SUDDIKSHANA KANNADA NEWS/ DAVANAGERE/ DATE:23-01-2025
ದಾವಣಗೆರೆ: ಹರಿಹರ ಶಾಸಕ ಬಿ. ಪಿ. ಹರೀಶ್ ಪದೇ ಪದೇ ನಮ್ಮ ಕುಟುಂಬದವರ ಬಗ್ಗೆ ಮಾತನಾಡಿದರೆ ಸುಮ್ಮನಿರಲು ಆಗದು ಎಂದು ಬಿಜೆಪಿ ಯುವ ಮುಖಂಡ ಮಾಡಾಳ್ ಮಲ್ಲಿಕಾರ್ಜನ್ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹರಿಹರ ಶಾಸಕರು ಪದೇ ಪದೇ ನಮ್ಮ ತೇಜೋವಧೆ ಮಾಡುತ್ತಿದ್ದಾರೆ.ನಾವು ನಿಷ್ಠಾವಂತ ಬಿಜೆಪಿ ಕಾರ್ಯಕರ್ತರು. ಚುನಾವಣೆಯಲ್ಲಿ ತದ್ವಿರುದ್ಧವಾಗಿ ಮಾಡಿದ್ದೇವೆ ಎಂದು ಹೇಳಿದ್ದಾರೆ. ಶಾಸಕರು ಎಂದು ಸುಮ್ಮನಿದ್ದೇವೆ. ನಿಮ್ಮ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಯಾಕೆ ಲೀಡ್ ಪಡೆಯಲಿಲ್ಲ ಎಂದು ಪ್ರಶ್ನಿಸಿದರು.
ಡಾ. ಜಿ. ಎಂ. ಸಿದ್ದೇಶ್ವರ ಅವರ ಪತ್ನಿಗೆ ಲೋಕಸಭೆ ಟಿಕೆಟ್ ನೀಡಲಾಗಿತ್ತು. ಕುಟುಂಬದವರಿಗೆ ಟಿಕೆಟ್ ನೀಡಿದ್ದರಿಂದ ವಿರೋಧದ ಅಲೆ ಇತ್ತು. ಸಿದ್ದೇಶ್ವರ ಅವರ ವೈಯಕ್ತಿಕ ದುರ್ನಡತೆಯಿಂದ ಸೋಲು ಅನುಭವಿಸಬೇಕಾಯಿತು ಎಂದು ಹೇಳಿದರು.
ಲೋಕಸಭೆ ಚುನಾವಣೆಯ ಸೋಲನ್ನು ನಮ್ಮ ಮೇಲೆ ಹಾಕಿದರೆ ಹಾಗೆ? ಇಲ್ಲಿಂದ ದೆಹಲಿವರೆಗೆ ನಾವೇ ಸೋಲಿಗೆ ಕಾರಣ ಎಂದು ಬಿಂಬಿಸಿದ್ದಾರೆ. ಇದನ್ನು ಒಪ್ಪುವುದಿಲ್ಲ. ರಾಜಕಾರಣಕ್ಕಾಗಿ ದಾಸ್ಯ ಪದ್ದತಿ ನಮ್ಮದಲ್ಲ. ಇದೇ ರೀತಿಯ ವರ್ತನೆ ಶಾಸಕರು ಮುಂದುವರಿಸಿದರೆ ನಾವು ಸುಮ್ಮನಿರುವುದಿಲ್ಲ ಎಂದು ಸಿಡಿಮಿಡಿಗೊಂಡರು.
ಹರಿಹರ ಶಾಸಕರು ಪದೇ ಪದೇ ಹೊಟ್ಟೆ ಕಿಚ್ವಿನಿಂದ ಲೋಕಾಯುಕ್ತಕ್ಕೆ ದೂರು ನೀಡಿ ನಮ್ಮ ಕುಟುಂಬದ ವಿರುದ್ದ ಪಿತೂರಿ ಮಾಡಿದ್ದಾರೆ. ರಾಜಕಾರಣಕ್ಕಾಗಿ ನಿಮ್ಮಂತ ದುಷ್ಟರನ್ನುಸಹಿಸಲು ಸಾಧ್ಯವಿಲ್ಲ. ಕಾನೂನು ರೀತಿ ಹೋರಾಟ ನಮ್ಮದು. ನಮ್ಮ ತಂದೆಯವರ ಪ್ರಕರಣದಲ್ಲಿ ಕ್ಲೀನ್ ಚಿಟ್ ಸಿಕ್ಕಿದೆ. ನನ್ನ ತಮ್ಮನ ಮೇಲಿನ ಆರೋಪದ ಬಗ್ಗೆ ಯಾವುದೇ ಪುರಾವೆ ಇಲ್ಲ ಎಂದು ಕ್ಲೀನ್ ಚೀಟ್ ನೀಡಿದೆ. ಆದರೆ ಶಾಸಕರು ಮತ್ತೆ ಕ್ಯಾತೆ ತೆಗೆದಿರುವುದು ಖಂಡನೀಯ ಎಂದು ಹೇಳಿದರು.
ಪದೇ ಪದೇ ಶಾಸಕರು ಕಪೋಲಕಲ್ಪಿತ ವಿಚಾರ ಮಾತನಾಡುವುದನ್ನು ಬಿಡಬೇಕು. ಲಂಚ ಪ್ರಕರಣದಲ್ಲಿ ರುಜುವಾತು ಹಾಕಿಸಿರುವುದು ಯಾರು ಎಂಬುದು ನಮಗೆ ಗೊತ್ತು ಎಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ ಮಾಡಾಳ್ ಮಲ್ಲಿಕಾರ್ಜುನ್ ಅವರು, ಉದ್ದಟತನದ ಹೇಳಿಕೆ ನೀಡುವುದನ್ನು ಇಲ್ಲಿಗೆ ನಿಲ್ಲಿಸಿದರೆ ಒಳಿತು. ಇಲ್ಲದಿದ್ದರೆ ಹರಿಹರ ಕ್ಷೇತ್ರದ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಭವಿಷ್ಯ ನುಡಿದರು.
ಒಳ್ಳೆಯ ಮಾತು ಆಡಲಿ. ಅದನ್ನು ಬಿಟ್ಟು ಗಾಳಿಯಲ್ಲಿ ಗುಂಡು ಹೊಡೆಯುವುದು ಬೇಡ. ನಾವು ನಿಷ್ಠಾವಂತ ಕಾರ್ಯಕರ್ತರಾಗಿದ್ದು, ಪಕ್ಷದ ಆಶಯದಂತೆ ಕಾನೂನು ಬದ್ದವಾಗಿ ನಡೆದುಕೊಂಡಿದ್ದೇವೆ. ಪಕ್ಷ ಸಂಘಟನೆ ಮಾಡಿದ್ದೇವೆ. ಈರೀತಿ ನಡವಳಿಕೆ ಶಾಸಕರಿಗೆ ಶೋಭೆ ತರುವುದಿಲ್ಲ. ಇಲ್ಲಿಗೆ ತೊಂದರೆ ಕೊಡುವುದನ್ನು ನಿಲ್ಲಿಸಬೇಕು. ಇಲ್ಲವಾದರೆ ಪರಿಣಾಮ ಸರಿಯಾಗಿರದು ಎಂದು ಎಚ್ಚರಿಸಿದರು.