ಪ್ರಯಾಗ್ರಾಜ್: ಮೇಜರ್ ಆದ ಯಾವುದೇ ವ್ಯಕ್ತಿಗೆ ತನ್ನ ಜೀವನಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಮೂಲಭೂತ ಹಕ್ಕಿದೆ ಮತ್ತು ಅವರ ಆಯ್ಕೆಯನ್ನು ಪೋಷಕರಾಗಲಿ ಅಥವಾ ಕುಟುಂಬದ ಇತರ ಸದಸ್ಯರಾಗಲಿ ನಿಯಂತ್ರಿಸಲು ಅಥವಾ ನಿರ್ದೇಶಿಸಲು ಸಾಧ್ಯವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಉತ್ತರ ಪ್ರದೇಶದ ಗಾಜಿಯಾಬಾದ್ ಮೂಲದ 26 ವರ್ಷದ ಸೋನಿಕಾ ಚೌಹಾಣ್ ಅವರನ್ನು ಅವರ ತಂದೆಯ ಕಾನೂನುಬಾಹಿರ ಬಂಧನದಿಂದ ಮುಕ್ತಗೊಳಿಸಿದ ನ್ಯಾಯಾಲಯ, ಆಕೆ ತನ್ನ ಪತಿ ಅಕ್ಬರ್ ಖಾನ್ ಅವರೊಂದಿಗೆ ವಾಸಿಸಲು ಸಂಪೂರ್ಣ ಸ್ವಾತಂತ್ರ್ಯ ನೀಡಿದೆ.
ಪ್ರಕರಣದ ಹಿನ್ನೆಲೆ:
ಸೋನಿಕಾ ಚೌಹಾಣ್ ಅವರು ಅಕ್ಬರ್ ಖಾನ್ ಅವರನ್ನು ಇಷ್ಟಪಟ್ಟು ಮದುವೆಯಾಗಿದ್ದರು. ಆದರೆ, ಈ ಅಂತರಧರ್ಮೀಯ ವಿವಾಹವನ್ನು ವಿರೋಧಿಸಿದ ಆಕೆಯ ತಂದೆ ಲಕ್ಷ್ಮಣ್ ಸಿಂಗ್ ಚೌಹಾಣ್, ಮಗಳನ್ನು ಮನೆಯಲ್ಲಿಯೇ ಬಂದಿಸಿಟ್ಟಿದ್ದರು. ಇದನ್ನು ಪ್ರಶ್ನಿಸಿ ಹೈಕೋರ್ಟ್ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಕೆಯಾಗಿತ್ತು.
ನ್ಯಾಯಾಲಯದ ನಿರ್ದೇಶನದಂತೆ ಪೊಲೀಸರು ಸೋನಿಕಾ ಅವರನ್ನು ಹೈಕೋರ್ಟ್ ಪೀಠದ ಮುಂದೆ ಹಾಜರುಪಡಿಸಿದರು. ವಿಚಾರಣೆ ವೇಳೆ ನ್ಯಾಯಮೂರ್ತಿಗಳೊಂದಿಗೆ ನೇರವಾಗಿ ಮಾತನಾಡಿದ ಸೋನಿಕಾ, “ನಾನು ಪದವೀಧರೆಯಾಗಿದ್ದು, ಯಾವುದೇ ಒತ್ತಡವಿಲ್ಲದೆ ಸ್ವಇಚ್ಛೆಯಿಂದ ಅಕ್ಬರ್ ಖಾನ್ ಅವರನ್ನು ವಿವಾಹವಾಗಿದ್ದೇನೆ. ಪತಿಯೊಂದಿಗೆ ವಾಸಿಸಲು ನಾನು ಬಯಸುತ್ತೇನೆ. ಆದರೆ ನನ್ನ ತಂದೆ ನನ್ನನ್ನು ಬಲವಂತವಾಗಿ ಮನೆಯಲ್ಲಿ ಬಂಧಿಸಿಟ್ಟಿದ್ದರು” ಎಂದು ಹೇಳಿಕೆ ನೀಡಿದರು.
ಇನ್ನೊಂದೆಡೆ, ಆಕೆಯ ತಂದೆ ವಾದ ಮಂಡಿಸಿ, “ನನ್ನ ಮಗಳು ಅಕ್ಬರ್ನ ಬ್ಲ್ಯಾಕ್ಮೇಲ್ ಹಾಗೂ ಒತ್ತಡಕ್ಕೆ ಒಳಗಾಗಿದ್ದಾಳೆ, ಆಕೆ ಸ್ವಇಚ್ಛೆಯಿಂದ ನನ್ನೊಂದಿಗೆ ವಾಸಿಸುತ್ತಿದ್ದಾಳೆ” ಎಂದು ಪ್ರತಿಪಾದಿಸಿದರು.
ಕೋರ್ಟ್ ಹೇಳಿದ್ದೇನು?
ಎರಡೂ ಕಡೆಯ ವಾದ ಆಲಿಸಿದ ಪೀಠವು, ಸೋನಿಕಾ ಅವರು ಯಾವುದೇ ಬೆದರಿಕೆ ಅಥವಾ ಒತ್ತಡಕ್ಕೆ ಒಳಗಾಗಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ತಿಳಿಸಿತು.
“ಭಾರತೀಯ ಸಂವಿಧಾನವು ಪ್ರತಿಯೊಬ್ಬ ವಯಸ್ಕ ನಾಗರಿಕನಿಗೂ ತನ್ನಿಷ್ಟದ ಜೀವನಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕನ್ನು ನೀಡಿದೆ. ಇದು ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಷಯ. ಇದರಲ್ಲಿ ಪೋಷಕರು ಅಥವಾ ಕುಟುಂಬಸ್ಥರು ಹಸ್ತಕ್ಷೇಪ ಮಾಡಲು ಅವಕಾಶವಿಲ್ಲ” ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.
ದಂಪತಿಗಳ ವೈವಾಹಿಕ ಜೀವನದಲ್ಲಿ ಕುಟುಂಬಸ್ಥರು ಯಾವುದೇ ರೀತಿಯ ಅಡಚಣೆ ಉಂಟುಮಾಡಬಾರದು ಎಂದು ಆದೇಶಿಸಿದ ಹೈಕೋರ್ಟ್, ದಂಪತಿಗಳಿಗೆ ಅಗತ್ಯ ರಕ್ಷಣೆ ನೀಡುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದೆ.





Leave a comment