SUDDIKSHANA KANNADA NEWS/ DAVANAGERE/ DATE:20-11-2024
ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾನು ಕಣಕ್ಕಿಳಿದಿದ್ದೆ. ಕಾಂಗ್ರೆಸ್ ಹಾಗೂ ಬಿಜೆಪಿಗೆ ಪ್ರಬಲ ಪೈಪೋಟಿ ಒಡ್ಡಿದ್ದೆ. ರಾಜ್ಯದ ಮುಖ್ಯಮಂತ್ರಿಯವರೇ ಬಂದು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿದರು. ನನ್ನನ್ನು ಸೋಲಿಸಿ ಶಾಮನೂರು ಶಿವಶಂಕರಪ್ಪರ ಕುಟುಂಬ ಗೆಲ್ಲಿಸಿ ಎಂದು ಬಹಿರಂಗವಾಗಿ ಹೇಳಿದರು. ಒಂದಲ್ಲಾ ಎರಡಲ್ಲ, ನಾಲ್ಕು ರ್ಯಾಲಿ ಮಾಡಿದರು. ವಿನಯ್ ಕುಮಾರ್ ಗೆ ಒಂದು ಮತ ನೀಡಬೇಡಿ ಎಂದರು. ನಾನು ಬೇಕಾ? ವಿನಯ್ ಕುಮಾರ್ ಬೇಕಾ? ಎಂದು ಸಿಎಂ ಕೇಳಿದರು. ಅಂದರೆ ಎಷ್ಟರ ಮಟ್ಟಿಗೆ ಪೈಪೋಟಿ ನೀಡಿದ್ದೆ ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಾ ಎಂದು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಹೇಳಿದರು.
ವಿಜಯನಗರ ಜಿಲ್ಲೆ ಕೊಟ್ಟೂರಿನ ಬಾಲಾಜಿ ಕನ್ವೆನ್ ಷನ್ ಸೆಂಟರ್ ನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಹಾಗೂ ಗಣನೀಯ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು ನಾನು ಯಾರು? ಕಕ್ಕರಗೊಳ್ಳದ ಗ್ರಾಮೀಣ ಪ್ರದೇಶದಲ್ಲಿ ಬೆಳೆದು ಬಂದವನು. ಒಳ್ಳೆಯ ಶಿಕ್ಷಣ ಪಡೆದು ಐಎಎಸ್ ಕೋಚಿಂಗ್ ಸೆಂಟರ್ ನಡೆಸುತ್ತಿದ್ದೇನೆ. ನಾನು ಎಂಪಿ, ಶಾಸಕ, ಸಚಿವರ, ಆಗರ್ಭ ಶ್ರೀಮಂತನ ಮಗನೂ ಅಲ್ಲ. ಸಾಮಾನ್ಯ ವ್ಯಕ್ತಿಯಾಗಿ ಹೋಗಿ ದಾವಣಗೆರೆಯಲ್ಲಿ ಬಿರುಗಾಳಿ ಎಬ್ಬಿಸಿದ್ದು ದಾಖಲೆಯೇ ಸರಿ ಎಂದರು.
ದುಡ್ಡು ಖರ್ಚು ಮಾಡಲಿಲ್ಲ. ಸಮಯ ಖರ್ಚು ಮಾಡಿ, ಬುದ್ದಿವಂತಿಕೆಯಿಂದ ಜನರ ವಿಶ್ವಾಸ ಗಳಿಸಿದವನು ನಾನು. ಎಲ್ಲಾ ಕ್ಷೇತ್ರಗಳಲ್ಲಿಯೂ ಇದನ್ನು ಮಾಡಬಹುದು. 20ರಿಂದ 30 ವರ್ಷಗಳ ಕಾಲ ರಾಜಕಾರಣದಲ್ಲಿ
ಬೆಳೆದ ಮೇಲೆ ಅವರಿಗೆ ಅಸಮಾನತೆ ವರ ಇದ್ದಂತೆ. ಎಲ್ಲಿ ಅಸಮಾನತೆ ಇರುತ್ತದೆಯೋ ಅಲ್ಲಿ ಅಧಿಕಾರದ ಕಪಿಮುಷ್ಠಿ ಇರುತ್ತದೆ. ಆರ್ಥಿಕವಾಗಿ ಹಿಂದುಳಿದವರು ಅನಿವಾರ್ಯವಾಗಿ ಮತ ಹಾಕುವಂತೆ ಮಾಡುವ ಸನ್ನಿವೇಶ ಸೃಷ್ಟಿಯಾಗುತ್ತದೆ. ವ್ಯವಸ್ಥೆ ವಿರುದ್ಧ ಹೋರಾಟ ಮಾಡಬೇಕಾದರೆ ಪ್ರತಿಭಟನೆ, ಭಾಷಣ ಮಾಡಿದರೆ ಸಾಲದು. ಬುಡಮೇಲು ಮಾಡಬೇಕಾದರೆ ಒಳ್ಳೆಯ ಶಿಕ್ಷಣ ಪಡೆಯುವಂತಾಗಬೇಕು ಎಂದು ಪ್ರತಿಪಾದಿಸಿದರು.
