Home ದಾವಣಗೆರೆ ಮಾನವಕುಲದ ಸೇವೆಗಾಗಿ ಸಂಶೋಧನೆ ನಡೆಸಿ: ಉದಯೋನ್ಮುಖ ವಿಜ್ಞಾನಿಗಳಿಗೆ ಡಾ. ಬದ್ರಿನಾಥ ದುಬೇ ಕರೆ
ದಾವಣಗೆರೆನವದೆಹಲಿಬೆಂಗಳೂರು

ಮಾನವಕುಲದ ಸೇವೆಗಾಗಿ ಸಂಶೋಧನೆ ನಡೆಸಿ: ಉದಯೋನ್ಮುಖ ವಿಜ್ಞಾನಿಗಳಿಗೆ ಡಾ. ಬದ್ರಿನಾಥ ದುಬೇ ಕರೆ

Share
ಸಂಶೋಧನೆ
Share
ದಾವಣಗೆರೆ : ಇಲ್ಲಿನ ಜಿಎಂ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗವು “ಜಿಎಂ ವೈಜ್ಞಾನಿಕ ನವೋದ್ಯಮ ಮತ್ತು ಸಂಶೋಧನಾ ಎಲ್‌ಎಲ್‌ಪಿ” ಸಹಯೋಗದಲ್ಲಿ “ಬಯೋವಿಷನ್–2026”: ಹವಾಮಾನ ಸ್ಥಿತಿಸ್ಥಾಪಕತೆ, ಆಹಾರ ಭದ್ರತೆ ಮತ್ತು ಮಾನವ ಆರೋಗ್ಯಕ್ಕಾಗಿ ಜೈವಿಕ ತಂತ್ರಜ್ಞಾನದಲ್ಲಿನ ನವೋದ್ಯಮಗಳು” ಎಂಬ ವಿಷಯ ಕುರಿತ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವು ಯಶಸ್ವಿಯಾಗಿ ಆರಂಭಗೊಂಡಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಐಐಟಿ ಧಾರವಾಡದ ಬಯೋಸೈನ್ಸಸ್ ಮತ್ತು ಬಯೋಎಂಜಿನಿಯರಿಂಗ್  ವಿಭಾಗದ ಪ್ರಾಧ್ಯಾಪಕರಾದ ಡಾ. ಬದ್ರಿನಾಥ ದುಬೇ ಅವರು ಸಮ್ಮೇಳನವನ್ನು ಉದ್ಘಾಟಿಸಿ ದಿಕ್ಸೂಚಿ ಭಾಷಣ ಮಾಡುತ್ತಾ, ಬಯೋಟೆಕ್ನಾಲಜಿ ಎಂದರೆ ಕೇವಲ ಲ್ಯಾಬೊರೇಟರಿ ಅಥವಾ ಡಿಎನ್‌ಎ ಸೀಕ್ವೆನ್ಸಿಂಗ್‌ಗೆ ಸೀಮಿತವಲ್ಲ. ಕೆಮಿಸ್ಟ್ರಿ, ಫಿಸಿಕ್ಸ್, ಕಂಪ್ಯೂಟೇಶನಲ್ ಬಯಾಲಜಿ ಹಾಗೂ ಇಂಜಿನಿಯರಿಂಗ್‌ಗಳನ್ನು ಒಟ್ಟುಗೂಡಿಸಿ ಬಹುಶಿಸ್ತೀಯ ಸಂಶೋಧನೆ ನಡೆಸುವುದು ಭವಿಷ್ಯದ ದಾರಿಯಾಗಿದೆ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಇಂದಿನ ಯುವ ಸಂಶೋಧಕರು ವೈಜ್ಞಾನಿಕ ಇತಿಹಾಸದಲ್ಲೇ ಅತ್ಯಂತ ರೋಮಾಂಚನಕಾರಿ ಯುಗದಲ್ಲಿದ್ದಾರೆ. ಕೃತಕ ಬುದ್ಧಿಮತ್ತೆ (Artificial Intelligence), ಕ್ರಯೋ-ಇಲೆಕ್ಟ್ರಾನ್ ಮೈಕ್ರೋಸ್ಕೋಪಿ, ಕ್ಷಿಪ್ರ ಜಿನೋಮ್ ಸೀಕ್ವೆನ್ಸಿಂಗ್ ಹಾಗೂ ಪ್ರೋಟೀನ್ ರಚನೆಯನ್ನು ಅಂದಾಜಿಸುವ ಆಲ್ಫಾಫೋಲ್ಡ್ ನಂತಹ ಪ್ರಭಾವಶಾಲಿ ತಂತ್ರಜ್ಞಾನಗಳು ಇಂದು ಉದಯೋನ್ಮುಖ ವಿಜ್ಞಾನಿಗಳಿಗೆ ಸುಲಭವಾಗಿ ಲಭ್ಯವಿವೆ ಎಂದು ಹೇಳಿದರು.
ನಾವು ಮಾಡುವ ಸಂಶೋಧನೆಯು ಸಮಾಜಕ್ಕೆ ಉಪಯುಕ್ತವಾಗಿರಬೇಕು. ಸಂಶೋಧನೆಗೆ ಬಳಸುವ ಹಣವು ತೆರಿಗೆದಾರರ ಹಣದಿಂದ ಬರುವುದರಿಂದ, ಸಮಾಜ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮೂಲಕ ಅದನ್ನು ಸಮಾಜಕ್ಕೆ ಮರಳಿ ನೀಡುವುದು ಪ್ರತಿಯೊಬ್ಬ ವಿಜ್ಞಾನಿಯ ಜವಾಬ್ದಾರಿಯಾಗಿದೆ. ಕೇವಲ ಬುದ್ಧಿವಂತಿಕೆಯಿಂದ ಮಾತ್ರವೇ ದೊಡ್ಡ ಆವಿಷ್ಕಾರಗಳು ಸಾಧ್ಯವಾಗುವುದಿಲ್ಲ; ಜಿಜ್ಞಾಸೆ (Curiosity), ನಿರಂತರ ಪ್ರಯತ್ನ ಹಾಗೂ ಸಮಾಜ ಮತ್ತು ಮಾನವಕುಲಕ್ಕೆ ಸೇವೆಯನ್ನು ಸಲ್ಲಿಸುವ ಮನೋಭಾವದಿಂದ ಉತ್ತಮ ಸಂಶೋಧನೆಗಳು ಹೊರಬರುತ್ತವೆ. ಪ್ರತ್ಯೇಕ ವಿಷಯಗಳ ಗಡಿಗಳನ್ನು ಮೀರಿ, ಹವಾಮಾನ ಸ್ಥಿತಿಸ್ಥಾಪಕತ್ವ (Climate resilience), ಆಹಾರ ಭದ್ರತೆ, ಮಾನವ ಆರೋಗ್ಯ ಮತ್ತು ಆಂಟಿಮೈಕ್ರೋಬಿಯಲ್ ರೆಸಿಸ್ಟೆನ್ಸ್ (AMR) ಸವಾಲುಗಳಿಗೆ ಜೈವಿಕ ತಂತ್ರಜ್ಞಾನದ ನಾವೀನ್ಯತೆಗಳ ಮೂಲಕ ಪರಿಹಾರ ಕಂಡುಕೊಳ್ಳಲು ಒಟ್ಟಾಗಿ ಶ್ರಮಿಸಬೇಕೆಂದು ಯುವ ವಿಜ್ಞಾನಿಗಳಿಗೆ ಕರೆ ನೀಡಿದರು.
