Home ಕ್ರೈಂ ನ್ಯೂಸ್ ಶಾಲೆಯಲ್ಲಿ ಸಹಪಾಠಿಗೆ ‘I Love You’ ಚೀಟಿ ಬರೆದ 4ನೇ ತರಗತಿ ವಿದ್ಯಾರ್ಥಿ: ಶಿಕ್ಷಕಿಯಿಂದ ಹಲ್ಲೆ, ₹25 ಲಕ್ಷಕ್ಕೆ ಬೇಡಿಕೆ ಆರೋಪ!
ಕ್ರೈಂ ನ್ಯೂಸ್ಬೆಂಗಳೂರು

ಶಾಲೆಯಲ್ಲಿ ಸಹಪಾಠಿಗೆ ‘I Love You’ ಚೀಟಿ ಬರೆದ 4ನೇ ತರಗತಿ ವಿದ್ಯಾರ್ಥಿ: ಶಿಕ್ಷಕಿಯಿಂದ ಹಲ್ಲೆ, ₹25 ಲಕ್ಷಕ್ಕೆ ಬೇಡಿಕೆ ಆರೋಪ!

Share
'I Love You
Share

ಅಹಮದಾಬಾದ್ (ಗುಜರಾತ್): ಸಹಪಾಠಿ ಹುಡುಗಿಗೆ ‘ಐ ಲವ್ ಯು’ (I Love You) ಎಂದು ಬರೆದಿದ್ದ ಕಾಗದದ ಚೀಟಿಯನ್ನು ನೀಡಿದ ನಾಲ್ಕನೇ ತರಗತಿಯ 9 ವರ್ಷದ ಬಾಲಕನೋರ್ವನಿಗೆ ಶಿಕ್ಷಕಿ ಮತ್ತು ಪ್ರಿನ್ಸಿಪಾಲ್ ತೀವ್ರವಾಗಿ ಹೊಡೆದು ಹಲ್ಲೆ ನಡೆಸಿದ್ದಾರೆ ಎನ್ನಲಾದ ಘಟನೆ ಗುಜರಾತ್‌ನ ಅಹಮದಾಬಾದ್‌ನ ಬ್ರೈಟ್ ಇಂಗ್ಲಿಷ್ ಶಾಲೆಯಲ್ಲಿ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ರಮೋಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮತ್ತೊಂದೆಡೆ ಶಾಲಾ ಆಡಳಿತ ಮಂಡಳಿಯು ಬಾಲಕನ ಪೋಷಕರ ವಿರುದ್ಧ ₹25 ಲಕ್ಷ ಹಣಕ್ಕೆ ಬೇಡಿಕೆಯಿಟ್ಟು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದೆ.

ಘಟನೆಯ ವಿವರ:

ಸೆಪ್ಟೆಂಬರ್ 19 ರಂದು ತರಗತಿಯಲ್ಲಿದ್ದ ಬಾಲಕನು ಸಹಪಾಠಿ ಹುಡುಗಿಗೆ ‘I Love You’ ಎಂದು ಬರೆದಿದ್ದ ಚೀಟಿಯನ್ನು ಎಸೆದಿದ್ದನು. ಇದರಿಂದ ಅಳತೊಡಗಿದ ಹುಡುಗಿ, ಶಾಲೆಯಲ್ಲಿ ಕೆಲ ಹುಡುಗರಿಂದ ತನಗೆ ಸತತವಾಗಿ ಕಿರುಕುಳವಾಗುತ್ತಿದೆ ಎಂದು ಶಿಕ್ಷಕಿ ಸೀಮಾ ಗೋಸ್ವಾಮಿ ಅವರಿಗೆ ದೂರು ನೀಡಿದ್ದಳು.

ಆರಂಭದಲ್ಲಿ ಶಿಕ್ಷಕಿ ಆ ಚೀಟಿಯನ್ನು ಹರಿದು ಹಾಕಿ ಬಾಲಕನಿಗೆ ಬುದ್ಧಿವಾದ ಹೇಳಿದ್ದರು. ಆದರೆ, ಬಾಲಕಿ ಸಮಾಧಾನಗೊಳ್ಳದಿದ್ದಾಗ ವಿಷಯವನ್ನು ಶಾಲೆಯ ಪ್ರಿನ್ಸಿಪಾಲ್ ಗಮನಕ್ಕೆ ತರಲಾಯಿತು. ಬಳಿಕ ಶಾಲಾ ಆಡಳಿತ ಮಂಡಳಿಯು ಬಾಲಕನ ತಾಯಿಯನ್ನು ಶಾಲೆಗೆ ಕರೆಸಿ ಮಾತುಕತೆ ನಡೆಸಿ ಕಳುಹಿಸಿಕೊಟ್ಟಿತ್ತು.

ಹೊಡೆತದ ಆರೋಪ ಹಾಗೂ ಆಸ್ಪತ್ರೆಗೆ ದಾಖಲು:

ಶಾಲೆಗೆ ಬಂದು ತೆರಳಿದ್ದ ತಾಯಿ, ಸ್ವಲ್ಪ ಸಮಯದ ನಂತರ ಕುಟುಂಬಸ್ಥರೊಂದಿಗೆ ಶಾಲೆಗೆ ಮರಳಿ ಬಂದು, ತಮ್ಮ ಮಗನಿಗೆ ಶಿಕ್ಷಕಿ ಮತ್ತು ಪ್ರಿನ್ಸಿಪಾಲ್ ಸ್ಕೇಲ್‌ನಿಂದ ತೀವ್ರವಾಗಿ ಥಳಿಸಿದ್ದು, ಮೈಮೇಲೆ ಗಾಯಗಳಾಗಿವೆ ಎಂದು ಆರೋಪಿಸಿದರು. ಕೂಡಲೇ ಆಂಬುಲೆನ್ಸ್ ಕರೆಸಿ ಮಗನನ್ನು ಎಲ್‌.ಜಿ. ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆಗೆ ಒಳಪಡಿಸಿದರು. ನಂತರ ರಮೋಲ್ ಪೊಲೀಸ್ ಠಾಣೆಗೆ ತೆರಳಿ ಶಾಲಾ ಸಿಬ್ಬಂದಿ ವಿರುದ್ಧ ದೂರು ನೀಡಿದರು. ಪೊಲೀಸರು ಜೆಜೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

₹25 ಲಕ್ಷ ಹಣಕ್ಕೆ ಬೇಡಿಕೆ – ಶಾಲೆಯ ಪ್ರತಿ-ಆರೋಪ:

ಈ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಹಾಕಿರುವ ಶಾಲೆಯ ಡೈರೆಕ್ಟರ್ ಇಂದ್ರಜಿತ್ ಮೌರ್ಯ, “ಕಚೇರಿಯಿಂದ ಹೊರಡುವಾಗ ಮಗು ಸಂಪೂರ್ಣ ಆರೋಗ್ಯವಾಗಿದ್ದು ಓಡಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಲ್ಲೆ ನಡೆದಿದೆ ಎಂಬುದು ಸುಳ್ಳು” ಎಂದು ಸ್ಪಷ್ಟಪಡಿಸಿದ್ದಾರೆ.

ಇದರ ಜೊತೆಗೆ ಬಾಲಕನ ಕುಟುಂಬಸ್ಥರು ಶಾಲೆಯ ವಿರುದ್ಧ ದೂರು ನೀಡದಿರಲು ಆರಂಭದಲ್ಲಿ ₹25 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆಯಿಟ್ಟಿದ್ದರು, ನಂತರ ಅದನ್ನು ₹5 ಲಕ್ಷಕ್ಕೆ ಇಳಿಸಿ ಬ್ಲ್ಯಾಕ್‌ಮೇಲ್ ಮಾಡಲು ಯತ್ನಿಸಿದರು ಎಂದು ಶಾಲಾ ಆಡಳಿತ ಮಂಡಳಿ ಗಂಭೀರ ಆರೋಪ ಮಾಡಿದೆ. ಶಾಲೆಯು ಮಗುವಿನ ಬೋಧನಾ ಶುಲ್ಕ ಮನ್ನಾ ಮಾಡಲು ಒಪ್ಪಿಕೊಂಡರೂ ಕುಟುಂಬಸ್ಥರು ನಿರಾಕರಿಸಿದ್ದಾರೆ.

ತನಿಖೆಯ ಪಾರದರ್ಶಕತೆಗಾಗಿ ಶಿಕ್ಷಕಿ ಸೀಮಾ ಗೋಸ್ವಾಮಿ ಅವರನ್ನು ಅಮಾನತುಗೊಳಿಸಲಾಗಿದ್ದು, ವೈದ್ಯಕೀಯ ವರದಿಯಲ್ಲಿ ಮಗುವಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂಬುದು ತಿಳಿದುಬಂದಿದೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *