ಡಾ ಲಾಟ್ (ವಿಯೆಟ್ನಾಂ): ಉದ್ಯೋಗ ಹಾಗೂ ಜೀವನಾಧಾರಕ್ಕಾಗಿ ವಿಯೆಟ್ನಾಂಗೆ ತೆರಳಿದ್ದ ಭಾರತದ ಇಬ್ಬರು ಯೋಗ ತರಬೇತುದಾರರು ರಸ್ತೆ ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ವಿಯೆಟ್ನಾಂನ ಡಾ ಲಾಟ್ (Da Lat) ನಗರದಲ್ಲಿ ನಡೆದಿದೆ.
ಜಾರ್ಖಂಡ್ ಮೂಲದ ರಾಜಾ ಕುಮಾರ್ ವರ್ಮಾ (26) ಮತ್ತು ವಿನಯ್ ಯಾದವ್ (23) ಮೃತಪಟ್ಟ ದುರ್ದೈವಿಗಳು.
ಅಪಘಾತ ಸಂಭವಿಸಿದ್ದು ಹೇಗೆ?
ಸೆಪ್ಟೆಂಬರ್ 25ರಂದು ಯೋಗ ತರಗತಿಗಳನ್ನು ಮುಗಿಸಿ ದ್ವಿಚಕ್ರ ವಾಹನದಲ್ಲಿ ಹಿಂತಿರುಗುತ್ತಿದ್ದಾಗ, ಮಳೆಯಿಂದಾಗಿ ರಸ್ತೆ ಜಾರುತ್ತಿತ್ತು. ಈ ವೇಳೆ ನಿಯಂತ್ರಣ ತಪ್ಪಿದ ಬೈಕ್ ಎದುರಿನ ಲೇನ್‌ಗೆ ಚಲಿಸಿ, ಎದುರಿನಿಂದ ಬರುತ್ತಿದ್ದ ಕಾರಿಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ರಾಜಾ ಕುಮಾರ್ ವರ್ಮಾ ಸ್ಥಳದಲ್ಲೇ ಕೊನೆಯುಸಿರೆಳೆದರೆ, ತೀವ್ರವಾಗಿ ಗಾಯಗೊಂಡಿದ್ದ ವಿನಯ್ ಯಾದವ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಎರಡು ದಿನಗಳ ನಂತರ ಅಂದರೆ ಸೆಪ್ಟೆಂಬರ್ 27ರಂದು ಕೊನೆಯುಸಿರೆಳೆದಿದ್ದಾರೆ.
ಕುಟುಂಬಕ್ಕೆ ಆಸರೆಯಾಗಿದ್ದ ಯುವಕರು:
ರಾಂಚಿ ಮೂಲದ ರಾಜಾ ಕುಮಾರ್ ವರ್ಮಾ ಹಾಗೂ ಜಮ್‌ಶೆಡ್‌ಪುರದ ವಿನಯ್ ಯಾದವ್ ಕಳೆದ ಎರಡು ವರ್ಷಗಳಿಂದ ವಿಯೆಟ್ನಾಂನಲ್ಲಿ ಯೋಗ ತರಬೇತುದಾರರಾಗಿ ಕೆಲಸ ಮಾಡುತ್ತಿದ್ದರು. ಬಡ ಕುಟುಂಬದ ಹಿನ್ನೆಲೆಯುಳ್ಳ ಈ ಇಬ್ಬರೂ ಯುವಕರು ವಿದೇಶದಲ್ಲಿ ಸಂಪಾದಿಸಿ ತಾಯ್ನಾಡಿನಲ್ಲಿದ್ದ ತಮ್ಮ ಕುಟುಂಬಕ್ಕೆ ಆರ್ಥಿಕ ಆಸರೆಯಾಗಿದ್ದರು.
ಮೃತದೇಹ ತರಲು ಕುಟುಂಬಸ್ಥರ ಪರದಾಟ:
ಮೃತರ ಭೌತಿಕ ಶರೀರವನ್ನು ಭಾರತಕ್ಕೆ ತರಲು ಕುಟುಂಬಸ್ಥರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಮೃತದೇಹವನ್ನು ರಾಂಚಿಗೆ ತರಲು ಸುಮಾರು ₹20 ಲಕ್ಷ ವೆಚ್ಚವಾಗಲಿದ್ದು, ರಾಜ್ಯಸಭಾ ಸಂಸದೆ ಮಹುವಾ ಮಾಜಿ ಹಾಗೂ ಸ್ಥಳೀಯ ಆಡಳಿತದ ಬಳಿ ಕುಟುಂಬಸ್ಥರು ನೆರವಿಗೆ ಮನವಿ ಮಾಡಿದ್ದಾರೆ. ಜಾರ್ಖಂಡ್ ಸರ್ಕಾರವು ವಲಸೆ ಕಾರ್ಮಿಕರ ನಿಯಮಾವಳಿ ಪ್ರಕಾರ ಕುಟುಂಬಕ್ಕೆ ₹5 ಲಕ್ಷ ಪರಿಹಾರ ಹಾಗೂ ಮೃತದೇಹಗಳನ್ನು ಭಾರತಕ್ಕೆ ತರಲು ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದೆ.





Leave a comment