ಆಂಟಿಮೈಕ್ರೋಬಿಯಲ್ ರೆಸಿಸ್ಟೆನ್ಸ್ ಎಂದರೆ ಬ್ಯಾಕ್ಟೀರಿಯಾ, ವೈರಸ್, ಶಿಲೀಂಧ್ರ (ಫಂಗಸ್) ಮತ್ತು ಪರಾವಲಂಬಿಗಳಂತಹ ಸೂಕ್ಷ್ಮಾಣುಜೀವಿಗಳು, ಅವುಗಳನ್ನು ಕೊಲ್ಲಲು ಅಥವಾ ನಾಶಪಡಿಸಲು ಬಳಸುವ ಔಷಧಿಗಳಿಗೆ ಬಗ್ಗದೆ, ಎದುರಿಸಿ ಬದುಕುಳಿಯುವ ಸಾಮರ್ಥ್ಯವನ್ನು ಪಡೆದುಕೊಳ್ಳುವುದಾಗಿದೆ. ಪ್ರಸ್ತುತ ಜಗತ್ತು ಎದುರಿಸುತ್ತಿರುವ ಅತಿದೊಡ್ಡ ಆರೋಗ್ಯ ಸವಾಲುಗಳಲ್ಲಿ ಆಂಟಿಮೈಕ್ರೋಬಿಯಲ್ ರೆಸಿಸ್ಟೆನ್ಸ್ (Antimicrobial Resistance) ಪ್ರಮುಖವಾಗಿದ್ದು, ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ. ವಾತಾವರಣ ಬದಲಾವಣೆ, ಕೃಷಿ ಉತ್ಪಾದಕತೆ ಕುಸಿತ ಹಾಗೂ ಸಾಂಕ್ರಾಮಿಕ ರೋಗಗಳ ಹೆಚ್ಚಳದಂತಹ ಜಾಗತಿಕ ಸವಾಲುಗಳನ್ನು ಎದುರಿಸಲು ಜೈವಿಕ ತಂತ್ರಜ್ಞಾನ (Biotechnology) ಅತ್ಯಂತ ಪ್ರಮುಖ ಪಾತ್ರ ವಹಿಸಲಿದೆ ಎಂದು ಪ್ರತಿಪಾದಿಸಿದರು.
ಗೌರವ ಅತಿಥಿಗಳಾಗಿದ್ದ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯ, ಹುಬ್ಬಳ್ಳಿಯ ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾದ ಡಾ. ಬಸವರಾಜ ಎಸ್. ಹುನಗುಂದ, ಸಿಆರ್‌ಐಎಸ್‌ಪಿಆರ್ (CRISPR) ತಂತ್ರಜ್ಞಾನ, ಜಿನೋಮ್ ಎಡಿಟಿಂಗ್, ಟಿಶ್ಯೂ ಇಂಜಿನಿಯರಿಂಗ್ ಸೇರಿದಂತೆ ಜೀವಶಾಸ್ತ್ರ (ಬಯೋಸೈನ್ಸ್) ಮತ್ತು ಜೈವಿಕ ತಂತ್ರಜ್ಞಾನ (ಬಯೋಟೆಕ್ನಾಲಜಿ) ಕ್ಷೇತ್ರದಲ್ಲಿನ ಇತ್ತೀಚಿನ ಪ್ರಗತಿಗಳ ಕುರಿತು ವಿವರಿಸಿದರು. 
ವೈಜ್ಞಾನಿಕ ಸಮುದಾಯದಲ್ಲಿ ನಾವೀನ್ಯತೆ (Innovation) ಮತ್ತು ಉದ್ಯಮಶೀಲತೆಯನ್ನು (Entrepreneurship) ಉತ್ತೇಜಿಸುವ ಭಾರತ ಸರ್ಕಾರದ ವಿವಿಧ ಉಪಕ್ರಮಗಳ ಬಗ್ಗೆ ಅವರು ಬೆಳಕು ಚೆಲ್ಲಿದರು.
ಬಯೋಫೌಂಡ್ರೀಸ್, ಬಯೋ-ಎಐ ಹಬ್, ಬಯೋನೆಸ್ಟ್ (BioNEST) ಮತ್ತು ಇತರ ಪೂರಕ ವೇದಿಕೆಗಳಂತಹ ಸೌಲಭ್ಯಗಳನ್ನು ಸಂಶೋಧಕರು ಅತ್ಯುತ್ತಮವಾಗಿ ಬಳಸಿಕೊಳ್ಳಬೇಕೆಂದು ಅವರು ಕರೆ ನೀಡಿದರು. ತಮ್ಮ ದಿಕ್ಸೂಚಿ ಭಾಷಣದಲ್ಲಿ, ಶೈಕ್ಷಣಿಕ ಪರಿಸರವು ವಿದ್ಯಾರ್ಥಿಗಳಲ್ಲಿ ನಾವೀನ್ಯತೆ ಮತ್ತು ಉದ್ಯಮಶೀಲತೆಯನ್ನು ಹೇಗೆ ಪ್ರೋತ್ಸಾಹಿಸುತ್ತದೆ ಎಂಬುದನ್ನು ಅವರು ಎತ್ತಿ ತೋರಿಸಿದರು.

