ತಿರುವನಂತಪುರಂ: ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿ, ಸಿಬಿಐ (CBI) ಕೈಯಲ್ಲೂ ಬಗೆಹರಿಯದಿದ್ದ ಕೇರಳದ ಅಪ್ರತಿಮ ಕ್ರೂರ ‘ಅಂಚಲ್ ತ್ರಿವಳಿ ಕೊಲೆ ಪ್ರಕರಣ’ವನ್ನು (Anchal Triple Murder Case) ಬರೋಬ್ಬರಿ 19 ವರ್ಷಗಳ ಬಳಿಕ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ನೆರಡಿನಿಂದ ಭೇದಿಸಲಾಗಿದೆ.
ತಲೆಮರೆಸಿಕೊಂಡು ಹೊಸ ಗುರುತಿನೊಂದಿಗೆ ಬಿಂದಾಸ್ ಜೀವನ ನಡೆಸುತ್ತಿದ್ದ ಇಬ್ಬರು ಮಾಜಿ ಸೇನಾ ಯೋಧರನ್ನು ಪೊಲೀಸರು ಪಾಂಡಿಚೇರಿಯಲ್ಲಿ ಹೆಡೆಮುರಿ ಕಟ್ಟಿದ್ದಾರೆ.
ಏನಿದು ಭೀಕರ ಘಟನೆ?
ಅದು 2006ರ ಫೆಬ್ರವರಿ 10ರ ಮುಂಜಾವು. ಕೇರಳದ ಕೊಲ್ಲಂ ಜಿಲ್ಲೆಯ ಅಂಚಲ್ ಗ್ರಾಮದ ಮನೆಯೊಂದರಲ್ಲಿ ಶಾಂತಮ್ಮ ಎಂಬುವವರ ಮಗಳು ರಂಜಿನಿ (24) ಹಾಗೂ ಆಕೆಯ 17 ದಿನದ ಹಸುಗೂಸುಗಳಾದ ಅವಳಿ ಹೆಣ್ಣು ಕಂದಮ್ಮಗಳನ್ನು ಕುತ್ತಿಗೆ ಸೀಳಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಇಡೀ ಕೋಣೆಯೇ ರಕ್ತದ ಮಡುವಾಗಿ ಮಾರ್ಪಟ್ಟಿತ್ತು.
ಮಿಲಿಟರಿಯಲ್ಲಿದ್ದ ದಿವಿಲ್ ಕುಮಾರ್ ಎಂಬಾತ ರಂಜಿನಿಯನ್ನು ಪ್ರೀತಿಸಿ ಗರ್ಭಿಣಿಯನ್ನಾಗಿಸಿದ್ದ. ಆದರೆ ಆಕೆಯನ್ನು ಮದುವೆಯಾಗಲು ನಿರಾಕರಿಸಿದ್ದಲ್ಲದೆ, ಆ ಮಗು ತನ್ನದಲ್ಲ ಎಂದು ವಾದಿಸಿದ್ದ. ಕೊನೆಗೆ ಪ್ರಕರಣ ಕೋರ್ಟ್ ಮೆಟ್ಟಿಲೇರಿ, ಡಿಎನ್ಎ (DNA) ಪರೀಕ್ಷೆಗೆ ಆದೇಶವಾಗಿತ್ತು. ಡಿಎನ್ಎ ಪರೀಕ್ಷೆ ನಡೆದರೆ ತನ್ನ ಬಣ್ಣ ಬಯಲಾಗುತ್ತದೆ ಎಂದು ಹೆದರಿದ ದಿವಿಲ್ ಕುಮಾರ್, ತನ್ನ ಆಪ್ತ ಗೆಳೆಯ ಹಾಗೂ ಸಹೋದ್ಯೋಗಿ ಅನಿಲ್ ಕುಮಾರ್ (ನಿಜವಾದ ಹೆಸರು ರಾಜೇಶ್) ಎಂಬಾತನ ಸಹಾಯದಿಂದ ಈ ಭೀಕರ ಹತ್ಯಾಕಾಂಡ ನಡೆಸಿದ್ದ. ರಂಜಿನಿ ತಾಯಿ ಶಾಂತಮ್ಮ ಅವರನ್ನು ಪಂಚಾಯಿತಿಗೆ ಕಳುಹಿಸಿ, ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ತಾಯಿ ಮತ್ತು ಕಂದಮ್ಮಗಳನ್ನು ಕಟುಕನಂತೆ ಕತ್ತರಿಸಿ ಹಾಕಲಾಗಿತ್ತು.
ಕೈಚೆಲ್ಲಿದ್ದ ಸಿಬಿಐ, ಎಂಟ್ರಿ ಕೊಟ್ಟ AI!
ಸ್ಥಳೀಯ ಪೊಲೀಸರು ತನಿಖೆ ನಡೆಸಿದಾಗ ಹಂತಕರು ಬಳಸಿದ ಬೈಕ್ ಮತ್ತು ಎಟಿಎಂ ಕಾರ್ಡ್ ಮೂಲಕ ದಿವಿಲ್ ಕುಮಾರ್ ಮತ್ತು ರಾಜೇಶ್ ಲಿಂಕ್ ಸಿಕ್ಕಿತ್ತು. ಆದರೆ ಇಬ್ಬರೂ ನಾಸಿಕ್, ನಾಗ್ಪುರ ಪ್ರಾಂತ್ಯಗಳಲ್ಲಿ ಎಟಿಎಂ ಬಳಸಿ ಸಂಪೂರ್ಣವಾಗಿ ನಾಪತ್ತೆಯಾಗಿದ್ದರು. ಪಠಾಣ್‌ಕೋಟ್ ಬೆಟಾಲಿಯನ್ ಸೈನಿಕರಾಗಿದ್ದ ಇವರನ್ನು ಹಿಡಿಯಲು ಪೊಲೀಸರು ನಡೆಸಿದ ಪ್ರಯತ್ನ ಸಫಲವಾಗಲಿಲ್ಲ. ತೀವ್ರ ಒತ್ತಡದ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸಲಾಯಿತಾದರೂ, ಯಾವುದೇ ಸುಳಿವು ಸಿಗದೆ ಸಿಬಿಐ ಕೂಡ ಕೇಸ್ ಕ್ಲೋಸ್ ಮಾಡಿತ್ತು.
ಘಟನೆ ನಡೆದು 19 ವರ್ಷಗಳೇ ಕಳೆದಿದ್ದವು. ಅಂದು ಪ್ರಕರಣದ ತನಿಖೆ ನಡೆಸಿದ್ದ ಇನ್ಸ್‌ಪೆಕ್ಟರ್ ಪ್ರಸ್ತುತ ಇಂಟೆಲಿಜೆನ್ಸ್ ವಿಂಗ್ ಎಸ್‌ಪಿ (SP) ಆಗಿ ಬಡ್ತಿ ಪಡೆದಿದ್ದರು. ನಿದ್ರೆಯಲ್ಲೂ ಕಾಡುತ್ತಿದ್ದ ಈ ಕೇಸ್ ಮುಚ್ಚಿಹೋಗಲು ಬಿಡದ ಅಧಿಕಾರಿ, ಇಂಟರ್ನೆಟ್‌ನಲ್ಲಿ ಲಭ್ಯವಿದ್ದ ಹಳೆಯ ಫೋಟೋ ಒಂದನ್ನು ಬಳಸಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ಫೇಸ್ ರೆಕಗ್ನಿಷನ್ ತಂತ್ರಜ್ಞಾನದ ಮೂಲಕ ಅಂತರ್ಜಾಲವನ್ನು ಜಾಲಾಡಿದ್ದಾರೆ.
ಫೇಸ್‌ಬುಕ್ ಫೋಟೋದಲ್ಲಿ ಸಿಕ್ಕಿಬಿದ್ದ ಹಂತಕರು!
ವಾರಗಳ ಕಾಲ AI ನಡೆಸಿದ ಹುಡುಕಾಟದ ಫಲವಾಗಿ ಪಾಂಡಿಚೇರಿಯಲ್ಲಿ ನಡೆದ ಮದುವೆಯೊಂದರ ಫೋಟೋವೊಂದು ಪತ್ತೆಯಾಗಿದೆ. ಹಳೆಯ ಫೋಟೋಗೂ ಮತ್ತು ಈ ಮದುವೆ ಫೋಟೋಗೂ ಶೇ.90 ರಷ್ಟು ಹೋಲಿಕೆ ಇರುವುದನ್ನು AI ಪತ್ತೆಹಚ್ಚಿ ದೃಢಪಡಿಸಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಮತ್ತು ಸಿಬಿಐ ಜಂಟಿ ತಂಡ ಪಾಂಡಿಚೇರಿಗೆ ಲಗ್ಗೆ ಇಟ್ಟಿದೆ.
ಅಲ್ಲಿ ಹಂತಕರು ವಿಷ್ಣು ಮತ್ತು ಪ್ರವೀಣ್ ಕುಮಾರ್ ಎಂಬ ಹೊಸ ಹೆಸರಿನೊಂದಿಗೆ, ನಕಲಿ ಐಡೆಂಟಿಟಿ ಸೃಷ್ಟಿಸಿಕೊಂಡು ಇಂಟೀರಿಯರ್ ಡಿಸೈನಿಂಗ್ ಕಚೇರಿ ತೆರೆದು ಫ್ಯಾಮಿಲಿ ಜೊತೆ ಐಷಾರಾಮಿ ಜೀವನ ನಡೆಸುತ್ತಿದ್ದರು. ಸದ್ಯ ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದ್ದು, 19 ವರ್ಷಗಳ ಬಳಿಕ ಮೂರು ಮುಗ್ಧ ಜೀವಗಳಿಗೆ ನ್ಯಾಯ ಸಿಕ್ಕಂತಾಗಿದೆ. ತಂತ್ರಜ್ಞಾನದ ದುರ್ಬಳಕೆಯ ಬಗ್ಗೆ ಚರ್ಚೆಗಳಾಗುತ್ತಿರುವ ಈ ಕಾಲದಲ್ಲಿ, ಕ್ರಿಮಿನಲ್‌ಗಳನ್ನು ಹಿಡಿಯಲು AI ಎಷ್ಟು ಪ್ರಮುಖ ಪಾತ್ರ ವಹಿಸಬಲ್ಲದು ಎಂಬುದಕ್ಕೆ ಈ ಕೇಸ್ ಸಾಕ್ಷಿಯಾಗಿದೆ.
- 2006 Kerala twin babies murder
- Anchal triple murder case Kannada
- Anchal triple murder case Kerala
- Artificial Intelligence face recognition criminal arrest
- CBI failed AI solved case
- Kerala crime news updates
- Kerala Police AI investigation
- Kerala triple murder case solved
- Rajesh and Divil Kumar arrested
- ಅಂಚಲ್ ತ್ರಿವಳಿ ಕೊಲೆ ಪ್ರಕರಣ
- ಕೃತಕ ಬುದ್ಧಿಮತ್ತೆ ತನಿಖೆ
- ಕೇರಳ ಕ್ರೈಂ ನ್ಯೂಸ್
- ಕೇರಳ ಪೊಲೀಸ್ ಎಐ ತಂತ್ರಜ್ಞಾನ
- ಕೇರಳ ಸೈನಿಕರ ಕೊಲೆ ಕೇಸ್
- ದಿವಿಲ್ ಕುಮಾರ್ ರಾಜೇಶ್ ಬಂಧನ
- ರಂಜಿನಿ ಕೊಲೆ ಕೇಸ್
- ಸಿಬಿಐ ವಿಫಲ ಎಐ ಯಶಸ್ವಿ





Leave a comment