ಇಸ್ಲಾಮಾಬಾದ್: ತೀವ್ರ ಆರ್ಥಿಕ ಸಂಕಷ್ಟ ಹಾಗೂ ಆಂತರಿಕ ಭದ್ರತಾ ಸವಾಲುಗಳನ್ನು ಎದುರಿಸುತ್ತಿರುವ ಪಾಕಿಸ್ತಾನದಲ್ಲಿ, ಇದೀಗ ದೇಶದ ಸೇನಾ ಮುಖ್ಯಸ್ಥ (Army Chief) ಜನರಲ್ ಅಸಿಮ್ ಮುನೀರ್ ಅವರಿಗೆ ಸರ್ಕಾರ ಹೊಸದೊಂದು ವಿಲಕ್ಷಣ ಜವಾಬ್ದಾರಿಯನ್ನು ನೀಡಿದೆ.
ಪಾಕಿಸ್ತಾನದಲ್ಲಿ ಅತ್ಯಂತ ವೇಗವಾಗಿ ಹೆಚ್ಚುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪ್ರಧಾನಿ ಶಹಬಾಜ್ ಷರೀಫ್ ರಚಿಸಿರುವ ಉನ್ನತ ಮಟ್ಟದ ಸಮಿತಿಗೆ ಅಸಿಮ್ ಮುನೀರ್ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ಪಾಕಿಸ್ತಾನದ ಆರೋಗ್ಯ ಸಚಿವ ಸೈಯದ್ ಮುಸ್ತಫಾ ಕಮಾಲ್ ಅವರು ಇತ್ತೀಚೆಗೆ ನಡೆದ ಸೆನೆಟ್ ಸಭೆಯಲ್ಲಿ ಈ ವಿಷಯವನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ.
ಭೀತಿ ಹುಟ್ಟಿಸಿದೆ ಜನಸಂಖ್ಯಾ ಸ್ಫೋಟ:
ಪ್ರಸ್ತುತ 25.9 ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ಪಾಕಿಸ್ತಾನ ಜಗತ್ತಿನ 5ನೇ ಅತಿ ದೊಡ್ಡ ಜನಸಂಖ್ಯೆಯುಳ್ಳ ದೇಶವಾಗಿದೆ. ಇದೇ ವೇಗದಲ್ಲಿ ಜನಸಂಖ್ಯೆ ಬೆಳೆದರೆ 2030ರ ವೇಳೆಗೆ ಇಂಡೋನೇಷ್ಯಾವನ್ನು ಹಿಂದಿಕ್ಕಿ 4ನೇ ಸ್ಥಾನಕ್ಕೇರಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಈಗಾಗಲೇ ಸಾಲದ ಸುಳಿಯಲ್ಲಿ ಸಿಲುಕಿರುವ ಪಾಕಿಸ್ತಾನಕ್ಕೆ ಈ ಜನಸಂಖ್ಯಾ ಸ್ಫೋಟವು ಆರ್ಥಿಕ ಮತ್ತು ಸಾಮಾಜಿಕ ದುರಂತಕ್ಕೆ ಕಾರಣವಾಗಬಹುದು ಎಂದು ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟ್ರೋಲ್:
ಒಂದೆಡೆ ಅಫ್ಘಾನಿಸ್ತಾನ ಗಡಿಯಲ್ಲಿ ಉದ್ವಿಗ್ನತೆ, ಬಲೂಚಿಸ್ತಾನದಲ್ಲಿ ಉಗ್ರರ ದಾಳಿಗೆ 42 ಭದ್ರತಾ ಸಿಬ್ಬಂದಿ ಬಲಿಯಾಗಿರುವುದು ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (PoK) ಆರ್ಥಿಕ ಬಿಕ್ಕಟ್ಟಿನ ವಿರುದ್ಧ ಪ್ರತಿಭಟನೆಗಳು ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ಸೇನಾ ಮುಖ್ಯಸ್ಥರಿಗೆ ಫ್ಯಾಮಿಲಿ ಪ್ಲಾನಿಂಗ್ (ಕುಟುಂಬ ಯೋಜನೆ) ಜವಾಬ್ದಾರಿ ನೀಡಿರುವುದು ಪಾಕ್ ನಾಗರಿಕರ ಹಾಗೂ ಮಾಧ್ಯಮಗಳ ಲೇವಡಿಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ “ಆರ್ಮಿ ಚೀಫ್ ಈಗ ಕಾಂಡೋಮ್ ಹಂಚಬೇಕೇ?” ಎಂದು ನೆಟ್ಟಿಗರು ತೀವ್ರವಾಗಿ ಟ್ರೋಲ್ ಮಾಡುತ್ತಿದ್ದಾರೆ.