ಕೃಷಿ ಬಯೋಟೆಕ್ನಾಲಜಿ ಮುಖಾಂತರ ರೈತರ ಸಮಸ್ಯೆ ಪರಿಹಾರಕ್ಕೆ ಕರೆ

ಜಿ.ಎಂ. ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎಸ್.ಆರ್. ಶಂಕಪಾಲ್ ಅವರು ಅಧ್ಯಕ್ಷೀಯ ಭಾಷಣ ಮಾಡುತ್ತಾ, ಕೃಷಿ ಕ್ಷೇತ್ರದಲ್ಲಿ ಬೆಳೆಗಳಿಗೆ ಎದುರಾಗುವ ರೋಗಬಾಧೆಗಳನ್ನು ಪತ್ತೆಹಚ್ಚಲು ಮತ್ತು ಸಕಾಲದಲ್ಲಿ ಚಿಕಿತ್ಸೆ ನೀಡಲು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI), ಡ್ರೋನ್, ರೋಬೋಟ್ ಹಾಗೂ ಸೆನ್ಸಾರ್ ತಂತ್ರಜ್ಞಾನಗಳನ್ನು ಬಳಸಿ “ಪ್ಲಾಂಟ್ ಡಾಕ್ಟರ್” (Plant Doctor) ಪರಿಕಲ್ಪನೆಯನ್ನು ರೂಪಿಸಲು ಬಯೋಟೆಕ್ನಾಲಜಿ ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಕರೆ ನೀಡಿದರು.
ಪ್ರಸ್ತುತ ಬೆಳೆ ಇಳುವರಿ ಕೇವಲ 40%-45% ಮಾತ್ರ ಲಭ್ಯವಾಗುತ್ತಿದ್ದು, ಅದನ್ನು 75%-80% ಗೆ ಹೆಚ್ಚಿಸಲು ಸೂಕ್ತ ಜೈವಿಕ ಪರಿಹಾರಗಳನ್ನು ಕಂಡುಕೊಳ್ಳುವುದು ಅಗತ್ಯವಾಗಿದೆ. ಸಂಶೋಧನೆಯು ಕೇವಲ ಪ್ರಬಂಧ ಪ್ರಕಟಣೆಗೆ ಸೀಮಿತವಾಗದೆ, ರೈತರ ನೈಜ ಸಮಸ್ಯೆಗಳನ್ನು ಬಗೆಹರಿಸಲು ಬಳಕೆಯಾಗಬೇಕು ಎಂದರು.
ಎಲ್ ನಿನೋ ಪರಿಣಾಮ ಹಾಗೂ ಮಳೆಯಭಾವದಿಂದಾಗಿ ರಾಜ್ಯಾದ್ಯಂತ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಕನಿಷ್ಠ 2-3 ತಿಂಗಳು ಮಳೆಯಾಗದಿದ್ದರೂ ಬೆಳೆಗಳನ್ನು ಉಳಿಸಿಕೊಳ್ಳಬಲ್ಲ ‘ಹವಾಮಾನ ಸ್ಥಿತಿಸ್ಥಾಪಕ’ (Climate resilient) ತಂತ್ರಜ್ಞಾನಗಳನ್ನು ಜೈವಿಕ ತಂತ್ರಜ್ಞರು ಅಭಿವೃದ್ಧಿಪಡಿಸುವ ತುರ್ತು ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಕೀಟನಾಶಕಗಳು ಹಾಗೂ ರಾಸಾಯನಿಕಗಳ ಅತಿಯಾದ ಬಳಕೆಯಿಂದ ಹಣ್ಣು-ಹಂಪಲುಗಳು ಕಲುಷಿತಗೊಳ್ಳುತ್ತಿದ್ದು, ಇದಕ್ಕೆ ಪರ್ಯಾಯವಾಗಿ ಸುರಕ್ಷಿತ ಜೈವಿಕ ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು ಕಂಡುಕೊಳ್ಳಲು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ಪ್ರಕಾಶ್ ಕೆ.