Home ಕ್ರೈಂ ನ್ಯೂಸ್ ಮದುವೆಯಾದ 5 ತಿಂಗಳಿಗೇ ಮಾಜಿ ಮಿಸ್ ಪುಣೆ ಟ್ವಿಶಾ ಶರ್ಮಾ ಸಾವು: ಪತಿ ಮನೆಯಲ್ಲಿ ನಿಗೂಢವಾಗಿ ಶವ ಪತ್ತೆ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಮದುವೆಯಾದ 5 ತಿಂಗಳಿಗೇ ಮಾಜಿ ಮಿಸ್ ಪುಣೆ ಟ್ವಿಶಾ ಶರ್ಮಾ ಸಾವು: ಪತಿ ಮನೆಯಲ್ಲಿ ನಿಗೂಢವಾಗಿ ಶವ ಪತ್ತೆ!

Share
ಮದುವೆ
Share

ಭೋಪಾಲ್: ಮದುವೆಯಾಗಿ ಕೇವಲ ಐದೇ ತಿಂಗಳಿಗೆ ಎಂಬಿಎ ಪದವೀಧರೆ ಹಾಗೂ ಮಾಜಿ ‘ಮಿಸ್ ಪುಣೆ’ ಟ್ವಿಶಾ ಶರ್ಮಾ (33) ಅವರು ಮಧ್ಯಪ್ರದೇಶದ ಭೋಪಾಲ್‌ನಲ್ಲಿರುವ ತಮ್ಮ ಪತಿಯ ಮನೆಯಲ್ಲಿ ನಿಗೂಢ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೇ 12 ರಂದು ಭೋಪಾಲ್‌ನ ಕಟಾರಾ ಹಿಲ್ಸ್‌ನಲ್ಲಿರುವ ಪತಿ ಸಮರ್ಥ್ ಸಿಂಗ್ ನಿವಾಸದಲ್ಲಿ ಟ್ವಿಶಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದೀಗ ಅವರ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದೆ.

ವರದಕ್ಷಿಣೆ ಕಿರುಕುಳ ಮತ್ತು ಕೊಲೆ ಆರೋಪ:

ಟ್ವಿಶಾ ಅವರ ಪತಿ ಸಮರ್ಥ್ ಸಿಂಗ್ ವಕೀಲರಾಗಿದ್ದು, ಇವರ ತಾಯಿ ಗಿರಿಬಾಲಾ ಸಿಂಗ್ ನಿವೃತ್ತ ನ್ಯಾಯಾಧೀಶರಾಗಿದ್ದಾರೆ. ಟ್ವಿಶಾ ಕುಟುಂಬಸ್ಥರು ಪತಿ ಮತ್ತು ಅತ್ತೆಯ ವಿರುದ್ಧ ವರದಕ್ಷಿಣೆ ಕಿರುಕುಳ, ದೈಹಿಕ ದೌರ್ಜನ್ಯ ಹಾಗೂ ಕೊಲೆ ಆರೋಪ ಮಾಡಿದ್ದಾರೆ. ಆರೋಪಿಗಳು ಪ್ರಭಾವಿಗಳಾಗಿರುವುದರಿಂದ ಸ್ಥಳೀಯ ಪೊಲೀಸರು ತನಿಖೆಯಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿರುವ ಮೃತಳ ಕುಟುಂಬಸ್ಥರು, ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರ ನಿವಾಸದ ಎದುರು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ ದೆಹಲಿಯ ಏಮ್ಸ್ (AIIMS) ಆಸ್ಪತ್ರೆಯಲ್ಲಿ ಮರು ಮರಣೋತ್ತರ ಪರೀಕ್ಷೆ ನಡೆಸಬೇಕೆಂದು ಆಗ್ರಹಿಸಿದ್ದಾರೆ. ಸದ್ಯ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (SIT) ರಚಿಸಲಾಗಿದೆ.

