SUDDIKSHANA KANNADA NEWS/ DAVANAGERE/ DATE:13-11-2024
ದೇಹದಂತೆ ಮೆದುಳಿನ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸುವುದು ಅತಿ ಮುಖ್ಯವಾಗಿದ್ದು, ಮಾನವ ಸಂಭಾವ್ಯ ಜೀವತಾವಧಿಯನ್ನು ಹೆಚ್ಚಿಸುವ ಮೆದುಳು ಮತ್ತು ಮಾನಸಿಕ ಆರೋಗ್ಯಕ್ಕೆ ನಾವೆಲ್ಲ ಹೆಚ್ಚಿನ ಒತ್ತು ನೀಡಬೇಕಿದೆ.
ಮೆದುಳಿನ ಆರೋಗ್ಯವು ನಮ್ಮ ದಿನನಿತ್ಯದ ಜೀವವನಕ್ಕೆ ಅತ್ಯಗತ್ಯ, ಸಂವಹನ ನಡೆಸುವ ನಿರ್ಧಾರಗಳನ್ನು ತೆಗೆದುಕೊಳ್ಳುವ, ಸಮಸ್ಯೆ ಪರಿಹರಿಸುವ , ಉತ್ಪಾದಕ ಮತ್ತು ಉಪಯುಕ್ತ ಜೀವನವನ್ನು ನಡೆಸಲು ಸಹಕಾರಿಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಮೆದುಳಿನ ಆರೋಗ್ಯವು ವ್ಯಕ್ತಿಗೆ ತಮ್ಮ ಜೀವನದ ಅವಧಿಯಲ್ಲಿ ತಮ್ಮ ಪೂರ್ಣ ಸಂಭಾವ್ಯತೆಯನ್ನು ಅರಿತುಕೊಳ್ಳಲು ಸಹಕಾರಿಯಾಗಿದೆ ಎಂದು ತಿಳಿಸಿದೆ.
ಕಭಿ ಯೋಜನೆ:
ಮಾನಸಿಕ ರೋಗಿಗಳಿಗೆ, ಮಾನಸಿಕ ಅನಾರೋಗ್ಯ, ಖಿನ್ನತೆ ಮುಂತಾದ ಮಿದುಳಿನ ಕಾಯಿಲೆಗಳಿಗೆ ತುತ್ತಾದವರಿಗೆ ಚಿಕಿತ್ಸೆ ನೀಡಲು ಕರ್ನಾಟಕ ಸರ್ಕಾರ ದೇಶದಲ್ಲಿಯೇ ಮೊದಲು ಕಭಿ (ಕರ್ನಾಟಕ ಬ್ರೇನ್ ಹೆಲ್ತ್ ಇನಿಷಿಯೇಟಿವ್) ಎಂಬ ವಿನೂತನ ಯೋಜನೆ ಜಾರಿಗೆ ತಂದಿದೆ.
ಕರ್ನಾಟಕ ಬ್ರೈನ್ ಹೆಲ್ತ್ ಇನಿಶಿಯೇಟಿವ್ ಅಡಿಯಲ್ಲಿ ನಿಮ್ಹಾನ್ಸ್ ಸಹಯೋಗದೊಂದಿಗೆ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಮೆದುಳಿನ ಆರೋಗ್ಯ ಚಿಕಿತ್ಸಾಲಯಗಳನ್ನು ಸ್ಥಾಪನೆ ಆರೋಗ್ಯ ಇಲಾಖೆ ಮುಂದಾಗಿದೆ.
ಮೆದುಳಿನ ರಕ್ಷಣೆ ಹೇಗೆ..?
ಮೆದುಳಿನ ಆರೋಗ್ಯದ ಕುರಿತು ಕಭಿ ಯೋಜನೆಯಲ್ಲಿ ಕೆಲವು ಉಪಕ್ರಮಗಳನ್ನು ತಿಳಿಸಲಾಗಿದ್ದು, ಅದರಲ್ಲಿ ದೈಹಿಕ ಚಟುವಟಿಕೆ, ಆರೋಗ್ಯಕರ ಹವ್ಯಾಸಗಳು, ಹೊಸ ಚಟುವಟಿಕೆಗಳನ್ನು ರೂಢಿಸಿಕೊಳ್ಳುವುದು, ಯೋಗ ಮತ್ತು ಧ್ಯಾನ, ಸಾಕಷ್ಟು ನಿದ್ರೆ, ಸಂಘಜೀವಿಯಾಗಿರುವುದು, ಈ ರೀತಿ ಅನೇಕ ಉಪಕ್ರಮಗಳನ್ನು ತಿಳಿಸಲಾಗಿದೆ.
