ರಾಯಚೂರು: ಭಾರತದಲ್ಲಿ ಕೋಮು ಗಲಭೆ ಸೃಷ್ಟಿಸಲು ಮತ್ತು ಅಶಾಂತಿ ವಾತಾವರಣ ನಿರ್ಮಿಸಲು ವಿದೇಶಿ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿದ್ದ ರಾಯಚೂರಿನ 24 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಸ್ಥಳೀಯ ಚಹಾ ಅಂಗಡಿ ಮಾಲೀಕ ಮೊಹಮ್ಮದ್ ಶಾಹಿಲ್ ಎಂದು ಗುರುತಿಸಲಾಗಿದೆ.
ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇರಿಸಿದ್ದ ರಾಯಚೂರು ಪೊಲೀಸರ ‘ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್’ (Social Media Monitoring Cell) ಶಾಹಿಲ್‌ನ ಅನುಮಾನಾಸ್ಪದ ಆನ್‌ಲೈನ್ ಚಟುವಟಿಕೆಗಳನ್ನು ಆಧರಿಸಿ ಈ ಕಾರ್ಯಾಚರಣೆ ನಡೆಸಿದೆ.
ಪಿಸ್ತೂಲ್ ಮತ್ತು ಹಣದ ಆಮಿಷ:
ಪೊಲೀಸ್ ಎಫ್‌ಐಆರ್ ಪ್ರಕಾರ, ಶಾಹಿಲ್ ತನ್ನ ‘sahill_bhaii_’ ಎಂಬ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ‘ರಾಣಾ ಭಾಯ್’ (Rana Bhai) ಎಂಬ ಐಡಿಯೊಂದಿಗೆ ಸಂಪರ್ಕದಲ್ಲಿದ್ದ. ಆರಂಭಿಕ ಸಂಭಾಷಣೆಗಳ ನಂತರ, ಶಾಹಿಲ್ ತನಗೆ ಪಿಸ್ತೂಲ್ ವ್ಯವಸ್ಥೆ ಮಾಡಲು ಕೋರಿದ್ದ. ಇದಕ್ಕೆ ಸ್ಪಂದಿಸಿದ ಹ್ಯಾಂಡ್ಲರ್, ವಾಟ್ಸಾಪ್ ಸಂಖ್ಯೆಯನ್ನು ಹಂಚಿಕೊಂಡು ಸಂಭಾಷಣೆ ಮುಂದುವರಿಸಿದ್ದ.
ಅರಬ್ ದೇಶದಿಂದ ಕಾರ್ಯಾಚರಿಸುತ್ತಿದ್ದಾನೆನ್ನಲಾದ ‘ರಾಣಾ ಭಾಯ್’, ಭಾರತದಲ್ಲಿ ಕೋಮು ದ್ವೇಷ ಹಾಗೂ ಗಲಭೆ ಸೃಷ್ಟಿಸಲು ಶಾಹಿಲ್‌ನನ್ನು ಪ್ರಚೋದಿಸುತ್ತಿದ್ದ ಅಲ್ಲದೆ, ಇದಕ್ಕೆ ಪ್ರತಿಯಾಗಿ ಹಣ ಹಾಗೂ ಪಿಸ್ತೂಲ್ ನೀಡುವುದಾಗಿ ಭರವಸೆ ನೀಡಿದ್ದ.
ಕೋಮು ದ್ವೇಷದ ಪೋಸ್ಟ್‌ಗಳು:
ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಅರುಣಾಂಕ್ಷು ಗಿರಿ ಈ ಕುರಿತು ಮಾಹಿತಿ ನೀಡಿ, “ಆರೋಪಿ ಶಾಹಿಲ್ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಚೋದನಾತ್ಮಕ ಮತ್ತು ದ್ವೇಷಪೂರಿತ ಸಂದೇಶಗಳು, ವೀಡಿಯೊಗಳನ್ನು ಶೇರ್ ಮಾಡುತ್ತಿದ್ದ. ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ವಿಷಯಗಳನ್ನು ಹಂಚಿಕೊಳ್ಳಲಾಗುತ್ತಿತ್ತು” ಎಂದು ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ‘ರಾಣಾ ಭಾಯ್’ ಅಕೌಂಟ್ ಹಿನ್ನೆಲೆ ಹಾಗೂ ಇದರ ಹಿಂದೆ ಇರುವ ಜಾಲದ ಬಗ್ಗೆ ತೀವ್ರ ತನಿಖೆ ನಡೆಸುತ್ತಿದ್ದಾರೆ.





Leave a comment