“ನಾನು ಸಿಲುಕಿಕೊಂಡಿದ್ದೇನೆ” – ಕೊನೆಯ ವಾಟ್ಸಾಪ್ ಸಂದೇಶಗಳು:

ಟ್ವಿಶಾ ಸಾವಿಗೂ ಮುನ್ನ ತಮ್ಮ ತಾಯಿ ಮತ್ತು ಸ್ನೇಹಿತರಿಗೆ ಕಳುಹಿಸಿದ್ದ ಕೊನೆಯ ವಾಟ್ಸಾಪ್ ಚಾಟ್‌ಗಳು ಲಭ್ಯವಾಗಿದ್ದು, ಅವುಗಳು ಅವರು ಅನುಭವಿಸುತ್ತಿದ್ದ ಮಾನಸಿಕ ಹಿಂಸೆಯನ್ನು ಬಿಚ್ಚಿಟ್ಟಿವೆ. ಏಪ್ರಿಲ್ 30 ರಂದು ತಾಯಿಗೆ ಕಳುಹಿಸಿದ ಸಂದೇಶದಲ್ಲಿ, “ನನ್ನ ಜೀವನ ನರಕವಾಗಿದೆ, ನನ್ನನ್ನು ಏಕೆ ಇಲ್ಲಿಗೆ ಕಳುಹಿಸಿದ್ರಿ? ಅವರು ನನ್ನ ಜೊತೆ ಮಾತನಾಡುತ್ತಲೇ ಇಲ್ಲ” ಎಂದು ಬರೆದುಕೊಂಡಿದ್ದಾರೆ. ಮೇ 7 ರಂದು ಸ್ನೇಹಿತನಿಗೆ ಕಳುಹಿಸಿದ ಸಂದೇಶದಲ್ಲಿ, “ನಾನು ಇಲ್ಲಿ ಕೆಟ್ಟದಾಗಿ ಸಿಲುಕಿಕೊಂಡಿದ್ದೇನೆ (I am trapped bro). ಮದುವೆಯಾಗಬೇಕೆಂಬ ಗಡಿಬಿಡಿಯಲ್ಲಿ ಯಾರೂ ಮದುವೆಯಾಗಬೇಡಿ. ಯೋಚನೆ ಮಾಡಿ ಮುಂದುವರಿಯಿರಿ” ಎಂದು ನೋವು ತೋಡಿಕೊಂಡಿದ್ದಾರೆ.

ಟ್ವಿಶಾ ಶರ್ಮಾ ಹಿನ್ನೆಲೆ:

ನೋಯ್ಡಾ ಮೂಲದ ಟ್ವಿಶಾ ಶರ್ಮಾ ಎಂಬಿಎ ಪದವೀಧರೆಯಾಗಿದ್ದು, ಮುಂಬೈ ಮತ್ತು ದೆಹಲಿಯ ಪ್ರಮುಖ ಸಂಸ್ಥೆಗಳಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದರು. ಇದರೊಂದಿಗೆ ಮಾಡೆಲಿಂಗ್ ಹಾಗೂ ನಟನೆಯಲ್ಲೂ ಆಸಕ್ತಿ ಹೊಂದಿದ್ದ ಅವರು, ತೆಲುಗಿನ ‘ಮುಗ್ಗುರು ಮೊನಗಾಳ್ಳು’ ಚಿತ್ರದಲ್ಲಿ ನಟಿಸಿದ್ದರು. 2024 ರಲ್ಲಿ ಡೇಟಿಂಗ್ ಆಪ್ ಮೂಲಕ ವಕೀಲ ಸಮರ್ಥ್ ಸಿಂಗ್ ಅವರ ಪರಿಚಯವಾಗಿ, ಡಿಸೆಂಬರ್ 2025 ರಲ್ಲಿ ಇಬ್ಬರೂ ವಿವಾಹವಾಗಿದ್ದರು. ಸದ್ಯ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯಡಿ (BNS) ವರದಕ್ಷಿಣೆ ಸಾವು ಮತ್ತು ಕಿರುಕುಳದ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *