ಹೈದರಾಬಾದ್: ಐಟಿ ಕಾರಿಡಾರ್ ಎಂದೇ ಪ್ರಸಿದ್ಧವಾಗಿರುವ ಗಚ್ಚಿಬೌಲಿಯ ಇಂದಿರಾನಗರದಲ್ಲಿ ದಿನಬೆಳಗಾಗುತ್ತಲೇ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. ಬೆಳಿಗ್ಗೆ ಸುಮಾರು 10.30ರ ವೇಳೆಗೆ ಆಫೀಸ್‌ಗೆ ತೆರಳಲು ಕ್ಯಾಬ್ ಏರ ಹೊರಟಿದ್ದ 24 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಯುವತಿಗೆ ಸ್ಥಳೀಯ ಸೆಕ್ಯುರಿಟಿ ಗಾರ್ಡ್ ಲೈಂಗಿಕ ಕಿರುಕುಳ ನೀಡಿ, ಬಲವಂತವಾಗಿ ಮುತ್ತಿಟ್ಟು ಅನುಚಿತವಾಗಿ ವರ್ತಿಸಿದ್ದಾನೆ.
ಘಟನೆಯ ಪೂರ್ಣ ವಿವರ
ಆಂಧ್ರಪ್ರದೇಶದ ವಿಶಾಖಪಟ್ಟಣಂ ಮೂಲದ ಸಂತ್ರಸ್ತೆ ಗಚ್ಚಿಬೌಲಿಯ ಇಂದಿರಾನಗರದ ಮಹಿಳಾ ಹಾಸ್ಟೆಲ್‌ನಲ್ಲಿ ವಾಸವಾಗಿದ್ದು, ಐಟಿ ಕಂಪನಿಯೊಂದರಲ್ಲಿ ತಂತ್ರಜ್ಞೆಯಾಗಿ ಕೆಲಸ ಮಾಡುತ್ತಿದ್ದಾರೆ. ಆಕೆ ತಾನು ಬುಕ್ ಮಾಡಿದ್ದ ಕ್ಯಾಬ್ ಬಂದ ನಂತರ ಅದನ್ನು ಹತ್ತಲು ಮುಂದಾಗುತ್ತಿದ್ದಂತೆ, ಹತ್ತಿರದ ‘ಸಂತೋಷ್ ಧಾಬಾ’ದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸೆಕ್ಯುರಿಟಿ ಗಾರ್ಡ್ ಆಕೆಯನ್ನು ಹಿಂಬಾಲಿಸಿ ಬಂದಿದ್ದಾನೆ.
ಆಕೆಯನ್ನು ಏಕಾಏಕಿ ಪಕ್ಕಕ್ಕೆ ಎಳೆದ ಗಾರ್ಡ್, ಬಲವಂತವಾಗಿ ಆಕೆಯ ಮುಖ ಹಿಡಿದು ಚುಂಬಿಸಿದ್ದಾನೆ. ಹಠಾತ್ ದಾಳಿಯಿಂದ ಬೆಚ್ಚಿಬಿದ್ದ ಯುವತಿ ತಕ್ಷಣವೇ ಜೋರಾಗಿ ಕೂಗಿಕೊಂಡಿದ್ದಾರೆ. ಆಕೆಯ ಚೀರಾಟ ಕೇಳಿ ಸ್ಥಳೀಯರು ಹಾಗೂ ಕ್ಯಾಬ್ ಚಾಲಕ ತಕ್ಷಣ ಸಹಾಯಕ್ಕೆ ಧಾವಿಸಿ ಬರುವುದನ್ನು ಕಂಡು ಗಾಬರಿಗೊಂಡ ಆರೋಪಿ ಸ್ಥಳದಿಂದ ಓಡಿ ಪರಾರಿಯಾಗಿದ್ದಾನೆ.
ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಬಂಧನ
ಘಟನೆಯಿಂದ ತೀವ್ರ ಆಘಾತಕ್ಕೊಳಗಾದ ಸಂತ್ರಸ್ತೆ ತಕ್ಷಣವೇ ಗಚ್ಚಿಬೌಲಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ (CCTV) ಕ್ಯಾಮೆರಾಗಳ ಫೂಟೇಜ್ ಅನ್ನು ಪರಿಶೀಲಿಸಿದ್ದಾರೆ. ಸಿಸಿಟಿವಿ ಆಧಾರದ ಮೇಲೆ ಆರೋಪಿಯನ್ನು ಜಾರ್ಖಂಡ್ ಮೂಲದ 25 ವರ್ಷದ ರಾಜ್‌ಕುಮಾರ್ ಎಂದು ಗುರುತಿಸಲಾಗಿದ್ದು, ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆತನನ್ನು ಸೆರೆಹಿಡಿದಿದ್ದಾರೆ.
ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಸೂಕ್ತ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ.





Leave a comment