ದಾವಣಗೆರೆ: ನಗರದ ಎಂ.ಸಿ.ಸಿ. ಬಿ ಬ್ಲಾಕ್ ನಲ್ಲಿರುವ ಪಾರ್ಕಿನ ಸುಸ್ಥಿಯಲ್ಲಿರುವ ಕಾಂಪೌಂಡ್ ಅನ್ನು ಕೆಡವಿ ಮರು ಕಾಂಪೌಂಡ್ ನಿರ್ಮಾಣ ಮಾಡುವ ನೆಪದಲ್ಲಿ ಸಾರ್ವಜನಿಕರ ಹಣವನ್ನು ತೋಟಗಾರಿಕಾ ಇಲಾಖೆ ಲೂಟಿ ಮಾಡುತ್ತಿದೆ ಎಂದು ಪಾಲಿಕೆ ಮಾಜಿ ವಿಪಕ್ಷ ನಾಯಕ ಪ್ರಸನ್ನ ಕುಮಾರ್ ಆರೋಪಿಸಿದ್ದಾರೆ.
ಕಾಮಗಾರಿಯ ಸ್ಥಳಕ್ಕೆ ಆಗಮಿಸಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವಂತೆ ಒತ್ತಾಯಿಸಿ ಪ್ರತಿಭಟಿಸಿದರು ಹಾಗೂ ತೋಟಗಾರಿಕೆ ಸಚಿವರ ಮನೆಯ ಕೂಗಳತೆಯಲ್ಲೇ ಇರುವ ಪಾರ್ಕಿನ ಗಟ್ಟಿಯಾಗಿರುವ ಕಾಂಪೌಂಡ್ ಅನ್ನು ಹಾಡುಹಗಲೇ ಪುನರ್ನಿರ್ಮಾಣ ಮಾಡುವ ನೆಪದಲ್ಲಿ ಅಧಿಕಾರಿಗಳು ಲೂಟಿ ಮಾಡುತ್ತಿದ್ದಾರೆ. ಈ ಕೂಡಲೇ ಸಚಿವರು ತಮ್ಮದೇ ಇಲಾಖೆಯ ಅಧಿಕಾರಿಗಳು ಅನಗತ್ಯವಾಗಿ ಸುಸಜ್ಜಿತ ಸೈಜ್ ಗಲ್ಲಿನ ಗಟ್ಟಿಮುಟ್ಟಾದ ಕಾಂಪೌಂಡ್ ತೆರವು ಮಾಡುತ್ತಿರುವುದು ಮತ್ತು ಇದಕ್ಕೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ತಾವೂ ಸಹ ಈ ಲೂಟಿಗೆ ಸಹಕರಿಸಿದಂತೆ. ಆದ್ದರಿಂದ ತಕ್ಷಣವೇ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.
ನಗರದಲ್ಲಿನ ಕಾಂಪೌಂಡ್ ಇಲ್ಲದೆ ಒತ್ತುವರಿಯಾಗಿರುವ ಪಾರ್ಕ್ ಗಳು ಕಾಣಲಿಲ್ಲವೇ, ನಿರ್ವಹಣೆ ಇಲ್ಲದೆ ಗಿಡಗಳೇ ಇಲ್ಲದೆ ಪಾಳು ಬಿದ್ದಿರುವ ಪಾರ್ಕ್ ಗಳು ಇಲಾಖೆಯ ಗಮನಕ್ಕೆ ಬರಲಿಲ್ಲವೇ? ತೋಟಗಾರಿಕೆ ಇಲಾಖೆ ಹಸಿರು ಹೆಚ್ಚಾಗುವ ಕಾಮಗಾರಿಯನ್ನು ತೆಗೆದುಕೊಳ್ಳಬೇಕಿತ್ತು. ಬದಲಾಗಿ ಸಾರ್ವಜನಿಕರ ಹಣವನ್ನು ಈ ರೀತಿಯಾಗಿ ಪೋಲು ಮಾಡುತ್ತಿರುವುದು ಖಂಡನೀಯ. ಜಿಲ್ಲಾಸ್ಪತ್ರೆಯ ಕಟ್ಟಡ ದುರಸ್ಥಿ ಸೇರಿದಂತೆ ಒಳಚರಂಡಿ ಸಮಸ್ಯೆ ಕಾಮಗಾರಿಗಳು, ರಸ್ತೆ ಗುಂಡಿಗಳನ್ನು ಸರಿಮಾಡಲು ,ಚರಂಡಿಗಳನ್ನು ದುರಸ್ತಿಗೊಳಿಸಲು ಅನುದಾನವಿಲ್ಲ ಎನ್ನುವ ಅಧಿಕಾರಿಗಳು ಈ ರೀತಿ ಕೋಟ್ಯಂತರ ರೂಪಾಯಿಗಳ ಅನುದಾನವನ್ನು ಲೂಟಿ ಹೊಡೆಯುವ ಕಾಮಗಾರಿಗಳಿಗೆ ಬಳಸುವ ಮೂಲಕ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ದೂರಿದರು.
ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಸುರೇಶ ಗಂಡುಗಾಳೆ ಸಾರ್ವಜನಿಕರ ದೂರಿಗೆ ಸ್ಪಂದಿಸದ ಜಿಲ್ಲಾಡಳಿತವು ಸಚಿವರು ಹಾಗೂ ಸಂಸದರು ಓಡಾಡುವ ಮುಖ್ಯ ರಸ್ತೆಯಲ್ಲೇ ಈ ರೀತಿಯ ಅನುದಾನ ಪೋಲು ಮಾಡುತ್ತಿರುವವರ ವಿರುದ್ಧ ತಕ್ಷಣವೇ ಶಿಕ್ಷೆಯಾಗಬೇಕು. ಇಲ್ಲವಾದಲ್ಲಿ ಇದರ ವಿರುದ್ಧ ಹೋರಾಟ ಮಾಡಬೇಕಾಗುವುದು ಅನಿವಾರ್ಯ ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮಾಜಿ ಸದಸ್ಯ ಗಣೇಶ್ ರಾವ್, ಮುಖಂಡರಾದ ಮಂಜುನಾಥ್ ಸಂಗೀತ, ಕಿರಣ್, ಪದ್ಮನಾಭ ಶೆಟ್ಟಿ, ಲಿಂಗರಾಜ್, ಸೋಹನ್, ರಾಘವೇಂದ್ರ ಹಾಜರಿದ್ದರು.





Leave a comment