ದೈಹಿಕ ಚಟುವಟಿಕೆ:
ಮೆದುಳಿನ ಆರೋಗ್ಯಕ್ಕೆ ದೈಹಿಕ ಚಟುವಟಿಕೆಗಳು ಅತ್ಯಂತ ಅವಶ್ಯಕವಾಗಿದೆ. ಪ್ರತಿನಿತ್ಯ ವ್ಯಾಯಾಮವನ್ನು ಮಾಡುವುದರಿಂದ ಜ್ಞಾಪಕಶಕ್ತಿ ಮತ್ತು ಅರಿವು ಸುಧಾರಣೆಯಾಗುತ್ತದೆ. ವಾಕಿಂಗ್, ಸ್ಕಿಪ್ಪಿಂಗ್, ಸೈಕ್ಲಿಂಗ್, ಈಜು, ಯೋಗ, ಮತ್ತಿತ್ತರ ಚಟುವಟಿಗಳಿಂದ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಸ್ವಾಮಿ ‘ಸದೃಢ ದೇಹದಲ್ಲಿ ಸದೃಢ ಮನಸ್ಸು’ ಇರಲು ಸಾಧ್ಯ ಎಂಬ ಹೇಳಿಕೆಗೆ ಪೂರಕವಾಗಿ ವಿವೇಕಾನಂದರು ಸಹ ಯುವ ಜನತೆಗೆ ಬಲಿಷ್ಠವಾದ ದೇಹ ಬಲಿಷ್ಠವಾದ ಮೆದುಳನ್ನು ಹೊಂದುವುದು ಅತ್ಯಂತ ಅವಶ್ಯಕವಾದ್ದರಿಂದ ಪ್ರತಿದಿನ ದೈಹಿಕ ವ್ಯಾಯಾಮ ಮಾಡಬೇಕೆಂದು ಕರೆ ನೀಡಿದ್ದಾರೆ.
ಸಾಮಾಜಿಕ ಚಟುವಟಿಕೆ:
ಒಂಟಿತನ ಮೆದುಳಿನ ಆರೋಗ್ಯವನ್ನು ಹದಗೆಡಿಸುತ್ತದೆ. ಇದನ್ನು ನಾವು ಸಾಮಾನ್ಯವಾಗಿ ಅನೇಕರಲ್ಲಿ ನೊಡಿದ್ದೇವೆ. ಒಂಟಿಯಾಗಿ ಒಂದು ಕಡೆ ಕುಳಿತುಕೊಂಡು ಯೋಚನೆ ಮಾಡುವುದು, ಸದಾ ಚಿಂತಾಗ್ರಸ್ತರಾಗಿರುವುದು ಹೀಗೆ ಮಾಡಿದರೆ ಮಾನಸಿಕವಾಗಿ ಕುಗ್ಗತ್ತಾ ಹೋಗುತ್ತಾರೆ. ಮೆದುಳು ಆರೋಗ್ಯವಾಗಿರಲು ಯಾವುದೇ ಚಿಂತೆಗಳಿಗೆ ಒಳಗಾಗದೆ, ಸಾಮಾಜಿಕ ಚುಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು, ಹತ್ತಾರು ಜನರೊಂದಿಗೆ ಮಾತುಕಥೆ, ಹರಟೆ, ಚೆರ್ಚೆಗಳನ್ನು ನಡೆಸುವುದರಿಂದ ಮಾನಸಿಕ ಒತ್ತಡದಿಂದ ಹೊರಬರಬಹುದು.
ಹೊಸ ಕೌಶಲ್ಯಗಳ ಅಭ್ಯಾಸ ಹಾಗೂ ಹವ್ಯಾಸಗಳನ್ನು ರೂಢಿಸಿಕೊಳ್ಳುವುದು ಜ್ಞಾನವನ್ನು ಹೆಚ್ಚಿಸುತ್ತದೆ. ಪತ್ರಿಕೆಗಳಲ್ಲಿ ಬರುವ ಪದಜೋಡಣೆ, ಪದಬಂಧ, ಚದುರಂಗ, ಒಗಟುಗಳನ್ನು ಬಿಡುಸುವುದು ಹೀಗೆ ಮೆದುಳಿಗೆ ಕೆಲಸ ಕೊಡುವ ಹವ್ಯಾಸವನ್ನು ರೂಢಿಸಿಕೊಂಡರೆ ಮೆದುಳು ಚುರುಕಾಗುತ್ತದೆ.
