Home ಕ್ರೈಂ ನ್ಯೂಸ್ ಪತ್ನಿ ಚಲನವಲನ ನೋಡಲು ಸಿಸಿಟಿವಿ ಕಣ್ಗಾವಲು: ಮದುವೆಯಾದ ಕೇವಲ 47 ದಿನಗಳಲ್ಲಿ ನವವಿವಾಹಿತೆ ಆತ್ಮಹತ್ಯೆ, ಪಾಪಿ ಗಂಡ, ಅತ್ತೆ, ಮಾವ ಸೆರೆ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಪತ್ನಿ ಚಲನವಲನ ನೋಡಲು ಸಿಸಿಟಿವಿ ಕಣ್ಗಾವಲು: ಮದುವೆಯಾದ ಕೇವಲ 47 ದಿನಗಳಲ್ಲಿ ನವವಿವಾಹಿತೆ ಆತ್ಮಹತ್ಯೆ, ಪಾಪಿ ಗಂಡ, ಅತ್ತೆ, ಮಾವ ಸೆರೆ!

Share
ಮದುವೆ
Share

ಮುಂಬೈ: ಮಹಾರಾಷ್ಟ್ರದ ಠಾಣೆ ಜಿಲ್ಲೆಯ ಅಂಬರನಾಥ್‌ನಲ್ಲಿ ಭೀಕರ ಘಟನೆಯೊಂದು ಬೆಳಕಿಗೆ ಬಂದಿದ್ದು, ಮದುವೆಯಾದ ಕೇವಲ ಒಂದೂವರೆ ತಿಂಗಳಲ್ಲೇ 26 ವರ್ಷದ ನವವಿವಾಹಿತೆ ವಿಶಾಖಾ ತಿಲ್ಕರ್ ಎಂಬಾಕೆ ಹುಂಡಿ ಕಿರುಕುಳ ಹಾಗೂ ಪತಿಯ ಅತಿಯಾದ ಮಾನಸಿಕ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಳೆದ ಏಪ್ರಿಲ್ 30 ರಂದು ಪುಣೆಯ ವಾಣಿಜ್ಯ ಪದವೀಧರೆ ವಿಶಾಖಾ ಅವರ ವಿವಾಹ ಉಲ್ಹಾಸ್‌ನಗರದ ಬಿಎಚ್‌ಎಂಎಸ್ (BHMS) ವೈದ್ಯ ಡಾ. ನಿತಿನ್ ತಿಲ್ಕರ್ ಅವರೊಂದಿಗೆ ನಡೆದಿತ್ತು. ಮದುವೆಯ ಆರಂಭದ ದಿನಗಳಲ್ಲಿ ಸಂಬಂಧ ಚೆನ್ನಾಗಿದ್ದರೂ, ದಿನ ಕಳೆದಂತೆ ವರದಕ್ಷಿಣೆ ಮತ್ತು ಉಡುಗೊರೆಗಳ ಕೊರತೆಯ ನೆಪದಲ್ಲಿ ಅತ್ತೆ ಮನೆಯವರು ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಲು ಪ್ರಾರಂಭಿಸಿದ್ದರು. ವಿಶಾಖಾ ಅವರ ತಂದೆ ಪುಣೆಯಲ್ಲಿ ಆಟೋ ರಿಕ್ಷಾ ಚಾಲಕರಾಗಿದ್ದು, ಅವರಿಂದ 50 ಗ್ರಾಂ ಚಿನ್ನ ಮತ್ತು ನಗದು ತರುವಂತೆ ಆರೋಪಿಗಳು ನಿರಂತರ ಒತ್ತಡ ಹೇರುತ್ತಿದ್ದರು.

ಸಿಸಿಟಿವಿ ಕಣ್ಗಾವಲು ಹಾಗೂ ಬಂಧನ:

ಪತಿ ನಿತಿನ್ ವಿಶಾಖಾ ಅವರ ದೈನಂದಿನ ಚಟುವಟಿಕೆಗಳ ಮೇಲೆ ನಿಗಾ ಇಡಲು ಮನೆಯ ಒಳಗೆ ಮತ್ತು ಹೊರಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದರು. ಅವರು ನೆರೆಹೊರೆಯವರೊಂದಿಗೆ ಮಾತನಾಡುವುದನ್ನೂ ನಿಷೇಧಿಸಲಾಗಿತ್ತು. ಭಾನುವಾರದಂದು ವಿಶಾಖಾ ಪಕ್ಕದ ಮನೆಯ ಮಹಿಳೆಯೊಬ್ಬರ ಜೊತೆ ಮಾತನಾಡಿದ್ದನ್ನು ಸಿಸಿಟಿವಿಯಲ್ಲಿ ಗಮನಿಸಿದ ಪತಿ ಮತ್ತು ಆತನ ಕುಟುಂಬಸ್ಥರು ಆಕೆಗೆ ತೀವ್ರವಾಗಿ ಥಳಿಸಿದ್ದರು. ಇದರಿಂದ ತೀವ್ರ ನೊಂದ ವಿಶಾಖಾ ಮಂಗಳವಾರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತರ ಪೋಷಕರ ದೂರಿನ ಮೇರೆಗೆ ಶಿವಾಜಿನಗರ ಪೊಲೀಸರು ವರದಕ್ಷಿಣೆ ಕಿರುಕುಳ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡು, ಪತಿ ಡಾ. ನಿತಿನ್ ತಿಲ್ಕರ್, ಅತ್ತೆ ಛಾಯಾ ತಿಲ್ಕರ್ ಮತ್ತು ಮೈದುನ ನಿನಾದ್ ತಿಲ್ಕರ್ ಅವರನ್ನು ಬಂಧಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *