SUDDIKSHANA KANNADA NEWS/ DAVANAGERE/ DATE:22-12-2024
ದಾವಣಗೆರೆ: ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಅವರಿಗೆ ಈಗ ಚನ್ನಗಿರಿಯ ಕಾಂಗ್ರೆಸ್ ಕಾಂಗ್ರೆಸ್ ಮುಖಂಡರೇ ಟಾಂಗ್ ನೀಡಿದ್ದಾರೆ. ಮೊದಲು ಫೋನ್ ಕರೆ ಸ್ವೀಕರಿಸಿ. ಆಮೇಲೆ ಮಾತನಾಡುವಿರಂತೆ. ಶೇಕಡಾ 90ರಷ್ಟು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರ ವಿಶ್ವಾಸ ಕಳೆದುಕೊಂಡಿದ್ದೀರಾ ಎಂದು ಸಂತೇಬೆನ್ನೂರು ಕಾಂಗ್ರೆಸ್ ಮುಖಂಡ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಆಸೀಫ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚನ್ನಗಿರಿ ಶಾಸಕರಿಗೆ ಒಂದು ಸಲಹೆ ಕೊಡಲು ಬಯಸುತ್ತೇನೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ರ ಬಗ್ಗೆ ಮಾತನಾಡುವ ಮೊದಲು ತಾವು ಕ್ಷೇತ್ರದ ಜನತೆಗೆ ಹೇಗೆ ಸ್ಪಂದಿಸುತ್ತಿದ್ದೀರಿ. ನಿಮ್ಮನ್ನು ಗೆಲ್ಲಿಸಿದ ಮತದಾರರು ಮತ್ತು ಮುಖಂಡರಿಗೆ ಹೇಗೆ ಸ್ಪಂದಿಸುತ್ತಿದ್ದೀರಿ ಎನ್ನುವುದನ್ನು ಅರಿತುಕೊಳ್ಳಿ. ಕ್ಷೇತ್ರದಲ್ಲಿ ಗೆದ್ದಾಗಿಂದ ಮನೆ ಮನೆಗೆ ನನ್ನ ಮೊಬೈಲ್ ನಂಬರ್ ಅಂಟಿಸುತ್ತೇನೆ ಎಂದು ಹೇಳಿದ್ದೀರಿ. ಸಾರ್ವಜನಿಕರು ಇರಲಿ, ಮುಖಂಡರು, ಗ್ರಾಮ ಪಂಚಾಯತ್ ಸದಸ್ಯರ ಫೋನ್ ಸಹ ಸ್ವೀಕರಿಸಿದ ನೀವು ಬೇರೆಯವರ ಬಗ್ಗೆ ಮಾತನಾಡುತ್ತಿರುವುದು ನೋಡಿದರೆ ಹಾಸ್ಯಾಸ್ಪದ ಎನಿಸುತ್ತದೆ ಎಂದು ಕಿಡಿಕಾರಿದ್ದಾರೆ.
ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಯಾರೋ ಒಂದಿಬ್ಬರಿಗೆ ಸಹಾಯ ಮಾಡಿದ ವಿಡಿಯೋ, ಫೋಟೋ ಪೇಪರ್ ಅಲ್ಲಿ ಹಾಕಿಸಿ ಸ್ಪಂದಿಸುತ್ತಾ ಇದ್ದೇನೆ ಎಂದು ತೋರ್ಪಪಡಿಕೆ ಮಾಡುತ್ತಾ ಕ್ಷೇತ್ರದಲ್ಲಿ ಕಾರ್ಯಕರ್ತರ ವಿಶ್ವಾಸ ಕಳೆದುಕೊಂಡಿದ್ದೀರಿ ಎಂದು ಹೇಳಿದ್ದಾರೆ.
