SUDDIKSHANA KANNADA NEWS/ DAVANAGERE/ DATE:26-01-2025
ದಾವಣಗೆರೆ: ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಸುವ ಸಂಬಂಧ ಈಗಾಗಲೇ ಸಿಎಂ ಸಿದ್ದರಾಮಯ್ಯರ ಜೊತೆ ಮಾತುಕತೆ ನಡೆಸಲಾಗಿದ್ದು. ಮುಂದಿನ ಬಜೆಟ್ ನಲ್ಲಿ ಸಮ್ಮೇಳನ ಆಯೋಜನೆಗೆ ಅನುದಾನಕ್ಕೂ ಮನವಿ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ವಿಶ್ವ ಕನ್ನಡ ಸಮ್ಮೇಳನಕ್ಕೆ ಅನುದಾನವನ್ನೂ ಬಿಡುಗಡೆ ಮಾಡಲಾಗಿತ್ತು. ಆದ್ರೆ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಈ ಬಗ್ಗೆ ಕ್ರಮ ವಹಿಸಿಲ್ಲ ಎಂದು ಹೇಳಿದರು.
ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬದ್ದವಾಗಿದ್ದು ಉತ್ತಮ ಕೆಲಸ ಕಾರ್ಯ ಮಾಡಲಾಗುತ್ತಿದೆ.ಸರ್ಕಾರದ ಐದು ಗ್ಯಾರಂಟಿ ಯೋಜನೆ ಹೆಚ್ಚಿನ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ. ಅದನ್ನು ಹಂತ ಹಂತವಾಗಿ ಸರಿಪಡಿಸುತ್ತಾ ಬರಲಾಗುತ್ತಿದೆ. ಅಕ್ರಮಗಳ ತನಿಖೆ ನಡೆಯುತ್ತಿದೆ. ಒಂದೆಡು ಮೂರು ವಿಚಾರಗಳ ಬಗ್ಗೆ ತನಿಖೆ ಮುಂದುವರಿದಿದ್ದು, ಆಶ್ರಯ ಮನೆಗಳಿಗೆ ಯಾವ ತಾಲ್ಲೂಕಿನಲ್ಲಿ ನಿವೇಶನ ಪಡೆಯಲಾಗಿದೆ. ಯಾರಿಗೆ ಎಷ್ಟು ಪಾಲು ಹೋಗಿದೆ ಎಂಬ ಕುರಿತಂತೆ ಲೋಕಾಯುಕ್ತ ತನಿಖೆ ನಡೆಯುತ್ತಿದೆ ಎಂದರು.
ಜಲಸಿರಿ ಯೋಜನೆಯಡಿ ಕೆಲವೆಡೆ ನೀರು ಬರುತ್ತಿಲ್ಲ, ಆದರೆ ಬಿಲ್ ಬರುತ್ತಿದೆ ಈ ಬಗ್ಗೆ ಕ್ರಮ ವಹಿಸಬೇಕು ಎಂದು ಸಾರ್ವಜನಿಕರು ಕೇಳುತ್ತಿದ್ದಾರೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು ಜಲಸಿರಿ ಕೆಲಸ ನಡೆಯುತ್ತಿದೆ.ಇನ್ನೂ ಸಂಪೂರ್ಣವಾಗಿ ಕೆಲಸ ಮುಗಿದಿಲ್ಲ ಮೀಟರ್ ಅಳವಡಿಕೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸರಿಪಡಿಸಲಾಗುವುದು. ಹಳೇ ದಾವಣಗೆರೆ ಭಾಗದಲ್ಲಿ ಕೆಲಸ ಕಷ್ಟವಾಗುತ್ತದೆ ಆದರೆ ಪೈಪ್ ಲೈನ್ ಕಾರ್ಯ ಮುಗಿದಿದೆ ಕಾಮಗಾರಿಗೆ 600 ಕೋಟಿ ರೂಪಾಯಿ ಅನುದಾನ ತರಲಾಗಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಮಾಜಿ ಸಚಿವ ಹೆಚ್. ಆಂಜನೇಯ, ಮೇಯರ್ ಕೆ. ಚಮನ್ ಸಾಬ್, ದೂಡಾ ಅಧ್ಯಕ್ಷ ದಿನೇಶ್ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ ಮಂಜಪ್ಪ ಮತ್ತಿತರರಿದ್ದರು.