Home ಕ್ರೈಂ ನ್ಯೂಸ್ ಸಾಧು ವೇಷಧಾರಿಗಳಿಂದ ಮಂತ್ರದಂಡ ಪ್ರಯೋಗ? ಹೂವಿನ ವಾಸನೆಗೆ ಮಂಕಾದ ಮೆಡಿಕಲ್ ಶಾಪ್ ಮಾಲೀಕನ ಹಣ, ಚಿನ್ನ ಲೂಟಿ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಸಾಧು ವೇಷಧಾರಿಗಳಿಂದ ಮಂತ್ರದಂಡ ಪ್ರಯೋಗ? ಹೂವಿನ ವಾಸನೆಗೆ ಮಂಕಾದ ಮೆಡಿಕಲ್ ಶಾಪ್ ಮಾಲೀಕನ ಹಣ, ಚಿನ್ನ ಲೂಟಿ!

Share
ಸಾಧು
Share

ರಾಯಚೂರು: ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ಸಾಧು ವೇಷಧಾರಿಗಳ ಗ್ಯಾಂಗ್‌ ಒಟ‍್ಟುಗೂಡಿ ಮೆಡಿಕಲ್ ಶಾಪ್ ಮಾಲೀಕನಿಗೆ ವಂಚಿಸಿ, ನಗದು ಹಾಗೂ ಚಿನ್ನದ ಉಂಗುರವನ್ನು ಲೂಟಿ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹೂವಿನ ವಾಸನೆ ಆಸ್ವಾದಿಸುತ್ತಿದ್ದಂತೆ ಅಂಗಡಿ ಮಾಲೀಕ ಪ್ರಜ್ಞೆ ಕಳೆದುಕೊಂಡು ಮಂಕಾದದ್ದನ್ನು ಬಂಡವಾಳವಾಗಿಸಿಕೊಂಡ ಖದೀಮರು ಕೈಚಳಕ ತೋರಿದ್ದಾರೆ.

ನಡೆದಿದ್ದೇನು?:

ಸಿಂಧನೂರು ಪಟ್ಟಣದ ಇಂದಿರಾನಗರ ರಸ್ತೆಯಲ್ಲಿರುವ ‘ಶ್ರೀ ಸಾಯಿ ಮೆಡಿಕಲ್ & ಜನರಲ್ ಸ್ಟೋರ್ಸ್‌’ಗೆ ಸಾಧು ವೇಷ ಧರಿಸಿದ್ದ ವ್ಯಕ್ತಿಯೊಬ್ಬ ಪ್ರವೇಶಿಸಿದ್ದಾನೆ. ತೀವ್ರ ಬಿಸಿಲಿನಿಂದ ಸುಸ್ತಾಗಿದ್ದೇನೆ ಎಂದು ಹೇಳಿ ಕುಡಿಯಲು ನೀರು ಕೇಳಿದ್ದಾನೆ. ಇದನ್ನು ನಂಬಿದ ಅಂಗಡಿ ಮಾಲೀಕ ವಿಷ್ಣುದತ್ತ ಅವರು ಮಾನವೀಯತೆ ಹಾಗೂ ಧಾರ್ಮಿಕ ಗೌರವದಿಂದ ಫ್ರಿಡ್ಜ್‌ನಲ್ಲಿದ್ದ ತಣ್ಣೀರನ್ನು ತಂದುಕೊಟ್ಟಿದ್ದಾರೆ. ನೀರು ಕುಡಿದ ಬಳಿಕ ಆ ಖದೀಮ, ನಿಮ್ಮ ಕುಟುಂಬಕ್ಕೆ ಹಾಗೂ ಮಕ್ಕಳಿಗೆ ಒಳ್ಳೆಯದಾಗಲಿ ಎಂದು ಹರಸಿ ಆಶೀರ್ವಾದದ ರೂಪದಲ್ಲಿ ಎರಡು ಹೂವುಗಳನ್ನು ವಿಷ್ಣುದತ್ತ ಅವರ ಕೈಗೆ ನೀಡಿದ್ದಾನೆ.

