ಲಖನೌ: ಮದರಸಾ ಶಿಕ್ಷಣವು ಭಯೋತ್ಪಾದಕರನ್ನು ಸೃಷ್ಟಿಸುತ್ತದೆ ಎಂಬ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರ ಹೇಳಿಕೆಗೆ ಎಐಎಂಐಎಂ ಅಧ್ಯಕ್ಷ ಹಾಗೂ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಕೇಶವ್ ಮೌರ್ಯ ಅವರ ಕುರ್ಚಿ ಕೇವಲ ಒಂದು ಸ್ಟೂಲ್, ಹಾಗಾಗಿ ಅವರು ಮದ್ರಸಾಗಳ ಮೇಲೆ ದಾಳಿ ಮಾಡುತ್ತಿದ್ದಾರೆ” ಎಂದು ‘X’ ಜಾಲತಾಣದಲ್ಲಿ ವ್ಯಂಗ್ಯವಾಡಿದ್ದಾರೆ.
ರಾಜಕೀಯ ಅಸ್ತಿತ್ವಕ್ಕಾಗಿ ವಿಷಪೂರಿತ ಭಾಷೆ:
ಮದರಸಾಗಳಿಂದಲೇ ಭಾರತ ಹಾಗೂ ವಿಶ್ವದಾದ್ಯಂತ ಭಯೋತ್ಪಾದಕರು ಹುಟ್ಟಿಕೊಳ್ಳುತ್ತಾರೆ ಎಂಬ ಮೌರ್ಯ ಅವರ ಹೇಳಿಕೆಯನ್ನು ಖಂಡಿಸಿದ ಓವೈಸಿ, ರಾಜಕೀಯವಾಗಿ ಅಸ್ತಿತ್ವ ಕಾಯ್ದುಕೊಳ್ಳಲು ಇಂತಹ ವಿಷಪೂರಿತ ಭಾಷೆಯನ್ನು ಬಳಸಲಾಗುತ್ತಿದೆ. ಸಂವಿಧಾನಾತ್ಮಕ ಹುದ್ದೆಯಲ್ಲಿರುವ ವ್ಯಕ್ತಿಗೆ ಇಂತಹ ಹೇಳಿಕೆಗಳು ಶೋಭೆಯಲ್ಲ ಎಂದಿದ್ದಾರೆ.
ಸ್ವಾತಂತ್ರ್ಯ ಹೋರಾಟದಲ್ಲಿ ಮದರಸಾಗಳ ಪಾತ್ರ:
ಮದರಸಾಗಳ ಐತಿಹಾಸಿಕ ಮತ್ತು ಸಾಂವಿಧಾನಿಕ ಪ್ರಾಮುಖ್ಯತೆಯನ್ನು ಎತ್ತಿಹಿಡಿದ ಓವೈಸಿ, ಬ್ರಿಟಿಷರ ವಿರುದ್ಧದ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮದ್ರಸಾಗಳು ಪ್ರಮುಖ ಪಾತ್ರ ವಹಿಸಿದ್ದವು ಎಂದು ಸ್ಮರಿಸಿದರು. “ಬ್ರಿಟಿಷರನ್ನು ಪ್ರೀತಿಸುವವರಿಗೆ ಮದ್ರಸಾಗಳು ಹೇಗೆ ತಾನೆ ಇಷ್ಟವಾಗುತ್ತವೆ? ಸಾವರ್ಕರ್ ಬ್ರಿಟಿಷರಿಗೆ ಕ್ಷಮಾಪಣೆ ಅರ್ಜಿಗಳನ್ನು ಬರೆಯುತ್ತಿದ್ದಾಗ, ಮದ್ರಸಾಗಳು ಸ್ವಾತಂತ್ರ್ಯ ಹೋರಾಟಗಾರರನ್ನು ಸೃಷ್ಟಿಸುತ್ತಿದ್ದವು” ಎಂದು ತಿರುಗೇಟು ನೀಡಿದ್ದಾರೆ.
ಅಲ್ಲದೆ, ಸ್ವತಂತ್ರ ಭಾರತದ ಮೊದಲ ಉಗ್ರಗಾಮಿ ನಾಥೂರಾಮ್ ಗೋಡ್ಸೆ ಯಾವುದೇ ಮದ್ರಸಾದ ವಿದ್ಯಾರ್ಥಿಯಾಗಿರಲಿಲ್ಲ ಎಂದು ಬೆಟ್ಟು ಮಾಡಿದ ಅವರು, ಭಾರತದ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್, ಖ್ಯಾತ ಬರಹಗಾರ ಮುನ್ಷಿ ಪ್ರೇಮ್‌ಚಂದ್ ಮತ್ತು ಸಾಮಾಜಿಕ ಸುಧಾರಕ ರಾಜಾರಾಮ್ ಮೋಹನ್ ರಾಯ್ ಅವರಂತಹ ಮಹನೀಯರು ತಮ್ಮ ಆರಂಭಿಕ ಶಿಕ್ಷಣವನ್ನು ಮದ್ರಸಾ ಹಾಗೂ ಸಾಂಪ್ರದಾಯಿಕ ಸಂಸ್ಥೆಗಳಲ್ಲಿ ಪಡೆದಿದ್ದರು ಎಂಬುದನ್ನು ನೆನಪಿಸಿದರು. ಅಲ್ಪಸಂಖ್ಯಾತ ಸಮುದಾಯಗಳಿಗೆ ತಮ್ಮದೇ ಆದ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಮತ್ತು ನಿರ್ವಹಿಸಲು ಸಂವಿಧಾನದ ವಿಧಿ 30 ಹಕ್ಕು ನೀಡಿದೆ ಎಂದಿದ್ದಾರೆ.
ಮೌರ್ಯ ಅವರ ಹೇಳಿಕೆಗೆ ಸಮಾಜವಾದಿ ಪಕ್ಷ ಹಾಗೂ ಜಮೀಯತ್ ಉಲಮಾ-ಇ-ಹಿಂದ್ ಮುಂತಾದ ಸಂಘಟನೆಗಳೂ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.





Leave a comment