SUDDIKSHANA KANNADA NEWS/ DAVANAGERE/ DATE:18-11-2024
ಬೆಂಗಳೂರು: ಗ್ಯಾರಂಟಿಗಳಿಗೆ ಹಣ ಹೊಂದಿಸಲಾಗದೇ, ಭ್ರಷ್ಟಾಚಾರದಲ್ಲಿ ಮುಳುಗಿ ಬೊಕ್ಕಸ ಬರಿದಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ 11 ಲಕ್ಷ ಬಿಪಿಎಲ್ ಪಡಿತರ ಚೀಟಿಗಳನ್ನೇ ರದ್ದು ಮಾಡಿದೆ ಎಂದು ಬಿಜೆಪಿ ರಾಜ್ಯ ಘಟಕ ಆರೋಪಿಸಿದೆ.
ಮಹಾರಾಷ್ಟ್ರ ಚುನಾವಣಾ ಪ್ರಚಾರಕ್ಕೆ ಹೋಗಿ ನಾವು ಗ್ಯಾರಂಟಿ ಜಾರಿ ಮಾಡಿದ್ದೇವೆ ಎಂದು ಆರ್ಭಟಿಸುವ ಸಿಎಂ ಸಿದ್ದರಾಮಯ್ಯರು ಪ್ರಚಾರ ಭಾಷಣ ಮುಗಿಸಿ ಮರಳುವ ಹೊತ್ತಿಗೆ ಅನರ್ಹ ಮಾನದಂಡ ಮುಂದಿಟ್ಟು 11 ಲಕ್ಷ ಜನರ
ಬಿಪಿಎಲ್ ಕಾರ್ಡ್ ರದ್ದು ಮಾಡುವ ತಂತ್ರ ಕುತಂತ್ರಗಳು ದೇಶದ ಮುಂದೆ ಬಟಾ ಬಯಲಾಗುತ್ತಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಆರೋಪಿಸಿದ್ದಾರೆ.
ಅನರ್ಹತೆ ಹೆಸರಿನಲ್ಲಿ ನಿಜವಾದ ಬಿಪಿಎಲ್ ಕಾರ್ಡುದಾರರ ಹಕ್ಕನ್ನು ಕಿತ್ತುಕೊಳ್ಳುವುದನ್ನು ಬಿಜೆಪಿ ಖಂಡಿಸುತ್ತದೆ. ಅನರ್ಹರನ್ನು ತಡೆಯುವ ಹೆಸರಿನಲ್ಲಿ ಬಿಪಿಎಲ್ ಕಾರ್ಡುದಾರರನ್ನು ಇಳಿಮುಖಗೊಳಿಸಿ ಭಾಗ್ಯ ಯೋಜನೆಗಳಿಗೆ
ಹಣ ಹೊಂದಿಸುವ ದುರುದ್ದೇಶ ಈ ಬಿಪಿಎಲ್ ಕಾರ್ಡುದಾರರ ರದ್ದತಿಯ ಹಿಂದೆ ಅಡಗಿದೆ ಎಂಬುದು ರಾಜ್ಯ ಸರ್ಕಾರದ ನೀತಿ ನಿಲುವುಗಳಿಂದ ವೇದ್ಯವಾಗುತ್ತಿದೆ ಎಂದಿದ್ದಾರೆ.
ಕಾಂಗ್ರೆಸ್ ಸರ್ಕಾರದ ದುರಾಡಳಿತದಲ್ಲಿ ಕೆಪಿಎಸ್ ಸಿ ಪರೀಕ್ಷೆಗಳ ಗೊಂದಲಗಳು ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಹೈದರಾಬಾದ್ ಕರ್ನಾಟಕ ಸ್ಥಳೀಯ ವೃಂದದ 97 ಹುದ್ದೆಗಳಿಗೆ ಭಾನುವಾರ ನಡೆದ ಪರೀಕ್ಷೆಯ ವೇಳೆ ಮೇಲ್ವಿಚಾರಕರ ಎಡವಟ್ಟು ಹಾಗೂ
ಪರೀಕ್ಷಾರ್ಥಿಗಳಿಗೆ ಪ್ರಶ್ನೆಪತ್ರಿಕೆ ವಿತರಣೆಯನ್ನೇ ಅರ್ಧ ಗಂಟೆ ತಡಮಾಡಿರುವುದಲ್ಲದೇ ಮೊದಲೇ ಒಡೆದ ಕವರ್ ನಲ್ಲಿದ್ದ ಪ್ರಶ್ನೆಪತ್ರಿಕೆ ವಿತರಿಸಿರುವುದು ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಶಂಕೆ ವ್ಯಕ್ತವಾಗಿ ಅಭ್ಯರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ
ಎಂದು ತಿಳಿಸಿದ್ದಾರೆ.
ಕಠಿಣ ಪರಿಶ್ರಮದಿಂದ ಉದ್ಯೋಗವನ್ನು ಅರಸಿ ಪರೀಕ್ಷೆಗಳನ್ನು ಬರೆಯುವ ಸಾವಿರಾರು ಉದ್ಯೋಗಾಕಾಂಕ್ಷಿಗಳ ಗೊಂದಲ ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಲಿ, ಅಲ್ಲದೇ KPSC ಎಡವಟ್ಟುಗಳಿಗೆ ಸಂಪೂರ್ಣ ಕಡಿವಾಣ ಹಾಕಿ ನೇಮಕಾತಿ ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುವೆ
ಎಂದು ಎಕ್ಸ್ ಮತ್ತು ಫೇಸ್ ಬುಕ್ ಪೋಸ್ಟ್ ನಲ್ಲಿ ಹೇಳಿದ್ದಾರೆ.