ಕೆ ಪ್ರಾಸ್ತವಿಕವಾಗಿ ಮಾತನಾಡಿ, ಜೈವಿಕ ತಂತ್ರಜ್ಞಾನ ಕ್ಷೇತ್ರದ ಸಂಶೋಧಕರು, ಪ್ರೊಫೆಸರ್‌ಗಳು, ಉದ್ಯಮ ತಜ್ಞರು, ವಿಜ್ಞಾನಿಗಳು ಹಾಗೂ ವಿದ್ಯಾರ್ಥಿಗಳನ್ನು ಒಂದೇ ವೇದಿಕೆಗೆ ತಂದು, ಜ್ಞಾನ ವಿನಿಮಯ ಮತ್ತು ಸಮಾಜಕ್ಕೆ ಉಪಯುಕ್ತವಾದ ವೈಜ್ಞಾನಿಕ ಪರಿಹಾರಗಳನ್ನು ಕಂಡುಕೊಳ್ಳುವುದು ಈ ಸಮ್ಮೇಳನದ ಪ್ರಮುಖ ಧ್ಯೇಯವಾಗಿದೆ. ದೇಶದ ವಿವಿಧ ಪ್ರಮುಖ ಸಂಸ್ಥೆಗಳಿಂದ ಸಲ್ಲಿಕೆಯಾಗಿರುವ ಒಟ್ಟು 70 ಸಂಶೋಧನಾ ಪ್ರಬಂಧಗಳು ಆಗಸ್ಟ್ 6 ಮತ್ತು 7 ಈ ಎರಡು ದಿನಗಳ ಸಮ್ಮೇಳನದಲ್ಲಿ ಮಂಡನೆ ಆಗಲಿವೆ. ಅಲ್ಲದೇ, ಜೈವಿಕ ತಂತ್ರಜ್ಞಾನ, ಆಹಾರ ವಿಜ್ಞಾನ, ಕೃಷಿ, ಪರಿಸರ ಸುಸ್ಥಿರತೆ, ಬಯೋಮೆಡಿಕಲ್ ವಿಜ್ಞಾನ ಹಾಗೂ ಕೈಗಾರಿಕಾ ಜೈವಿಕ ತಂತ್ರಜ್ಞಾನ ವಿಷಯಗಳ ಕುರಿತು ಮೌಖಿಕ (Oral) ಮತ್ತು ಪೋಸ್ಟರ್ ಪ್ರಸ್ತುತಿಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.
ಸ್ಕೂಲ್ ಆಫ್ ಇಂಜಿನಿಯರಿಂಗ್‌ನ ನಿರ್ದೇಶಕರಾದ ಡಾ. ಪ್ರವೀಣ್ ಜೆ, ಸಂಶೋಧನಾ ಮತ್ತು ನಾವಿನ್ಯತೆಯ ಸಹ ಡೀನ್ ಡಾ. ಸ್ವರೂಪ್ ಕೆ, ಸಂಶೋಧನಾ ಸಲಹೆಗಾರರಾದ ಡಾ. ಸಿ.ಎಸ್. ರಮೇಶ್ ಸೇರಿದಂತೆ ಜಿಎಂ ಶೈಕ್ಷಣಿಕ ಸಂಸ್ಥೆಗಳ ಡೀನ್ ಗಳು, ನಿರ್ದೇಶಕರು, ಮುಖ್ಯಸ್ಥರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಉದ್ಯಮ ತಜ್ಞರು, ವಿಜ್ಞಾನಿಗಳು ಹಾಜರಿದ್ದರು.
ಜಿಎಂಯು ಸ್ಕೂಲ್ ಆಫ್ ಅಪೈಡ್ ಸೈನ್ಸಸ್‌ನ ನಿರ್ದೇಶಕರಾದ ಡಾ. ಗುರುಮೂರ್ತಿ ಹೆಚ್ ಸ್ವಾಗತಿಸಿದರು. ಜೈವಿಕ ತಂತ್ರಜ್ಞಾನ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಪವನ್ ಕೆ.ಜೆ ಮುಖ್ಯ ಅತಿಥಿಗಳ ಪರಿಚಯಿಸಿದರು. ಜೈವಿಕ ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಗಣೇಶ್ ಜಿ. ಟಿಲ್ವೆ ನಿರೂಪಿಸಿದರು. ಜೈವಿಕ ತಂತ್ರಜ್ಞಾನ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಪ್ರದೀಪ್ ಎಂ.ಜೆ ವಂದಿಸಿದರು.
Share

Leave a comment

Leave a Reply

Your email address will not be published. Required fields are marked *

Related Articles