ಏನಿದು ಜನಸಂಖ್ಯೆ ಹೆಚ್ಚಳದ ರಹಸ್ಯ?
ಪಾಕಿಸ್ತಾನದಲ್ಲಿ ಗರ್ಭನಿರೋಧಕಗಳ ಲಭ್ಯತೆ ಕೊರತೆಯಿಂದಾಗಿ ವರ್ಷಕ್ಕೆ ಸರಾಸರಿ 67 ಲಕ್ಷ ಮಕ್ಕಳು ಜನಿಸುತ್ತಿದ್ದಾರೆ. ಇದರ ಜೊತೆಗೆ ಪ್ರಸ್ತುತ ಪಾಕಿಸ್ತಾನದಲ್ಲಿ ಪ್ರಾಂತ್ಯಗಳಿಗೆ ಶೇಕಡಾ 80 ರಷ್ಟು ಧನಸಹಾಯವನ್ನು ಜನಸಂಖ್ಯೆಯ ಆಧಾರದ ಮೇಲೆ ನೀಡಲಾಗುತ್ತಿದೆ. ಇದು ಪ್ರಾಂತ್ಯಗಳು ಜನಸಂಖ್ಯೆ ಹೆಚ್ಚಿಸಿಕೊಳ್ಳಲು ಪರೋಕ್ಷವಾಗಿ ಪ್ರೋತ್ಸಾಹ ನೀಡಿದಂತಾಗಿದೆ. ಇದನ್ನು ತಡೆಯಲು ಸರ್ಕಾರಿ ಧನಸಹಾಯದ ಮಿತಿಯನ್ನು ಶೇ. 50 ಕ್ಕಿಂತ ಕಡಿಮೆ ಮಾಡಲು ಆರೋಗ್ಯ ಇಲಾಖೆ ಪ್ರಸ್ತಾಪಿಸಿದೆ. ಪ್ರಸ್ತುತ ಪಾಕಿಸ್ತಾನದ ವಾರ್ಷಿಕ ಜನಸಂಖ್ಯಾ ಬೆಳವಣಿಗೆ ದರ ಶೇ. 2.55 ರಷ್ಟಿದ್ದು, ಇದನ್ನು ತಕ್ಷಣ ನಿಯಂತ್ರಿಸದಿದ್ದರೆ ದೇಶದ ಸಂಪನ್ಮೂಲಗಳು ಸಂಪೂರ್ಣವಾಗಿ ಖಾಲಿಯಾಗಲಿವೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
- Asim Munir
- Balochistan crisis
- Pakistan Army Chief
- Pakistan demographic catastrophe
- Pakistan news in Kannada
- Pakistan population control committee
- Pakistan population growth
- Shehbaz Sharif
- Syed Mustafa Kamal
- ಅಂತರರಾಷ್ಟ್ರೀಯ ಸುದ್ದಿ
- ಅಸಿಮ್ ಮುನೀರ್
- ಪಾಕಿಸ್ತಾನ ಆರ್ಥಿಕ ಬಿಕ್ಕಟ್ಟು
- ಪಾಕಿಸ್ತಾನ ಜನಸಂಖ್ಯೆ ನಿಯಂತ್ರಣ
- ಪಾಕಿಸ್ತಾನ ಸೇನಾ ಮುಖ್ಯಸ್ಥ
- ಬಲೂಚಿಸ್ತಾನ ಗಡಿ ಸಂಘರ್ಷ
- ಮುಸ್ತಫಾ ಕಮಾಲ್
- ಶಹಬಾಜ್ ಷರೀಫ್





Leave a comment