SUDDIKSHANA KANNADA NEWS/ DAVANAGERE/ DATE:11-01-2025
ಶಿವಮೊಗ್ಗ: ಪಬ್ಲಿಕ್ ಟಿವಿಯ ಶಿವಮೊಗ್ಗ ವರದಿಗಾರ ಶಶಿಧರ್ ಅವರು ವಿಧಿವಶವಾಗಿದ್ದಾರೆ. ಈಟಿವಿಯಲ್ಲಿ ಬಿಜಾಪುರ ವರದಿಗಾರರಾಗಿ ಸೇವೆ ಸಲ್ಲಿಸಿದ್ದ ಅವರು, ಸುವರ್ಣ ಟಿವಿಯಲ್ಲಿಯೂ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದರು. ಕಳೆದ ಆರು ವರ್ಷಗಳಿಂದ ಶಿವಮೊಗ್ಗ ಜಿಲ್ಲೆಯ ಪಬ್ಲಿಕ್ ಟಿವಿ ವರದಿಗಾರರಾಗಿದ್ದರು.
ಚಿಕ್ಕಮಗಳೂರು ಜಿಲ್ಲೆಯ ಅರಸೀಕೆರೆ ತಾಲೂಕಿನ ಕಡೂರು ಸಮೀಪದ ಕಲ್ಲಳ್ಳಿ ಗ್ರಾಮದ ಶಶಿ ಅವರು 2006ರಲ್ಲಿ ಪತ್ರಿಕೋದ್ಯಮ ಎಂಎ ಅಭ್ಯಾಸ ಮಾಡಿದ್ದರು. ಹೊಸಂತಪ್ಪ ಹಾಗೂ ಸಾವಿತ್ರಮ್ಮ ದಂಪತಿ ಹಿರಿಯ ಪುತ್ರರು. ಹೈಸ್ಕೂಲ್ ಶಿಕ್ಷಣವನ್ನು ಅರಸೀಕೆರೆಯಲ್ಲಿ ಪೂರ್ಣಗೊಳಿಸಿದ್ದರು.
ವಿಜಯಪುರ ಜಿಲ್ಲೆಯಲ್ಲಿ ಈಟಿವಿ ವರದಿಗಾರರಾಗಿ, ಚಾಮರಾಜನಗರದಲ್ಲಿ ಸುವರ್ಣ ಟಿವಿಯ ವರದಿಗಾರರಾಗಿ ಕೆಲಸ ಮಾಡಿದ್ದರು. ಶಿವಮೊಗ್ಗಕ್ಕೆ ವರ್ಗಾವಣೆಯಾಗಿ ಬಂದ ಬಳಿಕ ಶಶಿ ಅವರಿಗೆ ಕಿಡ್ನಿ ಸಮಸ್ಯೆ ಎದುರಾಗಿತ್ತು. ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದರೂ ಕೆಲಸದಲ್ಲಿ ಮಾತ್ರ ಎಂದಿಗೂ ಹಿಂದೆ ಉಳಿದವರಲ್ಲ. ಅತ್ಯುತ್ತಮವಾಗಿ ಕೆಲಸ ನಿರ್ವಹಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದರು.
ಶಶಿಧರ್ ಅವರ ಅಕಾಲಿಕ ಮರಣಕ್ಕೆ ಪತ್ರಕರ್ತರ ಸಂಘಟನೆಗಳು, ಪತ್ರಕರ್ತರು, ಹಿತೈಷಿಗಳು, ಸ್ನೇಹಿತರು ಕಂಬಿನಿ ಮಿಡಿದಿದ್ದಾರೆ. ಜನವರಿ 12ರ ನಾಳೆ ಹುಟ್ಟೂರಿನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.
ಶಿವಮೊಗ್ಗದ ನಿವಾಸದಲ್ಲಿ ಇಂದು ಬೆಳಿಗ್ಗೆ ಬಾತ್ ರೂಂ ಗೆ ಹೋಗಿದ್ದಾಗ ಆಕಸ್ಮಿಕವಾಗಿ ಶಶಿಧರ್ ಹಿಮ್ಮುಖವಾಗಿ ಕುಸಿದು ಬಿದ್ದ ಪರಿಣಾಮ ತಲೆಗೆ ಹೊಡೆತ ಬಿದ್ದಿತ್ತು. ಮನೆಯಲ್ಲಿ ಯಾರೂ ಇಲ್ಲದ ಕಾರಣ ವಿಷಯ ಯಾರಿಗೂ ಗೊತ್ತಾಗಿರಲಿಲ್ಲ. ತಲೆಗೆ ಪೆಟ್ಟು ಬಿದ್ದು ರಕ್ತ ಹೆಪ್ಪುಗಟ್ಟಿತ್ತು. ಶಶಿಧರ್ ಅವರನ್ನು ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸುವ ಹೊತ್ತಿಗೆ ಕಾಲ ಮಿಂಚಿಹೋಗಿತ್ತು. ವೈದ್ಯರು ಚಿಕಿತ್ಸೆ ನೀಡಲು ಮುಂದಾಗುತ್ತಿದ್ದಂತೆ ಅಷ್ಟೊತ್ತಿಗೆ ಉಸಿರು ಚೆಲ್ಲಿದ್ದರು.
ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಶಿವಮೊಗ್ಗದ ಪತ್ರಕರ್ತರು ಶಶಿಯವರನ್ನು ಮಾತನಾಡಿಸಿ ಧೈರ್ಯ ತುಂಬಿದ್ದರು. ಈ ಸಂದರ್ಭದಲ್ಲಿ ಅವರ ಕಣ್ಣಾಲೆಗಳು ಒದ್ದೆಯಾಗಿದ್ದವು. ಬದುಕುವ ಧೈರ್ಯವನ್ನು ಅವರು ಕಳೆದುಕೊಂಡಂತೆ ಭಾಸವಾಗಿತ್ತು. ಶಶಿ ಸಾವಿಗೆ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಹಾಗೂ ಕರ್ನಾಟಕ ಕಾರ್ಯ. ನಿರತ ಪತ್ರಕರ್ತರ ಸಂಘ ಶಿವಮೊಗ್ಗ ಶಾಖೆಯು ಸಂತಾಪ ಸೂಚಿಸಿದೆ.