ ಟೆಸ್ಟ್ ಸರಣಿ ಇದಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಅದೆಲ್ಲವೂ ಬಹಳ ವರ್ಷಗಳ ಹಿಂದೆ ನಡೆದ ಘಟನೆ. ನನಗೆ ಇದೊಂದು ಸಾಮಾನ್ಯ ಸರಣಿಯಷ್ಟೇ” ಎಂದು ಸ್ಯಾಂಡ್‌ಪೇಪರ್ ವಿವಾದದ ನೆನಪುಗಳನ್ನು ತಳ್ಳಿಹಾಕಿದ್ದಾರೆ.
ಇದುವರೆಗೆ 125 ಟೆಸ್ಟ್ ಪಂದ್ಯಗಳನ್ನು ಆಡಿರುವ ಸ್ಮಿತ್ 37 ಶತಕಗಳನ್ನು ಬಾರಿಸಿದ್ದು, ಪ್ರಸ್ತುತ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ವಿಶ್ವದ 2ನೇ ಅತ್ಯುತ್ತಮ ಬ್ಯಾಟರ್ ಆಗಿ ಮುಂದುವರಿದಿದ್ದಾರೆ.





Leave a comment