ಪ್ರಯಾಗ್ರಾಜ್: ಉತ್ತರ ಪ್ರದೇಶದ ಪ್ರಯಾಗ್ರಾಜ್ ನಗರದಲ್ಲಿ ಇಡೀ ದೇಶವೇ ಬೆಚ್ಚಿಬೀಳುವಂತಹ ಭೀಕರ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಇಲ್ಲಿನ ಸೌತ್ ಮಲಾಕಾ ಸಬ್ಜಿ ಮಂಡಿ ವೃತ್ತದ ಬಳಿ ಇರುವ ಮುಚ್ಚಿದ ಮನೆಯೊಂದರಲ್ಲಿ ಒಂದೇ ಕುಟುಂಬದ ನಾಲ್ಕು ಜನರ ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ.
ಕೊಲೆಯಾದವರನ್ನು ಉದ್ಯಮಿ ವೀರೇಂದ್ರ ವೈಶ್ಯ (70), ಅವರ ಪತ್ನಿ ಅನಿತಾ (65), ಮಗಳು ಮೀನಾಕ್ಷಿ (45) ಮತ್ತು ಮಗ ಅಭಿಷೇಕ್ ವೈಶ್ಯ (40) ಎಂದು ಗುರುತಿಸಲಾಗಿದೆ.
ದುರ್ವಾಸನೆ ಬಂದಾಗ ಬಯಲಾದ ರಹಸ್ಯ:
ಕಳೆದ ಕೆಲವು ದಿನಗಳಿಂದ ವೀರೇಂದ್ರ ವೈಶ್ಯ ಅವರ ಮೂರು ಅಂತಸ್ತಿನ ಮನೆ ಹೊರಗಿನಿಂದ ಲಾಕ್ ಆಗಿತ್ತು. ಮಂಗಳವಾರ ಸಂಜೆ ಮನೆಯಿಂದ ತೀವ್ರವಾದ ದುರ್ವಾಸನೆ ಬರಲಾರಂಭಿಸಿದಾಗ ಅನುಮಾನಗೊಂಡ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಕೊತ್ವಾಲಿ ಪೊಲೀಸರು ಬಾಗಿಲು ಮುರಿದು ಒಳಹೊಕ್ಕಾಗ ಮೊದಲ ಮಹಡಿಯ ಬೇರೆ ಬೇರೆ ಕೋಣೆಗಳಲ್ಲಿ ವೀರೇಂದ್ರ, ಅನಿತಾ ಮತ್ತು ಮೀನಾಕ್ಷಿ ಅವರ ರಕ್ತಸಿಕ್ತ ಶವಗಳು ಪತ್ತೆಯಾಗಿವೆ. ಆರಂಭದಲ್ಲಿ ಕಾಣೆಯಾಗಿದ್ದ ಮಗ ಅಭಿಷೇಕ್ನ ಶವವೂ ಸಹ ತಡರಾತ್ರಿ ಮನೆಯ ಕೆಳಗಿನ ಅಂಗಡಿಯೊಳಗೆ ಪತ್ತೆಯಾಗಿದೆ. ಮೃತದೇಹಗಳ ತಲೆಯನ್ನು ಭೀಕರವಾಗಿ ಜಜ್ಜಲಾಗಿತ್ತು ಎನ್ನಲಾಗಿದೆ.
ಕೊಲೆ ಜಾಗದಲ್ಲಿ ಸಿಕ್ಕ ‘ಬಂಟಿ-ಬಬ್ಲಿ’ ನಿಗೂಢ ಸಂದೇಶ:
ಈ ಕೊಲೆ ಪ್ರಕರಣಕ್ಕೆ ಅತಿ ದೊಡ್ಡ ತಿರುವು ಸಿಕ್ಕಿರುವುದು ಸ್ಥಳದಲ್ಲಿ ಪತ್ತೆಯಾದ ಒಂದು ರಟ್ಟಿನ ತುಂಡಿನಿಂದ. ಅದರ ಮೇಲೆ, “ಬಂಟಿ ಮತ್ತು ಬಬ್ಲಿ ಅವರ ಸೊಸೆಯೇ ಇವರನ್ನು ಕೊಂದಿದ್ದಾಳೆ” (Bunty and Babli’s daughter-in-law killed them) ಎಂದು ಕೈಬರಹದಲ್ಲಿ ಬರೆಯಲಾಗಿದೆ. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ವೀರೇಂದ್ರ ಅವರ ಕಿರಿಯ ಮಗ ಅಶ್ವನಿ ಮತ್ತು ಆತನ ಪತ್ನಿ ರಿತು ಈ ಹಿಂದೆ ವಂಚನೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದರು, ಆ ಸಮಯದಲ್ಲಿ ಸ್ಥಳೀಯವಾಗಿ ಇವರನ್ನು ‘ಬಂಟಿ-ಬಬ್ಲಿ’ ಎಂದು ಕರೆಯಲಾಗುತ್ತಿತ್ತು. ಹೀಗಾಗಿ ಈ ಪತ್ರ ಹಂತಕರು ಪೊಲೀಸರ ಹಾದಿ ತಪ್ಪಿಸಲು ಬರೆದಿಟ್ಟಿದ್ದಾ? ಅಥವಾ ಮರಣಕ್ಕೂ ಮುನ್ನ ಸಂತ್ರಸ್ತರು ಬರೆದಿದ್ದಾ? ಎಂಬುದರ ಬಗ್ಗೆ ಕೈಬರಹದ ತಜ್ಞರಿಂದ ತನಿಖೆ ನಡೆಸಲಾಗುತ್ತಿದೆ.
ಕೋಟಿ ಕೋಟಿ ಆಸ್ತಿ ವಿವಾದದ ಶಂಕೆ:
ವೀರೇಂದ್ರ ವೈಶ್ಯ ಅವರು ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಹಾಗೂ ಹಲವು ಮಳಿಗೆಗಳನ್ನು ಹೊಂದಿದ್ದರು. ಹೀಗಾಗಿ ಕೌಟುಂಬಿಕ ಆಸ್ತಿ ಕಲಹವೇ ಈ ಭೀಕರ ಹತ್ಯಾಕಾಂಡಕ್ಕೆ ಪ್ರಮುಖ ಕಾರಣ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಇದರೊಂದಿಗೆ ಕಳೆದ ವರ್ಷ ವೀರೇಂದ್ರ ಅವರ ತಂಗಿಯ ಕೊಲೆಯಾಗಿದ್ದು, ಅದಕ್ಕೂ ಈ ಪ್ರಕರಣಕ್ಕೂ ಏನಾದರೂ ಲಿಂಕ್ ಇದೆಯೇ ಎಂಬ ಆಯಾಮದಲ್ಲೂ ತನಿಖೆ ಚುರುಕುಗೊಂಡಿದೆ.
ಪ್ರಸ್ತುತ ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲಿನ ಸುಮಾರು 80ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದು, ಹಂತಕರ ಪತ್ತೆಗಾಗಿ 5 ಪ್ರತ್ಯೇಕ ತಂಡಗಳನ್ನು ರಚಿಸಿದ್ದಾರೆ.





Leave a comment