ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಪಕ್ಷದ ವಿಶ್ವಾಸದ್ರೋಹದ ಚರಿತ್ರೆಯನ್ನು ಒಮ್ಮೆ ನೆನಪುಮಾಡಿಕೊಂಡಿದ್ದರೆ ಅವರು ಖಂಡಿತ ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸದ್ರೋಹದ ಆರೋಪವನ್ನು ಮಾಡುತ್ತಿರಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬಿಎಸ್‌ಪಿ, ಟಿಎಂಸಿ, ಡಿಎಂಕೆ, ಎಐಡಿಎಂಕೆ, ಪಿಡಿಪಿ, ಶಿವಸೇನೆ, ಅಕಾಲಿದಳ, ನ್ಯಾಷನಲ್ ಕಾನ್ಫರೆನ್ಸ್ ಸೇರಿದಂತೆ ಬಿಜೆಪಿ ಜೊತೆ ಮೈತ್ರಿಮಾಡಿಕೊಂಡು ವಿಶ್ವಾಸದ್ರೋಹಕ್ಕೊಳಗಾದ ಪ್ರಾದೇಶಿಕ ಪಕ್ಷಗಳ ಪಟ್ಟಿ ಬೆಳೆಯುತ್ತಲೇ ಇದೆ. ಇನ್ನೊಂದೆಡೆ ಕಾಂಗ್ರೆಸ್ ಮತ್ತು ಇತರ ಪಕ್ಷಗಳ ನಾಯಕರನ್ನು ಬ್ಲಾಕ್ ಮೇಲ್ ಮಾಡಿ ಅವರು ತಮ್ಮ ಪಕ್ಷಗಳಿಗೆ ವಿಶ್ವಾಸದ್ರೋಹ ಎಸಗುವಂತೆ ಮಾಡಿ, ಜೊತೆಯಲ್ಲಿ ಸೇರಿಸಿಕೊಂಡ ವಿರೋಧ ಪಕ್ಷದ ನಾಯಕರ ಪಟ್ಟಿಯೂ ಬೆಳೆಯುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು. ಇಂತಹ ವಿಶ್ವಾಸದ್ರೋಹಿ ಪಕ್ಷದ ನಾಯಕರಾದ ಮೋದಿವಯರು ಕಾಂಗ್ರೆಸ್ ಪಕ್ಷದ ವಿರುದ್ಧ ವಿಶ್ವಾಸದ್ರೋಹದ ಆರೋಪ ಮಾಡುತ್ತಿರುವುದನ್ನು ನೋಡಿ ದೇಶದ ಜನರೇ ಅಪಹಾಸ್ಯ ಮಾಡುತ್ತಿದ್ದಾರೆ ಎಂದಿದ್ದಾರೆ.
ಕರ್ನಾಟಕದ ಬಿಜೆಪಿಯ ಸ್ಥಿತಿ ಬುಟ್ಟಿಯಲ್ಲಿ ಕೂಡಿ ಹಾಕಿರುವ ಏಡಿಗಳಂತಾಗಿದೆ. ಒಬ್ಬರ ಕಾಲನ್ನು ಮತ್ತೊಬ್ಬರು ಎಳೆದುಕೊಂಡು ರಾಜಕೀಯ ಹರಾಕಿರಿ ನಡೆಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಕುಟುಂಬಕ್ಕೆ ಎದುರಾಗಿ ಪಕ್ಷದೊಳಗೆ ಅರ್ಧ ಡಜನ್ ಗುಂಪುಗಳಿವೆ. ಈ ಗುಂಪುಗಳ ನಾಯಕರು ಯಡಿಯೂರಪ್ಪ ವಿರುದ್ಧ ನೂರಾರು ಆರೋಪಗಳನ್ನು ಮಾಡಿದ್ದರೂ ಅವರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ‍್ಳುವ ಧೈರ್ಯ 56 ಇಂಚಿನ ಎದೆಯಳತೆಯ ನಾಯಕರಲ್ಲಿ ಇಲ್ಲ. ರಾಜ್ಯ ಬಿಜೆಪಿ ಅಧ್ಯಕ್ಷರ ಮಾತಿಗೆ ಆ ಪಕ್ಷದಲ್ಲಿ ಕವಡೆಕಾಸಿನ ಕಿಮ್ಮತ್ತಿಲ್ಲ ಎಂದು ಆರೋಪಿಸಿದ್ದಾರೆ.
ಪಕ್ಷವೇ ಅಮಾನತುಗೊಳಿಸಿದ್ದ ನಾಯಕರ ಕಾಲಿಗೆಬಿದ್ದು ಕರೆತಂದು ಚುನಾವಣಾ ಪ್ರಚಾರ ಮಾಡುವಷ್ಟರ ಮಟ್ಟಿಗೆ ರಾಜ್ಯದ ಬಿಜೆಪಿಯ ಸ್ಥಿತಿ ಕೆಟ್ಟುಹೋಗಿದೆ. ಇಂತಹವರು ಕಾಂಗ್ರೆಸ್ ಪಕ್ಷಕ್ಕೆ ಬುದ್ಧಿ ಹೇಳಲು ಹೊರಟಿದ್ದಾರೆ. ಪ್ರಧಾನಿಯವರೇ ಮೊದಲು ಕುಸಿದು ಬೀಳುತ್ತಿರುವ ನಿಮ್ಮ ಮನೆಯನ್ನು ಭದ್ರಮಾಡಿಕೊಳ್ಳಿ, ನಂತರ ನಮ್ಮ ಬಗ್ಗೆ ಮಾತನಾಡಿ ಎಂದಿದ್ದಾರೆ.





Leave a comment