ಧಾರವಾಡ: ಜಿಲ್ಲೆಯ ನವಲಗುಂದ ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಎಚ್. ಕೋನರೆಡ್ಡಿ ಅವರ ಕಚೇರಿ ಎದುರು ವ್ಯಕ್ತಿಯೊಬ್ಬ ತನಗೆ ತಾನೇ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸೋಮವಾರ ನಡೆದಿದೆ. ಈ ಘಟನೆಯಿಂದಾಗಿ ಸ್ಥಳದಲ್ಲಿ ಕೆಲಕಾಲ ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಗಾಯಗೊಂಡ ವ್ಯಕ್ತಿಯನ್ನು ನವಲಗುಂದ ತಾಲ್ಲೂಕಿನ ಪಡೆಸೂರು ಗ್ರಾಮದ ನಿವಾಸಿ ಮಹಾಂತೇಶ್ ತಿರಮಾರಿ ಎಂದು ಗುರುತಿಸಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಶಾಸಕರ ಕಚೇರಿ ಬಳಿ ಬಂದ ಮಹಾಂತೇಶ್ ಇದ್ದಕ್ಕಿದ್ದಂತೆ ತನ್ನ ಹೊಟ್ಟೆಗೆ ಚಾಕುವಿನಿಂದ ಇರಿದುಕೊಂಡಿದ್ದಾನೆ. ಆತ ಈ ನಿರ್ಧಾರ ಕೈಗೊಳ್ಳಲು ಕಾರಣ ಏನೆಂಬುದು ಸದ್ಯಕ್ಕೆ ತಿಳಿದುಬಂದಿಲ್ಲ.
ಸ್ಥಳದಲ್ಲಿದ್ದ ಸಾರ್ವಜನಿಕರು ತಕ್ಷಣವೇ ಆತನ ನೆರವಿಗೆ ಧಾವಿಸಿ, ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಆತನ ಆರೋಗ್ಯದ ಸ್ಥಿತಿ ಹೇಗಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಶಾಸಕರ ಕಚೇರಿ ಮುಂದೆಯೇ ಈ ರೀತಿ ಮಾಡಲು ಕಾರಣ ಏನೆಂಬುದರ ಕುರಿತು ತನಿಖೆ ಆರಂಭಿಸಿದ್ದಾರೆ.





Leave a comment