ಕ್ಷಣಾರ್ಧದಲ್ಲಿ ಮಂಕಾದ ಮಾಲೀಕ:

ಆರೋಪಿ ನೀಡಿದ ಹೂವಿನ ಪರಿಮಳವನ್ನು ಆಸ್ವಾದಿಸಿದ ತಕ್ಷಣವೇ ವಿಷ್ಣುದತ್ತ ಅವರು ತಮ್ಮ ಸುಧಾಬುಧ ಕಳೆದುಕೊಂಡು ‘ಮಂತ್ರಮುಗ್ಧ’ (Hypnotized) ಸ್ಥಿತಿಗೆ ತಲುಪಿದ್ದಾರೆ. ತಲೆ ಸಂಪೂರ್ಣ ಶೂನ್ಯವಾಗಿ, ಮಾತೇ ಆಡದಂತಾಗಿದ್ದಾರೆ. ಇದೇ ಸಂದರ್ಭವನ್ನು ಬಳಸಿಕೊಂಡ ಖದೀಮರು ಮಾಲೀಕನ ತಲೆಯ ಮೇಲೆ ಬಿಳಿ ವಸ್ತ್ರ ಹಾಕಿ, ಗಲ್ಲಾ ಪೆಟ್ಟಿಗೆಯಲ್ಲಿದ್ದ 10,500 ರೂ. ನಗದು ಹಾಗೂ ಅವರ ಬಲಗೈ ಬೆರಳಿನಲ್ಲಿದ್ದ 5 ಗ್ರಾಂ ತೂಕದ ಚಿನ್ನದ ಉಂಗುರವನ್ನು ದೋಚಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಸ್ವಲ್ಪ ಸಮಯದ ಬಳಿಕ ವಿಷ್ಣುದತ್ತ ಅವರು ಪೂರ್ಣಪ್ರಜ್ಞೆಗೆ ಬಂದಾಗ ತಮಗೆ ವಂಚನೆಯಾಗಿರುವುದು ಬೆಳಕಿಗೆ ಬಂದಿದೆ. “ಹೂವು ಮೂಸಿದ ಕೆಲವೇ ಸೆಕೆಂಡುಗಳಲ್ಲಿ ನನ್ನ ಮೆದುಳು ಸುನ್ನಾಯಿತು. ಅವರು ಹೇಳಿದ್ದನ್ನೆಲ್ಲಾ ಸುಮ್ಮನೆ ಕೇಳುವಂತಾಯಿತು” ಎಂದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ.

ಸಿಸಿಟಿವಿಯಲ್ಲಿ ಸೆರೆಯಾದ ಖದೀಮರ ದೃಶ್ಯ:

ಸಾಧು ವೇಷ ಧರಿಸಿ ಪಟ್ಟಣದಲ್ಲಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ನಾಲ್ಕಕ್ಕೂ ಹೆಚ್ಚು ವಂಚಕರ ಸಂಪೂರ್ಣ ಚಲನವಲನಗಳು ಮೆಡಿಕಲ್ ಶಾಪ್ ಹಾಗೂ ಆಸುಪಾಸಿನ ಸಿಸಿಟಿವಿ (CCTV) ಕ್ಯಾಮೆರಾಗಳಲ್ಲಿ ಸೆರೆಯಾಗಿವೆ. ಸದ್ಯ ಈ ಕುರಿತು ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಆರೋಪಿಗಳ ಪತ್ತೆಗಾಗಿ ತೀವ್ರ ಜಾಲ ಬೀಸಿದ್ದಾರೆ. ಅಪರಿಚಿತ ವ್ಯಕ್ತಿಗಳು ಧಾರ್ಮಿಕ ವೇಷದಲ್ಲಿ ಬಂದು ಇಂತಹ ಆಮಿಷ ಒಡ್ಡಿದರೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *