ಉತ್ತರಕಾಶಿ: ಉತ್ತರಾಖಂಡದ ಉತ್ತರಕಾಶಿಯ ದಯಾರಾ ಬುಗ್ಯಾಲ್ ಸಮೀಪದ ಗೋಯಿ ಬೇಸ್ ಕ್ಯಾಂಪ್‌ನಿಂದ ಟ್ರೆಕ್ಕಿಂಗ್‌ಗೆ ತೆರಳಿದ್ದ ಬಾಬಿತಾ ಪಾಂಡೆ ಎಂಬ ಯುವತಿ ಕಳೆದ 6 ದಿನಗಳಿಂದ ನಾಪತ್ತೆಯಾಗಿದ್ದು, ಪ್ರಕರಣ ತೀವ್ರ ಕುತೂಹಲ ಕೆರಳಿಸಿದೆ. ಸದ್ಯ ಯುವತಿಯ ಕೊನೆಯ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿದ್ದು, ಆಕೆಯ ಇಬ್ಬರು ಸ್ನೇಹಿತರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪ್ರವಾಸದ ಟೈಮ್‌ಲೈನ್ ಹೀಗಿದೆ:
ಮೇ 25 ರಂದು ಉಧಮ್ ಸಿಂಗ್ ನಗರದಿಂದ ಹೊರಟಿದ್ದ ಮೂವರ ತಂಡ, ಡೆಹ್ರಾಡೂನ್ ಮಾರ್ಗವಾಗಿ ಮೇ 26 ಮತ್ತು 27 ರಂದು ಹರ್ಸಿಲ್ ಮತ್ತು ಗಂಗೋತ್ರಿಗೆ ಭೇಟಿ ನೀಡಿತ್ತು. ಮೇ 28 ರಂದು ರೈಥಾಲ್ ಗ್ರಾಮದಲ್ಲಿ ತಂಗಿದ್ದ ಇವರು, ಮೇ 29 ರಂದು ಗೋಯಿ ಬೇಸ್ ಕ್ಯಾಂಪ್ ತಲುಪಿದ್ದರು. ಅಲ್ಲಿಂದಲೇ ಬಾಬಿತಾ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ನೇಹಿತರ ವಿಚಾರಣೆ:
ರೈಥಾಲ್ ಗ್ರಾಮದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಬಾಬಿತಾ ಅವರೊಂದಿಗೆ ಕಾಣಿಸಿಕೊಂಡಿದ್ದ ಹರ್ಮನ್ ಪಾಲ್ ಸಿಂಗ್ (23) ಮತ್ತು ಹರ್ಮನ್‌ಪ್ರೀತ್ ಸಿಂಗ್ (23) ಎಂಬ ಇಬ್ಬರು ಯುವಕರನ್ನು ಮಾನೇರಿ ಪೊಲೀಸ್ ಠಾಣೆಯಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.
ಸರೋವರದಲ್ಲಿ ತೀವ್ರ ಶೋಧ:
ಕಳೆದ ಆರು ದಿನಗಳಿಂದ ಎಸ್‌ಡಿಆರ್‌ಎಫ್ (SDRF), ಎನ್‌ಡಿಆರ್‌ಎಫ್ (NDRF), ಅರಣ್ಯ ಇಲಾಖೆ ಹಾಗೂ ಪೊಲೀಸರು ಜಂಟಿಯಾಗಿ ಅರಣ್ಯ ಮತ್ತು ಟ್ರೆಕ್ಕಿಂಗ್ ಹಾದಿಗಳಲ್ಲಿ ಸರಣಿ ಶೋಧ ನಡೆಸಿದ್ದರೂ ಯಾವುದೇ ಸುಳಿವು ಸಿಕ್ಕಿಲ್ಲ. ಹೀಗಾಗಿ ಸದ್ಯ ಬೇಸ್ ಕ್ಯಾಂಪ್ ಬಳಿ ಇರುವ ಸರೋವರದ (Lake) ಮೇಲೆ ಶೋಧ ಕಾರ್ಯವನ್ನು ಕೇಂದ್ರೀಕರಿಸಲಾಗಿದೆ. ಆಧುನಿಕ ಉಪಕರಣಗಳನ್ನು ಹೊಂದಿರುವ 6 ಸದಸ್ಯರ ವಿಶೇಷ ಡೀಪ್-ಸರ್ಚ್ (ಆಳದ ಶೋಧ) ತಂಡವು ಸರೋವರದ ಆಳವನ್ನು ಜಾಲಾಡಲು ಸ್ಥಳಕ್ಕೆ ಧಾವಿಸಿದೆ.





Leave a comment