ಕರಕುಶಲತೆಯಿಂದ ಮೆದುಳಿನ ಆರೋಗ್ಯ ವೃದ್ಧಿ:
ಕುಂಬಾರಿಕೆ, ಚಿತ್ರಕಲೆ, ಗಾಳಿಪಟ ತಯಾರಿಕೆ, ಪತ್ರಿಕೆಗಳಲ್ಲಿ ದೋಣಿ ತಯಾರಿಕೆ, ವಾದ್ಯಗಳನ್ನು ನುಡಿಸುವುದು, ಹೀಗೆ ಕಲೆ ಮತ್ತು ಕರಕುಶಲ ಕೆಲಸಗಳ ಅಭ್ಯಾಸದ ಮೂಲಕ ಮನಸ್ಸು ಉಲ್ಲಾಸದಾಯಕವಾಗಿರುತ್ತದೆ. ಕರಕುಶಲ ಕೌಶಲ್ಯಗಳಿಂದ ಜ್ಞಾಪಕಶಕ್ತಿ ಮತ್ತು ಅರಿವು ಹೆಚ್ಚುತ್ತದೆ.
ತಲೆನೋವು ತಲೆನೋವಿನ ವಿಧಗಳು:
ತಲೆ ಮತ್ತು ಕುತ್ತಿಗೆ ಭಾಗದಲ್ಲಿ ನೋವು, ಮೈಗ್ರೇನ್, ಉದ್ವೇಗದಿಂದ ಉಂಟಾಗುವ ತಲೆನೋವು, ಕ್ಲಸ್ಟರ್ ತಲೆನೋವು, ದೈನಂದಿನ ತಲೆನೋವು, ಸೈನಸೈಟಿಸ್ ಮತ್ತು ಅಧಿಕ ರಕ್ತದೊತ್ತಡದಂತಹ ಇತರೆ ಕಾರಣಗಳಿಂದ ಉಂಟಾಗುವ ತಲೆನೋವು.
ಕಾರಣ/ಪರಿಹಾರ:
ಒತ್ತಡ ಮತ್ತು ಆತಂಕ, ನಿದ್ರೆಯ ಕೊರತೆ, ಬಿಸಿಲಿನಲ್ಲಿ ಹೆಚ್ಚು ಸಮಯ ಕಳೆಯುವುದು ,ಹವಾಮಾನ ಬದಲಾವಣೆ, ಅತಿಯಾದ ಕಾಫಿ ಸೇವೆನೆ, ಮದ್ಯಪಾನ, ಧೂಮಪಾನ, ಅಧಿಕ ಕಂಪ್ಯೂಟರ್ ಬಳಕೆ, ಇನ್ನೂ ಅನೇಕ ಸಂಗತಿಯಗಳು ಕಾರಣವಾಗುತ್ತದೆ.
ತಲೆನೋವನ್ನು ತಡೆಯಲು ಆರೋಗ್ಯಕರ ಆಹಾಪದ್ಧತಿ ಮತ್ತು ಜೀವನಶೈಲಿ, ದೈಹಿಕ ಚಟುವಟಿಕೆ, ಹೆಚ್ಚು ನೀರಿನ ಸೇವನೆ, ಕನಿಷ್ಠ 7-8 ಗಂಟೆಗಳ ಕಾಲ ನಿದ್ರೆ, ಪ್ರಕೃತಿಯಲ್ಲಿ ಹೆಚ್ಚು ಕಾಲ ಕಳೆಯುವುದು, ಮೊಬೈಲ್ ಹಾಗೂ ಕಂಪ್ಯೂಟರ್ ಗಳ ಮಿತ ಬಳಕೆ ಇನ್ನೂ ಅನೇಕ ಚಟುವಟಿಕೆಗಳ ಮೂಲಕ ತಲೆನೋವನ್ನು ತಡೆಗಟ್ಟಬಹುದಾಗಿದೆ.
ಅಪಸ್ಮಾರ:
ಇದು ಮೆದುಳಿನ ಅಸ್ವಸ್ಥತೆ. ವ್ಯಕ್ತಿಯೊಬ್ಬರು ಎರಡು ಅಥವಾ ಹೆಚ್ಚು ಬಾರಿ ಮೂರ್ಛೆ ಹೋದರೆ ಇದನ್ನು ಅಪಸ್ಮಾರ ಎನ್ನುತ್ತೇವೆ.
ಅಪಸ್ಮಾರವನ್ನು ಗುರುತಿಸುವುದು ಹೇಗೆ?
ರೋಗಿಯ ಆರೋಗ್ಯ ಇತಿಹಾಸ, ಮೂರ್ಛೆ ರೋಗದ ಪ್ರತ್ಯಕ್ಷ ಸಾಕ್ಷಿಗಳು, ತಜ್ಞರ ಸಲಹೆ ಮೇರೆಗೆ ಗುರುತಿಸಬಹುದು.
ಅಪಸ್ಮಾರಕ್ಕೆ ಕಾರಣವೇನು?
ಪಾರ್ಶ್ವವಾಯು, ಮೆದುಳಿನ ಗಡ್ಡೆ, ಮೆದುಳಿನ ಸೋಂಕು (ಉದಾ: ನ್ಯೂರೋಸಿಸ್ಟಿಸರ್ಕೋಸಿಸ್) ತಲೆಗೆ ಪೆಟ್ಟು , ಮೆದುಳಿಗೆ ಆಮ್ಲಜನಕದ ಕಡಿಮೆ ಪೂರೈಕೆ (ಉದಾ: ಜನನದ ಸಮಯ), ಕೆಲವು ಆನುವಂಶೀಯ ಅಸ್ವಸ್ಥತೆಗಳು ಹಾಗೂ ಹಲವು ರೋಗಿಗಳಲ್ಲಿ ಅಪಸ್ಮಾರದ ನಿಖರವಾದ ಕಾರಣ ತಿಳಿದಿಲ್ಲ.
ಅಪಸ್ಮಾರದಿಂದ ಬಳಲುತ್ತಿರುವವರಿಗೆ ಹೇಗೆ ಸಹಾಯ ಮಾಡಬಹುದು?
ಇದಕ್ಕೆ ಖಂಡಿತ ಚಿಕಿತ್ಸೆ ಲಭ್ಯ, ಅಪಸ್ಮಾರ ವಿರೋಧಿ ಔಷಧಿಗಳನ್ನು ನಿಯಮಿತವಾಗಿ ತೆಗೆದುಕೊಳ್ಳಬೇಕು. ಈ ಔಷಧಿಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಮೂರ್ಛೆ ರೋಗವನ್ನು ನಿಯಂತ್ರಿಸಬಹುದು.
ಪಾರ್ಶ್ವವಾಯು:
ಪಾರ್ಶ್ವವಾಯು ಅಥವಾ ಮೆದುಳಿನ ಆಘಾತ- ಮೆದುಳಿನ ಭಾಗಕ್ಕೆ ಕಡಿಮೆ ಆಮ್ಲಜನಕ ಪೂರೈಕೆಯಿಂದಾಗಿ ಉಂಟಾಗುವ ಒಂದು ಸ್ಥಿತಿ.
ಪಾರ್ಶ್ವವಾಯುವಿನಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಹೇಗೆ ಸಹಾಯ ಮಾಡಬಹುದು?
ಔಷಧಿಗಳು, ಜೀವನಶೈಲಿಯಲ್ಲಿ ಬದಲಾವಣೆ, ಫಿಸಿಯೋಥೆರಪಿ / ಸ್ಪೀಚ್ ಥೆರಪಿ, ಔದ್ಯೋಗಿಕ ಚಿಕಿತ್ಸೆ, ಅರಿವಿನ ಪುನರ್ವಸತಿ (ಕಾಗ್ನಿಟಿವ್ ರಿಹ್ಯಾಬಿಲಿಟೇಶನ್) ಸುತ್ತಮುತ್ತಲಿನ ಪರಿಸರದಲ್ಲಿ ಬದಲಾವಣೆ/ ಆರೈಕೆದಾರರಿಂದ ಸಹಾಯ.
ಪಾರ್ಶ್ವವಾಯುವಿಗೆ ಕಾರಣವೇನು?
ಅಧಿಕ ರಕ್ತದೊತ್ತಡ, ಮಧುಮೇಹ, ಬೊಜ್ಜು, ಉದ್ವೇಗ ಮತ್ತು ಅಧಿಕ ಕೊಲೆಸ್ಟ್ರಾಲ್, ಹೃದಯ ಕಾಯಿಲೆಗಳು, ಮದ್ಯಪಾನ ಮತ್ತು ಧೂಮಪಾನದಿಂದ ಯುವಜನರೂ ಸಹ ಪಾರ್ಶ್ವವಾಯುವಿನಿಂದ ಬಳಲಬಹುದು.
ಪಾರ್ಶ್ವವಾಯುವನ್ನು ಗುರುತಿಸುವುದು ಹೇಗೆ?
ಸಾಮಾನ್ಯ ಲಕ್ಷಣಗಳು
*B-ಸಮತೋಲನ (ಸಮನ್ವಯದ ನಷ್ಟ
*E ಇ-ಕಣ್ಣುಗಳು (ದೃಷ್ಟಿ ಬದಲಾವಣೆ
*Fಈ-ಮುಖ (ಬಾಯಿ ಜೋತುಬೀಳುವುದು
*A-ತೋಳುಗಳು (ಬಲಹೀನತೆ) (ಂಡಿms)
*S -ಮಾತು (ಮಾತಿನಲ್ಲಿ ತೊಂದರೆ)
* T-ಸಮಯ (ತುರ್ತು ಸೇವೆಗಳಿಗೆ ಕರೆ ಮಾಡುವುದು)
ಶಿವಮೊಗ್ಗ ಜಿಲ್ಲೆಯಲ್ಲಿ ಕಭಿ ಕೇಂದ್ರದ ಮೂಲಕ ಮೆದುಳಿದ ಆರೋಗ್ಯದ ಕುರಿತು ವಿಶೇಷ ಕಾರ್ಯಕ್ರಗಳನ್ನು ನಡೆಸಲಾಗಿದ್ದು, ಜಿಲ್ಲಾ ಮೆಗ್ಗಾನ್ ಬೊಧಾನಾ ಆಸ್ಪತ್ರೆಯಲ್ಲಿ ಕಭಿ ಕ್ಲಿನಿಕ್ ಮೂಲಕ ತಲೆನೋವಿಗೆ 1457 ಜನರು ,ಎಪಿಲೆಪ್ಸಿ 500, ಪಾರ್ಶ್ವವಾಯು 356, ಬುದ್ಧಿಮಾಂದ್ಯತೆ 28, ಇತರ ನರರೋಗ ಪ್ರಕರಣಗಳು 395, ಫಿಸಿಯೋಥೆರಪಿ ಚಿಕಿತ್ಸೆ 488 ರೋಗಿಗಳಿಗೆ ಚಿಕಿತ್ಸೆ ಮಾಡಲಾಗಿದೆ. ಒಟ್ಟು ಒಳ ರೋಗಿಗಳು 399, ಒಟ್ಟು ಹೊರ ರೋಗಿಗಳು 89, ಅನುಸರಣಾ ಪ್ರಕರಣಗಳು 113, ಲೆಫ್ಟ್ ಹೆಮಿಪರೆಸಿಸ್ 01, 6745 ಕ್ಕೂ ಹಚ್ಚು ನ್ಯೂರೋ ಚೆಕ್ ಸ್ಕ್ರೀನಿಂಗ್ಗಳು ಮತ್ತು 2 ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ.
ರಾಷ್ಟ್ರೀಯ ಟೆಲಿ ಮಾನಸಿಕ ಆರೋಗ್ಯ ಕಾರ್ಯಕ್ರಮ
ಟೆಲಿ ಮನಸ್: ಯಾರು ಕರೆ ಮಾಡಬಹುದು ?
ವ್ಯಥೆಗೆ ಒಳಪಟ್ಟವರು,ಪರೀಕ್ಷಾ ಒತ್ತಡಕ್ಕೊಳಗಾದವರು, ಕೌಟುಂಬಿಕ ಸಮಸ್ಯೆಗೊಳಗಾದವರು, ಆತ್ಮಹತ್ಯೆ ಆಲೋಚನೆಗಳು, ಮಾದಕ ವಸ್ತು ವ್ಯಸನದ ಸಮಸ್ಯೆಯಲ್ಲಿರುವವರು, ಸಂಬಂಧಗಳ ಸಮಸ್ಯೆಯಲ್ಲಿ ಸಿಲುಕಿರುವವರು, ಜ್ಞಾಪಕಶಕ್ತಿ ತೊಂದರೆಯುಳ್ಳವರು, ಆರ್ಥಿಕ ಒತ್ತಡದಲ್ಲಿರುವವರು, ಇತರೆ ಯಾವುದೇ ಮಾನಸಿಕ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವವರು ಟೆಲಿ ಮನಸ್ಗೆ ಶುಲ್ಕರಹಿತ ದೂರವಾಣಿ ಸಂಖ್ಯೆ-14416 ಮೂಲಕ ಕರೆ ಮಾಡಿ ಉಪಯೋಗ ಪಡೆಯಬಹುದು.
——
ಮೆದುಳಿನ ಆರೋಗ್ಯಕ್ಕಾಗಿ ದೇಶದಲ್ಲಿಯೇ ಮೊದಲು ಕರ್ನಾಟಕ ಸರ್ಕಾರ ನಿಮ್ಹಾನ್ಸ್ ಸಹಯೋಗದೊಂದಿಗೆ ಕಭಿ ಕ್ಲಿನಿಕ್ ಮೂಲಕ ಮೆದುಳಿನ ಆರೋಗ್ಯಕ್ಕಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ನರರೋಗ, ಮೆದುಳಿನ ಸಂಬAಧಿಸಿದ ಕಾಯಿಲೆಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಜನರಿಗೆ ಚಿಕಿತ್ಸೆ ಹೊರೆಯಾಗುತ್ತದೆ. ಸರ್ಕಾರಿ ಆಸ್ಪತ್ರೆಯಲ್ಲಿ ಮೆದುಳಿನ ಆರೋಗ್ಯ ಚಿಕಿತ್ಸೆಗೆ ಅತ್ಯಧುನಿಕ ಉಪಕರಗಳೊಂದಿಗೆ ನುರಿತ ವೈದ್ಯರತಂಡ ಜನರಿಗೆ ಸೇವೆ ನೀಡುತ್ತಿದ್ದು ಸ್ಟೊçÃಕ್,ಅಪಘಾತ, ಇನ್ನಿತರ ಘಟನೆಗಳಲ್ಲಿ ಮೆದುಳಿಗೆ ಸಮಸ್ಯೆ ಉಂಟದಾಗ ಮೊದಲು ಆಸ್ಪತ್ರೆ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಬರಲು ಸಾಧ್ಯವಾಗದ ಸಂದರ್ಭದಲ್ಲಿ ಮನೆಯಲ್ಲಿಯೇ ಟೆಲಿಕಾಲ್ ಮೂಲಕ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುವುದು ಪ್ರತಿಯೊಬ್ಬರು ಸದುಪಯೋಗ ಪಡೆದುಕೊಳ್ಳಬೇಕು.
ಡಾ.ಕಿರಣ್ ಕುಮಾರ್, ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿಗಳು.
—–
ನನಗೆ ಬೈಕ್ ಅಪಘಾತವಾಗಿ ಕೈಕಾಲುಗಳು ಮುರಿದು ತಲೆಭಾಗಕ್ಕೆ ಬಲವಾದ ಹೊಡೆತ ಬಿದಿತ್ತು ಖಾಸಗಿ ಆಸ್ಪತ್ರೆಯಲ್ಲಿ ಶಸ್ತç ಚಿಕಿತ್ಸೆ ಪಡೆದೆ ನಂತರ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯಲ್ಲಿ ಆರಂಭಿಸಲಾಗಿರುವ ಕಭಿ ಕ್ಲಿನಿಕ್ ಮೂಲಕ ಪ್ರತಿನಿತ್ಯ ಆರೋಗ್ಯ ಸಲಹೆ ಪಡೆದೆ. ಪಿಸಿಯೋಥೆರೆಪಿ ಸಿಬ್ಬಂದಿಗಳು ಪ್ರತಿದಿನ ನನಗೆ ದೈಹಿಕವಾಗಿ ಸದೃಢವಾಗಲು ಉತ್ತಮ ಚಿಕಿತ್ಸೆಯನ್ನು ನೀಡಿದ್ದಾರೆ. ಟೆಲಿಕಾಲ್ ಮೂಲಕ ವಾಟ್ಸ್ಪ್ ವಿಡಿಯೋ ಕರೆ ಮೂಲಕ ಆರೋಗ್ಯ ಸುಧಾರಿಸುವಲ್ಲಿ ಕಭಿ ಕ್ಲಿನಿಕ್ ಸಾಕಷ್ಟು ನೆರವು ನೀಡಿದೆ ಎಂದು ಕಭಿ ಕ್ಲಿನಿಕ್ ಮೂಲಕ ಚಿಕಿತ್ಸೆ ಪಡೆದ ಮಹಿಳೆ ರೇಖಾ ತಿಳಿಸಿದ್ದಾರೆ.