ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ಬೆಂಗಳೂರಿನಲ್ಲಿ ಮಾತನಾಡಿದ್ದು ದೇಶದ ಪ್ರಧಾನಿಯಾಗಿಯೋ? ಇಲ್ಲವೇ ರಾಜ್ಯ ಬಿಜೆಪಿ ಅಧ್ಯಕ್ಷರೋ? ಇಲ್ಲವೇ ರಾಜ್ಯದ ವಿರೋಧ ಪಕ್ಷದ ನಾಯಕರಾಗಿಯೋ? ಎನ್ನುವುದನ್ನು ಅವರೇ ಸ್ಪಷ್ಟಪಡಿಸಿ ಸಾರ್ವಜನಿಕರಲ್ಲಿ ಮೂಡಿರುವ ಗೊಂದಲವನ್ನು ಬಗೆಹರಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಧಾನಮಂತ್ರಿಯವರು ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಉದ್ದೇಶಿಸಿ ಮಾತನಾಡಿದ್ದರೂ ಅವರ ಮಾತಿನಲ್ಲಿ ಕೇಂದ್ರದಲ್ಲಿರುವ ಅವರದ್ದೇ ಸರ್ಕಾರದ ವೈಫಲ್ಯ ಮತ್ತು ರಾಜ್ಯದಲ್ಲಿರುವ ಅವರ ಪಕ್ಷದ ದುಸ್ಥಿತಿಯಯನ್ನು ಸರಿಪಡಿಸಲಾಗದ ಅಸಹಾಯಕತೆ ಇತ್ತು. ತನ್ನ ಎಲೆ ಮೇಲೆ ಆನೆ ಸತ್ತು ಬಿದ್ದಿದ್ದರೂ ಎದುರಿನವರ ಎಲೆ ಮೇಲೆ ಸತ್ತುಬಿದ್ದ ನೊಣವನ್ನು ಹುಡುಕಾಡುವ ಢೋಂಗಿ ಬುದ್ಧಿಯೂ ಅವರ ಭಾಷಣದಲ್ಲಿ ಇತ್ತು ಎಂದಿದ್ದಾರೆ.
ಪಂಡಿತ್ ಜವಾಹರಲಾಲ್ ನೆಹರೂ, ಇಂದಿರಾಗಾಂಧಿ, ಅಟಲ್ ಬಿಹಾರಿ ವಾಜಪೇಯಿಯವರೂ ಸೇರಿದಂತೆ ದೇಶದ ಪ್ರಧಾನಮಂತ್ರಿಯಾದವರು ಎಂದೂ ಕೆಟ್ಟ ರಾಜಕಾರಣಿಗಳ ರೀತಿ ಬೀದಿ ಭಾಷಣ ಮಾಡಿ ವಿರೋಧಪಕ್ಷಗಳನ್ನು ಹಳಿಯಲು ಹೋಗಿಲ್ಲ. ಅವರೆಲ್ಲರೂ ಕಾಪಾಡಿಕೊಂಡು ಬಂದಿದ್ದ ಪ್ರಧಾನಿ ಕುರ್ಚಿಯ ಘನತೆ, ಗಾಂಭಿರ್ಯ ಮತ್ತು ಔಚಿತ್ಯವನ್ನು ನರೇಂದ್ರ ಮೋದಿಯವರು ತಮ್ಮ ಸುಳ್ಳು, ಕೀಳು ಅಭಿರುಚಿ ಮತ್ತು ದ್ವೇಷಾಸೂಯೆಗಳನ್ನು ವ್ಯಕ್ತಪಡಿಸುವ ಭಾಷಣಗಳ ಮೂಲಕ ಮಣ್ಣುಪಾಲು ಮಾಡುತ್ತಿದ್ದಾರೆ. ಬೆಂಗಳೂರಿಗೆ ಬಂದಿದ್ದ ಮೋದಿಯವರು ಇನ್ನೂ ಪಂಚ ರಾಜ್ಯಗಳ ಚುನಾವಣಾ ರ್ಯಾಲಿಯಗಳ ಗುಂಗಿನಲ್ಲಿಯೇ ಇದ್ದಂತೆ ಕಂಡರು. 2024-25ರಲ್ಲಿಯೇ ಭಾರತವನ್ನು 5 ತ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶ ಮಾಡುವೆ ಎಂದು ಕೊಚ್ಚಿಕೊಂಡಿದ್ದ, ಭಾರತದ ಅಭಿವೃದ್ದಿ ರಥ ನಾಗಾಲೋಟದಿಂದ ಮುಂದೋಡುತ್ತಿದೆ ಎಂದು ಬೀಗಿದ್ದ ಮತ್ತು ದೇಶದ ಬಡತನವನ್ನು ನಿರ್ಮೂಲನೆ ಮಾಡಿ ಆಗಿದೆ ಎಂದು ತನ್ನ ಬೆನ್ನನ್ನು ತಾನೇ ಚಪ್ಪರಿಸಿಕೊಂಡಿದ್ದ ಪ್ರಧಾನಿಯವರು ಈಗ ಚಿನ್ನ ಖರೀದಿಸಬೇಡಿ, ಪೆಟ್ರೋಲ್ ಮತ್ತು ಖಾದ್ಯ ಎಣ್ಣೆ ಕಡಿಮೆ ಬಳಸಿ, ವಿದೇಶ ಪ್ರವಾಸ ಮಾಡಬೇಡಿ ಮತ್ತು ಗೊಬ್ಬರ ಬಳಕೆ ತಗ್ಗಿಸಿ ಎಂದು ಬೇಡಿಕೊಳ್ಳುತ್ತಿರುವುದು ಯಾವ ಅಭಿವೃದ್ದಿಯ ಲಕ್ಷಣ ಎನ್ನುವುದನ್ನು ಮೋದಿಯವರೇ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಖಾದ್ಯತೈಲ ಎಲ್ಲವೂ ದುಬಾರಿಯಾಗಿ ದೇಶದ ಜನರ ನಿತ್ಯದ ಜೀವನ ನಿರ್ವಹಣೆಗಾಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣಕ್ಕೆ ದೇಶದ ಎಡಬಿಡಂಗಿ ವಿದೇಶಾಂಗ ನೀತಿ ಕಾರಣ ಎನ್ನುವುದನ್ನು ಅರಿತುಕೊಳ್ಳುವಷ್ಟು ಜನತೆ ಪ್ರಬುದ್ಧರಾಗಿದ್ದಾರೆ. ಇರಾನ್ ವಿರುದ್ಧ ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ನಡೆಸುತ್ತಿರುವ ಯುದ್ಧದ ನಡುವೆ ಭಾರತ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿದೆ. ಇಂತಹ ಸಂದರ್ಭದಲ್ಲಿ ನ್ಯಾಯ ಮತ್ತು ನೀತಿಯ ಪರವಾಗಿ ಗಟ್ಟಿಯಾದ ನಿಲುವು ತೆಗೆದುಕೊಂಡಿದ್ದರೆ ಭಾರತ ಇಂದಿನ ದುಸ್ಥಿತಿಯನ್ನು ಎದುರಿಸುತ್ತಿರಲಿಲ್ಲ. ಮೋದಿಯವರೇ, ಈ ವೈಫಲ್ಯಕ್ಕೆ ಯಾರನ್ನು ದೂರುತ್ತೀರಿ? ಜವಾಹರಲಾಲ್ ನೆಹರೂ ಅವರನ್ನೇ? ಕಾಂಗ್ರೆಸ್ ಪಕ್ಷವನ್ನೇ? ಉತ್ತರಿಸಿ ಎಂದು ಸವಾಲೆಸೆದಿದ್ದಾರೆ.
ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕದ ಆರ್ಥಿಕ ಪರಿಸ್ಥಿತಿ ಸುಭದ್ರವಾಗಿದೆ. ದೇಶದ ತಲಾವಾರು ಆದಾಯ ರೂ.2.11 ಲಕ್ಷ ರೂ.ಗಳಾಗಿದ್ದರೆ ಕರ್ನಾಟಕದ್ದು 4.33 ಲಕ್ಷ ರೂಪಾಯಿಗಳು. ದೇಶದ ಜಿಡಿಪಿ ಬೆಳವಣಿಗೆಯ ದರ ಶೇಕಡಾ 7.4 ಆಗಿದ್ದರೆ, ಕರ್ನಾಟಕದ್ದು ಶೇಕಡಾ 8.1 ಆಗಿದೆ. ದೇಶದ ಜಿಡಿಪಿಯಲ್ಲಿ ಕರ್ನಾಟಕದ ಪಾಲು ಶೇಕಡಾ 9.19 ಆಗಿದೆ. ಜಿಎಸ್ಟಿ ಸಂಗ್ರಹದಲ್ಲಿ ಮಹಾರಾಷ್ಟ್ರದ ನಂತರ ಕರ್ನಾಟಕದ್ದೇ ಅತ್ಯಧಿಕ ಪಾಲು ಎಂದು ತಿಳಿಸಿದ್ದಾರೆ.
ಪ್ರಧಾನಿಗಳೇ, ಕರ್ನಾಟಕವು ಅಭಿವೃದ್ದಿಯ ಪಥದಲ್ಲಿ ವೇಗದಲ್ಲಿ ಸಾಗುತ್ತಿರುವುದಕ್ಕೆ ಇನ್ನೇನು ಪುರಾವೆ ಬೇಕು? ಮುಂದಿನ ಬಾರಿ ನಮ್ಮ ಸರ್ಕಾರದ ವಿರುದ್ಧ ಆರೋಪ ಮಾಡುವಾಗ ಸ್ವಲ್ಪ ಪೂರ್ವ ತಯಾರಿ ಮಾಡಿಕೊಂಡು ಬನ್ನಿ. ದೇಶದ ಪ್ರಧಾನಿಯವರ ಬಾಯಲ್ಲಿ ಸುಳ್ಳು ಹೇಳಿಕೆಗಳು ಶೋಭೆಯಲ್ಲ ಎಂದು ಕಿಡಿಕಾರಿದ್ದಾರೆ.
- 5 Trillion Dollar Economy
- 5 ತ್ರಿಲಿಯನ್ ಡಾಲರ್ ಆರ್ಥಿಕತೆ
- Bengaluru Speech
- Congress vs BJP
- Foreign Policy
- Karnataka GDP
- Narendra Modi
- Per Capita Income
- Petrol Price Hike
- Political War Karnataka.
- Siddaramaiah
- ಕರ್ನಾಟಕ ಆರ್ಥಿಕತೆ
- ಕಾಂಗ್ರೆಸ್ ಸರ್ಕಾರ
- ಜಿಡಿಪಿ
- ನರೇಂದ್ರ ಮೋದಿ
- ಪೆಟ್ರೋಲ್ ಬೆಲೆ
- ಬೆಂಗಳೂರು ಭಾಷಣ
- ಬೆಲೆ ಏರಿಕೆ
- ವಿದೇಶಾಂಗ ನೀತಿ
- ಸಿದ್ದರಾಮಯ್ಯ
- ಸಿದ್ದರಾಮಯ್ಯ ಸವಾಲು.





Leave a comment