Home ಕ್ರೈಂ ನ್ಯೂಸ್ ಕೆಲಸ ಕೊಡ್ತೀವಿ ಅಂತ ರಷ್ಯಾಗೆ ಕರೆದೊಯ್ದು ಮಿಲಿಟರಿಗೆ ತಳ್ಳಿದರು! ತೆಲಂಗಾಣದ ನಾಲ್ವರು ಯುವಕರ ಕಣ್ಣೀರ ಕಥೆ
ಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಕೆಲಸ ಕೊಡ್ತೀವಿ ಅಂತ ರಷ್ಯಾಗೆ ಕರೆದೊಯ್ದು ಮಿಲಿಟರಿಗೆ ತಳ್ಳಿದರು! ತೆಲಂಗಾಣದ ನಾಲ್ವರು ಯುವಕರ ಕಣ್ಣೀರ ಕಥೆ

Share
ರಷ್ಯಾ
Share

ಹೈದರಾಬಾದ್ / ನವದೆಹಲಿ: ಉತ್ತಮ ಕೆಲಸ ಮತ್ತು ಭವಿಷ್ಯದ ಕನಸು ಕಾಣುತ್ತಾ ರಷ್ಯಾಗೆ ತೆರಳಿದ್ದ ತೆಲಂಗಾಣದ ನಾಲ್ವರು ಯುವಕರು ಈಗ ಅಲ್ಲಿನ ಯುದ್ಧ ಪೀಡಿತ ಮಿಲಿಟರಿ ಕ್ಯಾಂಪ್‌ನಲ್ಲಿ ಸಿಲುಕಿಕೊಂಡು ಪರದಾಡುತ್ತಿದ್ದಾರೆ. ನಾಗರಿಕ (ಸಿವಿಲ್) ಉದ್ಯೋಗ ನೀಡುತ್ತೇವೆ ಎಂದು ನಂಬಿಸಿ, ಕೊನೆಗೆ ಬಲವಂತವಾಗಿ ಶಸ್ತ್ರಾಸ್ತ್ರಗಳನ್ನು ನೀಡಿ ಸೇನಾ ತರಬೇತಿಗೆ ತಳ್ಳಲಾಗಿದೆ ಎಂದು ಅವರ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.

ಏನಿದು ಘಟನೆ?

ತೆಲಂಗಾಣದ ನಿಜಾಮಾಬಾದ್ ಮತ್ತು ಕಾಮರೆಡ್ಡಿ ಜಿಲ್ಲೆಯ ಮೊಹಮ್ಮದ್ ಅಫ್ಜಲ್ ಖಾನ್, ಭುಕ್ಯಾ ರವೀಂದರ್, ಭುಕ್ಯಾ ಅಶೋಕ್ ಹಾಗೂ ಮೇಗಾವತ್ ಪ್ರಕಾಶ್ ಎಂಬ ನಾಲ್ವರು ಯುವಕರು ಸುಮಾರು 6 ರಿಂದ 7 ತಿಂಗಳ ಹಿಂದೆ ರಷ್ಯಾಗೆ ತೆರಳಿದ್ದರು. ಏಜೆಂಟ್‌ಗಳಿಗೆ ತಲಾ ₹3 ಲಕ್ಷ ಹಣ ನೀಡಿ ಉದ್ಯೋಗ ವೀಸಾ ಪಡೆದುಕೊಂಡಿದ್ದರು. ಆರಂಭದಲ್ಲಿ ಸಾಮಾನ್ಯ ಕೆಲಸ ನೀಡಿದಂತೆ ನಾಟಕವಾಡಿದ್ದ ಏಜೆಂಟರು ಹಾಗೂ ಸ್ಥಳೀಯ ಆಡಳಿತ, ನಂತರ ಅವರ ಪಾಸ್‌ಪೋರ್ಟ್‌ಗಳನ್ನು ವಶಪಡಿಸಿಕೊಂಡು ಉಕ್ರೇನ್ ಗಡಿ ಭಾಗದ ದಟ್ಟ ಅರಣ್ಯದಲ್ಲಿದ್ದ ಸೈನಿಕ ಶಿಬಿರಕ್ಕೆ ಕೊಂಡೊಯ್ದಿದ್ದಾರೆ.

ವಿಡಿಯೋ ಸಂದೇಶದಲ್ಲಿ ಕಣ್ಣೀರಿಟ್ಟ ಸಂತ್ರಸ್ತ:

ಕಾಡಿನಲ್ಲಿ ಬಂಧಿಯೋಪಾದಿಯಲ್ಲಿರುವ ಮೊಹಮ್ಮದ್ ಅಫ್ಜಲ್ ಖಾನ್ ಕಳುಹಿಸಿರುವ ವೀಡಿಯೊ ಸಂದೇಶದಲ್ಲಿ, “ನಮಗೆ ಬೇರೆ ಕೆಲಸದ ಭರವಸೆ ನೀಡಿ ಇಲ್ಲಿಗೆ ಕರೆತರಲಾಗಿತ್ತು, ಆದರೆ ಈಗ ಯುದ್ಧ ತರಬೇತಿ ನೀಡುತ್ತಿದ್ದಾರೆ. ನಾವು ಇಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದ್ದಾರೆ. ನಮ್ಮನ್ನು ಹೇಗಾದರೂ ಮಾಡಿ ತಾಯ್ನಾಡಿಗೆ ಕರೆಸಿಕೊಳ್ಳಿ” ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ತೆಲಂಗಾಣ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಕುಟುಂಬಸ್ಥರ ಕಣ್ಣೀರು ಮತ್ತು ಸರ್ಕಾರದ ನೆರವು:

ಬಂಧನಕ್ಕೊಳಗಾಗಿರುವವರ ಕುಟುಂಬಸ್ಥರು ಹೈದರಾಬಾದ್‌ನ ‘ಪ್ರವಾಸಿ ಪ್ರಜಾವಾಣಿ’ಗೆ (NRI Grievance Cell) ಭೇಟಿ ನೀಡಿ ನೆರವಿಗೆ ಅಳಲು ತೋಡಿಕೊಂಡಿದ್ದಾರೆ. ಈ ವಿಷಯವಾಗಿ ವಿದೇಶಾಂಗ ಸಚಿವಾಲಯ (MEA) ಹಾಗೂ ಮಾಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಮಾತುಕತೆ ನಡೆಸಿ ಯುವಕರನ್ನು ಸುರಕ್ಷಿತವಾಗಿ ಭಾರತಕ್ಕೆ ವಾಪಸ್ ಕರೆತರಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ.

Share

Leave a comment

Leave a Reply

Your email address will not be published. Required fields are marked *

Related Articles