ರಾಜಕಾರಣಿಗಳ ಮಕ್ಕಳು ವಿದೇಶಗಳಲ್ಲಿ ಓದುತ್ತಾರೆ. ನಮಗೂ ಅಂಥ ಕಾಲೇಜುಗಳು ಇಲ್ಲಿ ಸ್ಥಾಪಿತವಾಗಬೇಕೆಂಬ ಬೇಡಿಕೆ ಇಡಬೇಕು. ಹೋರಾಡಬೇಕು. ಬದ್ಧತೆ, ಅರ್ಹತೆ ಎಲ್ಲವೂ ಇದೆ. ಎಲ್ಲರೂ ಭಾರತೀಯ, ಭುವನೇಶ್ವರಿ ತಾಯಿ ಮಕ್ಕಳು ತಾನೇ. ರಾಜಕಾರಣಿಗಳು, ಶ್ರೀಮಂತರ ಮಕ್ಕಳಿಗೆ ಒಂದು ರೀತಿಯ ಶಿಕ್ಷಣ, ಬಡವರು, ಹಿಂದುಳಿದವರು, ಆರ್ಥಿಕ ಸಂಕಷ್ಟದಲ್ಲಿದ್ದವರಿಗೆ ಒಂದು ರೀತಿಯ ಶಿಕ್ಷಣ ವ್ಯವಸ್ಥೆ ಇದೆ. ಇದು ತೊಲಗಬೇಕು ಎಂದು ಹೇಳಿದರು.
ಹಳ್ಳಿಯ ಕಟ್ಟಕಡೆಯ ವ್ಯಕ್ತಿಯ ಮತಕ್ಕೂ, ಅಂಬಾನಿ ವೋಟ್ ಹಾಕಿದರೂ ಅದೇ ಮಹತ್ವ ಇದೆ. ನಾವು ಹೊಂದಿಕೊಂಡು ನಮ್ಮಪಾಡಿಗೆ ನಾವು ಹೋಗುತ್ತಿದ್ದೇವೆ. ನಾವು ಯೋಚನೆ ಮಾಡುವುದಿಲ್ಲ. ಪ್ರಶ್ನೆ ಕೇಳುವ ಜಾಯಮಾನ ಬಿಟ್ಟುಬಿಟ್ಟಿದ್ದೇವೆ. ಬೊಗಳೆ, ಭರವಸೆ ನೀಡುವವರನ್ನು ನೀವು ಪ್ರಶ್ನಿಸುವಂತಾಗಬೇಕು. ಸರಿನೋ ತಪ್ಪೋ ಎಂಬ ಯೋಚನಾ ಶಕ್ತಿ ನಿಮ್ಮಲ್ಲಿ ಬರಬೇಕು. ಇಲ್ಲದಿದ್ದರೆ ಅವರು ಆಡಿದ್ದೇ ಆಟ, ಮಾಡಿದ್ದೇ ಕೆಲಸ ಎಂಬಂತಾಗುತ್ತದೆ ಎಂದು ಕಿವಿಮಾತು ಹೇಳಿದರು.
ಇನ್ನೊಬ್ಬರ ಬದುಕಿನಲ್ಲಿ ಬೆಳಕು ಬರಲು ಅಧಿಕಾರ ಬೇಕು. ಈಗಿನವರಿಗೆ ಅಧಿಕಾರ ಬೇಕಾಗಿರುವುದು ಪ್ರತಿಷ್ಠೆಗೋಸ್ಕರ. ಶಿಗ್ಗಾಂವಿ, ಚನ್ನಪಟ್ಟಣ, ಸಂಡೂರು ಪ್ರತಿಷ್ಠಿತ ಕಣ ಎನ್ನುತ್ತಾರೆ. ಅಭಿವೃದ್ಧಿ, ಅಸಮಾನತೆ ಬಗ್ಗೆ ಯಾರೂ ಮಾತನಾಡಲ್ಲ. ದೊಡ್ಡ ದೊಡ್ಡ ರಾಜಕಾರಣಿಗಳು ಶಾಲೆಗಳು ಕುಸಿದಿವೆ. ಓದಲು ಗ್ರಂಥಾಲಯ ಇಲ್ಲ, ಆಟವಾಡಲು ಮೈದಾನ ಇಲ್ಲ. ನಾವು ನೀಡುತ್ತೇವೆ ಎಂಬ ಮಾತು ಹೇಳಲಿಲ್ಲ. ಆದರೂ ಜನರು ಜೈ ಎನ್ನುತ್ತಾರೆ. ಮನರಂಜನೆಗೆ ಮಾರಿ ಹೋಗುವ ಜನರಾಗಿದ್ದೇವೆ. ಚೆನ್ನಾಗಿ ದುರ್ಬಳಕೆ ಮಾಡಿಕೊಳ್ಳುವುದು ರಾಜಕಾರಣಿಗಳಿಗೆ ಗೊತ್ತು. ವಾಮಮಾರ್ಗದಿಂದ ದುಡ್ಡು ನೀಡಿ ಗೆಲ್ಲುತ್ತಿದ್ದಾರೆ. ನಮಗೆ ಜನರು ಏನೂ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ರಾಜಕಾರಣಿಗಳು ಭಾವಿಸಿದ್ದಾರೆ ಎಂದು ವಿಷಾದಿಸಿದರು.