ಜನರ ಸರ್ವೇ ಮಾಡಿಸಿ ನೋಡಿ. ಇದು ಕೂಡ ದಾಖಲೆ ಆಗುತ್ತೆ. ಎಷ್ಟು ಸಾವಿರ ಜನ ತಮ್ಮ ವಿರುದ್ಧ ಇದ್ದಾರೆ ಎಂದು ತಿಳಿಯುತ್ತೆ. ಸುಮಾರು 25 ವರ್ಷಗಳಿಂದ ಜನರ ಜೊತೆ ಇದ್ದು ಸೇವೆ ಮಾಡುತ್ತಾ ಇರುವ ಹೊದಿಗೆರೆ ರಮೇಶಣ್ಣ ಅವರು ಚುನಾವಣೆ ವೇಳೆ ನಿಮ್ಮ ಪರವಾಗಿ ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗಾಡಿ, ತೊಡೆ ತಟ್ಟಿ ನಿಮ್ಮನ್ನು ಗೆಲ್ಲಿಸುವಲ್ಲಿ ಪ್ರಮುಖ ಕಾರಣಕರ್ತರಾದರು. ಅವರ ವಿಶ್ವಾಸವನ್ನೂ ಕಳೆದುಕೊಂಡಿದ್ದೀರಿ. ಈ ತಾಲೂಕಿನಲ್ಲೇ ಹಿರಿಯ ಕಾಂಗ್ರೆಸ್ಸಿಗ ಮುತ್ಸದ್ದಿ, ಹಿರಿಯ ರಾಜಕಾರಣಿ ಅಮಾನುಲ್ಲಾ ಸಾಹೇಬರ ನಂಬಿಕೆ ಉಳಿಸಿಕೊಂಡಿಲ್ಲ. ನಿವೃತ್ತಿಯ ನಂತರ ಸುಖವಾಗಿ ಇರುವುದನ್ನು ಬಿಟ್ಟು ನಿಮ್ಮ ಬೆನ್ನಿಗೆ ನಿಂತು ಶೋಷಿತ ಸಮುದಾಯದ ಮತಗಳು ನಿಮ್ಮ ಪರವಾಗಿ ಹಾಕಿಸಿದ ವೀರೇಶ್ ನಾಯಕ್ ಅವರ ಸಲಹೆಯನ್ನು ಧಿಕ್ಕರಿಸಿ ವೈರತ್ವ ಬೆಳೆಸಿದ ನಿಮ್ಮ ವರ್ತನೆ ಯೋಚಿಸಿ ಎಂದು ಕಿಡಿಕಾರಿದ್ದಾರೆ.
ವಡ್ನಾಳ್ ರಾಜಣ್ಣ, ಪೆಟ್ರೋಲ್ ಬಂಕ್ ನಾಗರಾಜಣ್ಣ, ಪಾಂಡೋಮಟ್ಟಿ ಲೋಕಣ್ಣ ಸೇರಿದಂತೆ ಹಲವು ನಾಯಕರ ಪಟ್ಟಿ ಕೊಡಬಹುದು. ವಡ್ನಾಳ್ ಜಗದೀಶಣ್ಣ ನಿರಂತರ ಕ್ಷೇತ್ರದ ಜನರ ಜೊತೆ ಸಂಪರ್ಕ ಹೊಂದಿರುವ ಇವರು ಟಿಕೆಟ್ ಸಿಗದೇ ಇದ್ದರೂ ನಿಮ್ಮ ಗೆಲುವಿಗೆ ಸಹಕಾರಿ ಆದರೂ ಅವರ ವಿಶ್ವಾಸ ಉಳಿಸಿಕೊಂಡಿಲ್ಲ. ಮಾನ ಮರ್ಯಾದೆ ಇದ್ದರೆ ಬಿಜೆಪಿಯವರು ನನ್ನ ಮನೆ ಮೆಟ್ಟಿಲು ತುಳೀಬೇಡರಿ ಅಂದಿರಿ. ಅವರನ್ನೇ ಕರೆದು ಕಾಂಟ್ರ್ಯಕ್ಟ್ ಕೊಟ್ಟಿಲ್ವಾ ನೀವು ಸತ್ಯ ಹೇಳಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ, ಅತಿ ಹೆಚ್ಚು ಮತ ಕಾಂಗ್ರೆಸ್ ಗೆ ಬರುವಂತೆ ಮಾಡಿದೆ ಎಂದು ಹೇಳಿದ್ದೀರಿ. ಮುಸ್ಲಿಂ ಸಮಾಜ ಮತ್ತು ಶೋಷಿತ ಸಮುದಾಯಗಳು ನೀವು ಇರಲಿ ಬಿಡಲಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುತ್ತಾ ಬಂದಿದೆ, ಉಳಿದ ಮತದಾರರು ಮತ್ತು ಮುಖಂಡರುಗಳು ಪ್ರಭಾ ಮಲ್ಲಿಕಾರ್ಜುನ್ ಹಾಗೂ ಎಸ್ ಎಸ್ ಮಲ್ಲಿಕಾರ್ಜುನ್ ಅವರ ಆಡಳಿತ ವೈಖರಿಯನ್ನು ಗಮನಿಸಿ ಮತ ನೀಡಿದ್ದಾರೆ. ಶಿಕ್ಷಣ ಸಂಸ್ಥೆ, ಅರೋಗ್ಯ ಇನ್ನುಳಿದ ಹಲವಾರು ರೀತಿ ಸೌಲಭ್ಯ ಪಡೆದು ಜನ ಅವರಿಗೆ ಸ್ವಯಂ ಪ್ರೇರಿತರಾಗಿ ಪಕ್ಷ ಉಳಿಸಬೇಕು ಎಂಬ ಸಂಕಲ್ಪದಿಂದ ಮತ ನೀಡಿದ್ದಾರೆ.
ಅವರು ಎಲ್ಲ ವರ್ಗದವರಿಗೂ ಸ್ಪಂದಿಸುತ್ತಾರೆ ಎಂದು ನಂಬಿಕೆ ಇಟ್ಟು ಸ್ವಯಂ ಪ್ರೇರಿತರಾಗಿ ಪಕ್ಷಾತೀತವಾಗಿ ಈ ಬಾರಿ ಮತ ಚಲಾಯಿಸಿದ್ದಾರೆ. ಚನ್ನಗಿರಿಯಲ್ಲಿ ಅಮನುಲ್ಲಾ, ಹೊದಿಗೆರೆ ರಮೇಶ್, ವಡ್ನಾಳ್ ಜಗದೀಶ್, ಸಂತೇಬೆನ್ನೂರು ಲಿಂಗರಾಜ್, ವೀರೇಶ್ ನಾಯಕ್ ಸೇರಿದಂತೆ
ಬ್ಲಾಕ್ ಅಧ್ಯಕ್ಷರು, ಎಲ್ಲಾ ಸೆಲ್ ನ ಮುಖಂಡರು, ಆಯಾ ಗ್ರಾಮದ ಪಕ್ಷದ ಮುಖಂಡರು ನಾಯಕರು ಕೂಡಾ ತಮ್ಮ ಗೆಲುವಿಗೆ ಹಾಗೂ ಲೋಕಸಭಾ ಅಭ್ಯರ್ಥಿಯ ಗೆಲುವಿಗೆ ಶ್ರಮಪಟ್ಟಿದ್ದಾರೆ ಎಂದು ಹೇಳಿದ್ದಾರೆ.
ತಮ್ಮೊಬ್ಬರಿಂದಲೇ ಮತ ಬಂದಿಲ್ಲ ಎಂಬುದನ್ನು ಅರಿತುಕೊಳ್ಳಿ. ವಡ್ನಾಳ್ ರಾಜಣ್ಣ ಮಾಜಿ ಶಾಸಕರು. ಅವರೂ ಓಡಾಡಿದ್ದಾರೆ. ಉಸ್ತುವಾರಿ ಸಚಿವರ ಜೊತೆ, ಹೊಂದಾಣಿಕೆ ಮಾಡಿಕೊಳ್ಳಿ ಅಂತ ಹೇಳುತ್ತಿಲ್ಲ, ಯಾವ ನಾಯಕರ ಕೃಪಾಕಟಾಕ್ಷದಿಂದ ತಾವು ಆಯ್ಕೆ ಆಗಿದ್ದೀರಿ ಅವರನ್ನು ಗೌರವಿಸಿ. ಅವರ ಮಾರ್ಗದರ್ಶನ ಪಡೆದು ಕ್ಷೇತ್ರದಲ್ಲಿ ಉಳಿದ ಮುಖಂಡರನ್ನು ಗೌರವಿಸುತ್ತಾ ಅವರ ಕರೆಯನ್ನು ಸ್ವೀಕರಿಸಿ ಅವರ ವಾರ್ಡ್ ಗಳ ಸಮಸ್ಯೆಗೆ ಸ್ಪಂದಿಸಿ ಎಲ್ಲಾ ಕಾರ್ಯಕರ್ತರು ಎಷ್ಟು ಬೇಜಾರಾಗಿದ್ದಾರೆ ಅಂತ ನಿಮ್ಮ ಮುಂದಿನ ಚುನಾವಣೆಗಳಲ್ಲಿ ತಿಳಿಯುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.
ಜೆ. ಹೆಚ್. ಪಟೇಲ್ ರಂತಹ ಮಹಾನ್ ನಾಯಕರನ್ನು ಕೊಟ್ಟಂತಹ ಕ್ಷೇತ್ರ ಚನ್ನಗಿರಿ. ಈ ನೆಲದ ಶಾಸಕರಾಗಿ ತಾವು ಅಭಿವೃದ್ಧಿ ಮಾಡಬೇಕೇ ಹೊರತು ಟೀಕೆ ಟಿಪ್ಪಣಿಗಳು ದ್ವೇಷ ಹೊಟ್ಟೆಕಿಚ್ಚು ಕುತಂತ್ರ ಮಾಡುತ್ತಾ ಹೋದರೆ ನಮ್ಮ ಕ್ಷೇತ್ರಕ್ಕೆ ಯಾವ ಅಭಿವೃದ್ಧಿಯಾಗುವುದಿಲ್ಲ ಅಂತ ತಿಳಿದುಕೊಳ್ಳಿ. ಮೊದಲು ನಾಯಕರಿಗೆ ಗೌರವ ಕೊಟ್ಟು ಅನುದಾನವನ್ನು ಬಿಡುಗಡೆ ಮಾಡಿಸಿ ಕ್ಷೇತ್ರದ ಅಭಿವೃದ್ಧಿ ಕಡೆ ಗಮನಕೊಟ್ಟು ಕೆಲಸ ಮಾಡಿ. ಆಮೇಲೆ ಜನಪ್ರಿಯ ಶಾಸಕರು ಅಂತ ಜನಾನೇ ಕರೀತಾರೆ. ಜನರು, ಕಾರ್ಯಕರ್ತರಿಗೆ ಕೆಲಸ ಮಾಡೋದು ಬಿಟ್ಟು ಹೊಂದಾಣಿಕೆ ರಾಜಕಾರಣ ಮಾಡುತ್ತಿರುವುದು ತಾವು ಎಂದು ಆರೋಪಿಸಿದ್ದಾರೆ.
ಮಾತು ಎತ್ತಿದರೆ ರಾಜೀನಾಮೆ ನೀಡುತ್ತೇನೆ ಎಂದು ಹೇಳುತ್ತೀರಾ. ನಿಮಗೇ ನೋವಾಗುತ್ತದೆ. “ಕೊಟ್ಟ ಕುದುರೆ ಏರದವನು ವೀರನೂ ಅಲ್ಲ ಶೂರನೂ ಅಲ್ಲ” ಜನರಲ್ಲಿ ಜನರ ಮಧ್ಯೆ ಇದ್ದು ಉತ್ತಮ ನಾಯಕನಾಗಿ ಕೆಲಸ ಮಾಡಿ ಎಂದು ಆಸೀಫ್ ಅವರು ಸಲಹೆ ನೀಡಿದ್ದಾರೆ.