SUDDIKSHANA KANNADA NEWS/ DAVANAGERE/ DATE:16-12-2024
ದಾವಣಗೆರೆ: ಕೂಡಲಸಂಗಮದ ಪಂಚಮಸಾಲಿ ಸಮಾಜದ ಶ್ರೀಗಳ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡಿದ ಹಿಂದುಳಿದ ವರ್ಗದ ವೇದಿಕೆ ಅಧ್ಯಕ್ಷ ಕೆ.ಎಸ್. ಶಿವರಾಮು ವಿರುದ್ಧ ದಾವಣಗೆರೆಯ ಕೆಟಿಜೆ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದ ಜಿಲ್ಲಾಧ್ಯಕ್ಷ ಆರ್.ವಿ.ಅಶೋಕ್ ಗೋಪನಾಳು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಸಂಬಂಧಿಸಿದಂತೆ ಡಿ.10 ರಂದು ಬೆಳಗಾವಿಯಲ್ಲಿ ಜಗದ್ಗುರುಗಳಾದ ಶ್ರೀ ಬಸವ ಜಯ ಮೃತ್ಯುಂಜಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದು ನಮ್ಮ ಸಮಾಜದ ಜಗದ್ಗುರುಗಳನ್ನೊಳಗೊಂಡಂತೆ ಸಮಾಜದ ವಕೀಲರು ಹಾಗೂ ಬಾಂಧವರು ಮುಖ್ಯಮಂತ್ರಿಯವರಿಗೆ ಮನವಿ ನೀಡಲು ಹೋಗುತ್ತಿರುವಾಗ ಸರ್ಕಾರ ನಮ್ಮ ಹೋರಾಟವನ್ನು ಹತ್ತಿಕ್ಕಬೇಕೆಂಬ ದುರುದ್ದೇಶದಿಂದ ಲಾಠಿ ಚಾರ್ಜ್ ಮಾಡಿಸಿದ್ದು ಸರಿಯಲ್ಲ ಎಂದರು.
ಲಾಠಿಚಾರ್ಜ್ ಗೆ ಸರ್ಕಾರಕ್ಕೆ ಪ್ರೋತ್ಸಾಹಿಸಿದೆ ಎಂಬುದಕ್ಕೆ ಪುಷ್ಠಿ ನೀಡುವಂತೆ ಶಿವರಾಮು ಎಂಬುವವರು ಡಿ.14 ರಂದು ಮೈಸೂರಿನಲ್ಲಿ ಸಾರ್ವಜನಿಕವಾಗಿ ಮಾಧ್ಯಮಗಳ ಪ್ರಪ್ರಥಮ ಜಗದ್ಗುರುಗಳ ಕೈ ಕತ್ತರಿಸುತ್ತೇನೆ, ಆತ ಸ್ವಾಮಿಯೇ ಅಲ್ಲ. ಬಿಜೆಪಿ ಏಜೆಂಟರಂತೆ ವರ್ತಿಸುವ ಸ್ವಾಮೀಜಿಯಾಗಿದ್ದು, ಸಿದ್ದರಾಮಯ್ಯರನ್ನು ಮುಗಿಸುವ ಸುಪಾರಿ ಪಡೆದಿದ್ದಾರೆ. ಸನ್ಯಾಸಿಯಾಗುವುದನ್ನು ಬಿಟ್ಟು ಮಠ ತ್ಯಜಿಸಬೇಕು. ಸ್ವಾಮೀಜಿಗಳು ಪುಢಾರಿ ರೀತಿ ನಡೆದುಕೊಳ್ಳುತ್ತಿದ್ದಾರೆ. ಸ್ವಾಮೀಜಿಯಾಗಲು ನಾಲಾಯಕ್. ಕಾವಿ ಬಟ್ಟೆ ಬಿಚ್ಚಿ ಟ್ಟು ಬನ್ನಿ, ಬಿಜೆಪಿ ಏಜೆಂಟರಂತೆ ಕೆಲಸ ಮಾಡುತ್ತೀದ್ದೀರಿ, ಸಿದ್ದರಾಮಯ್ಯನವರನ್ನು ಕೆಳಗಿಳಿಸಲು ಸುಪಾರಿ ಪಡೆದುಕೊಂಡಿದ್ದೀರಿ ಎಂದು ಹೇಳಿದ್ದಾರೆ. ಇದು ನಿಜಕ್ಕೂ ಅಕ್ಷಮ್ಯ ಅಪರಾಧ ಎಂದರು.