ಜಮೀರ್ ಅಹ್ಮದ್ ಖಾನ್, ಸಂತೋಷ್ ಲಾಡ್, ಭೀಮಾನಾಯ್ಕ್, ಶ್ರೀನಿವಾಸ್ ರೆಡ್ಡಿಯಂಥ ನಾಯಕರು ಇಂಥ ಕಾರ್ಯಕ್ರಮಕ್ಕೆ ಬರಲಿಲ್ಲ. ಬರುತ್ತೇವೆ ಎಂಬ ಭರವಸೆ ಕೊಟ್ಟಿರುತ್ತಾರೆ. ವಿದ್ಯಾರ್ಥಿಗಳು, ಹಳ್ಳಿ ಮಕ್ಕಳು ಬರುತ್ತಾರೆ, ಮಾದರಿಯಾಗುತ್ತೆ ಬಂದು ಮಾತನಾಡಿ ಎಂದರೂ ಆಗಮಿಸಿಲ್ಲ. ಅವರ ಆದ್ಯತೆಯೇ ಬೇರೆ. ಈ ರೀತಿ ಸಮಾರಂಭಕ್ಕೆ ಬಂದರೂ ಭರವಸೆ ಕೊಟ್ಟು ಹೋಗುತ್ತಾರೆ ವಿನಾಃ ಕಾರ್ಯರೂಪಕ್ಕೆ ತರಲ್ಲ ಎಂದು ತಿಳಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉತ್ತರದಾಹಿತ್ವ ಬರುತ್ತದೆ. ಆಯ್ಕೆ ಮಾಡಿ ಕಳುಹಿಸಿದ ಮೇಲೆ ಕ್ಷೇತ್ರದ ಮೇಲೆ ಗಮನ ಇರಬೇಕು. 40ರಿಂದ 50 ವರ್ಷಗಳಿಂದ ಉತ್ತಮ ಗುಣಮಟ್ಟದ ಶಾಲೆಗಳಿಲ್ಲ. ಕೊಠಡಿ ಹಾಳಾಗಿದೆ. ಸರಿಪಡಿಸಲು ಹಣ ನೀಡಿ ಎಂದು ಕೇಳುತ್ತಾರೆ. ಇದು ಜನರ ಹಕ್ಕು. ಆದ್ರೆ, ಗೆದ್ದು ಹೋದವರನ್ನು ತಿಂಗಳುಗಟ್ಟಲೇ ಕಾದು ಮನವಿ ಮಾಡಿಕೊಳ್ಳಬೇಕು. ಇಂಥ ವ್ಯವಸ್ಥೆಗೆ ಮುಕ್ತಿ ಬೇಕು. ಗುಲಾಮಗಿರಿ ಬಂದಿದೆ. ಇದೇ ಮನೋಭಾವನೆ ಮುಂದುವರಿದರೆ ದೊಡ್ಡ ಗುಲಾಮಗಿರಿ ವ್ಯವಸ್ಥೆ ಕಪಿಮುಷ್ಠಿಯಲ್ಲಿ ನಾವೆಲ್ಲರೂ ಸಿಲುಕುವುದು ಖಚಿತ ಎಂದು ವಿನಯ್ ಕುಮಾರ್ ಆತಂಕ ವ್ಯಕ್ತಪಡಿಸಿದರು.
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಟೆಕ್ನಾಲಜಿ, ಪೊಲಿಟಿಷಿಯನ್ ಪವರ್ ಒಂದಾಗಿ ಆಡಳಿತ ಮಾಡಲು ಶುರು ಮಾಡಿದರೆ ನಮಗೆ ಮುಕ್ತಿ ಸಿಗಲ್ಲ. ಪಿಯುಸಿ ಆದ ಮೇಲೆ ಒಳ್ಳೆಯ ಕಾಲೇಜು ಆಯ್ಕೆ ಮಾಡಿಕೊಳ್ಳಿ. ಸಿಇಟಿ, ನೀಟ್, ಉನ್ನತ ಶಿಕ್ಷಣ ಮಾಡಬೇಕೆಂಬ ಕನಸು ಇದ್ದರೆ ಉತ್ತಮ ಕಾಲೇಜು ಆಯ್ದುಕೊಳ್ಳಿ. ಗುಣಮಟ್ಟದ ಬೋಧನೆ, ಮೂಲಭೂತ ಸೌಕರ್ಯ ಸೇರಿದಂತೆ ಉತ್ಕೃಷ್ಟ ಕಾಲೇಜುಗಳಿಗೆ ಸೇರಿ. ಸ್ವತಂತ್ರವಾಗಿ, ಸ್ವಾವಲಂಬಿಯಾಗಿ ಬದುಕುವುದನ್ನು ಕಲಿಯಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.