ಅವಾಚ್ಯ ಶಬ್ದಗಳಿಂದ ತೇಜೋವಧೆ ಮಾಡುವುದರ ಮೂಲಕ ಶ್ರೀ ಜಯಮೃತ್ಯುಂಜಯ ಮಹಾಸ್ವಾಮೀಜಿಗಳಿಗೆ ಜೀವ ಬೆದರಿಕೆ ಹಾಕಿದ್ದು, ವೈಯಕ್ತಿಕ ನಿಂದನೆ ಮಾಡಿದ್ದು ಹಾಗೂ ಸಮಾಜವನ್ನು ಕೀಳರಿಮೆ ಮಾಡುವುದರ ಮೂಲಕ ಪಂಚಮಸಾಲಿ ಸಮಾಜಕ್ಕೆ ಹಾಗೂ ಜಗದ್ಗುರುಗಳಿಗೆ ಅವಹೇಳನಕಾರಿ ಹೇಳಿಕೆ ನೀಡಿರುವುದು ಸಂಪೂರ್ಣ ಪಂಚಮಸಾಲಿ ಸಮಾಜಕ್ಕೆ ಅಪಮಾನವಾಗಿದೆ ಎಂದು ಕಿಡಿಕಾರಿದರು.
ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ತಮ್ಮ ಹಕ್ಕನ್ನು ಕೇಳುವ ಅಧಿಕಾರವಿದ್ದು, ಪಂಚಮಸಾಲಿಗಳ ಶಾಂತಿಯುತ ಹಕ್ಕೊತ್ತಾಯಕ್ಕೆ ಲಾಠಿ ಚಾರ್ಜ್ ಮೂಲಕ ಸಮಾಜ ಬಾಂಧವರನ್ನು ಹತ್ತಿಕ್ಕಲು ಯತ್ನಿಸಿರುವುದು ಖಂಡನೀಯ. ಅಹಿಂದ ವರ್ಗದ ಅಭಿವೃದ್ಧಿಗೆ ಮೀಸಲಾಗಿಟ್ಟಿದ್ದ ಹಣವನ್ನು ಬಿಟ್ಟಿ ಭಾಗ್ಯಗಳಿಗೆ ಹಂಚಿಕೆ ಮಾಡಿ ಅಹಿಂದ ವರ್ಗಗಳಿಗೆ ಅನ್ಯಾಯ ಮಾಡಿರುವ ಸಿಎಂ ಸಿದ್ದರಾಮಯ್ಯನವರನ್ನು ಕೇಳುವುದನ್ನು ಬಿಟ್ಟು ಪಂಚಮಸಾಲಿ ಸಮಾಜದ ಮೀಸಲಾತಿಯ ನ್ಯಾಯಯುತ ಹೋರಾಟವನ್ನು ಪ್ರಶ್ನಿಸಿರುವುದು ಎಷ್ಟರ ಮಟ್ಟಿಗೆ ಸರಿಯಾಗಿದೆ ಎಂದು ಪ್ರಶ್ನಿಸಿದರು.
ಕೂಡಲೇ ಕೆ.ಎಸ್. ಶಿವರಾಮು ಅವರು ಪಂಚಮಸಾಲಿ ಸಮಾಜದ ಜಗದ್ಗುರುಗಳವರಲ್ಲಿ ಕ್ಷಮೆಯಾಚಿಸಬೇಕು ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಪಂಚಮಸಾಲಿಗಳು ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಗೋಷ್ಠಿಯಲ್ಲಿ, ಲಿಂಗಾಯತ ಪಂಚಮಸಾಲಿ ವಕೀಲರ ಜಿಲ್ಲಾಧ್ಯಕ್ಷ ಹೆಚ್.ಎಸ್. ಯೋಗೇಶ್, ಅಭಿ ಕಾಟನ್ ಬಕ್ಕೇಶ್, ಗಿರೀಶ್ ಮರಡಿ, ವಿನಯ್ ಕುಮಾರ್, ಕೊಟ್ರೇಗೌಡ, ಶಂಕರ್, ವಿ. ರಮೇಶ್, ನಾಗರಾಜ್ ಪಾಟೀಲ್, ಬಸವರಾಜ್, ವೀರೇಶ್ ಇನ್ನಿತರರು
ಉಪಸ್ಥಿತರಿದ್ದರು.