SUDDIKSHANA KANNADA NEWS/ DAVANAGERE/ DATE:30-10-2024
ದಾವಣಗೆರೆ: ಸಮಸ್ತ ಕನ್ನಡಿಗರ ಸ್ವಾಭಿಮಾನದ ಸಂಕೇತವಾದ ಕನ್ನಡದ ಬಾವುಟವನ್ನು ನವೆಂಬರ್ 1 ರ ರಾಜ್ಯೋತ್ಸವದ ಸಂಭ್ರಮದಂದು ಎಲ್ಲ ಕನ್ನಡಿಗರು ತಮ್ಮ ಮನೆಯ ಮೇಲೆ ಹಾರಿಸುವ ಮೂಲಕ ಕನ್ನಡದ ಕಣ್ವ ಎಂದೇ ಪ್ರಖ್ಯಾತರಾದ ಬಿ.ಎಂ.ಶ್ರೀಕಂಠಯ್ಯನವರು ರಚಿಸಿದ “ಏರಿಸಿ ಹಾರಿಸಿ ಕನ್ನಡದ ಬಾವುಟ, ಹಾರಿಸಿ ತೋರಿಸಿ ಕೆಚ್ಚೆದೆಯ ಬಾವುಟ” ಎನ್ನುವಂತೆ ಅರ್ಥಪೂರ್ಣವಾಗಿ ಕನ್ನಡ ಪ್ರೇಮವನ್ನು ಮೆರೆಯೋಣ ಎಂದು ಚನ್ನಗಿರಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಸವಾಪಟ್ಟಣದ ಎಲ್.ಜಿ.ಮಧುಕುಮಾರ್ ಕರೆ ನೀಡಿದ್ದಾರೆ.
ನವೆಂಬರ್ 1 ರಂದು ರಾಜ್ಯೋತ್ಸವವನ್ನು ಪ್ರತಿಯೊಬ್ಬ ಕನ್ನಡಿಗರು ಕರ್ನಾಟಕ ಅಷ್ಟೇ ಅಲ್ಲದೇ ಗಡಿನಾಡಿನಾಚೆಗೂ ಸಂಭ್ರಮದಿಂದ ಆಚರಿಸುತ್ತಾರೆ. ಅದರೊಂದಿಗೆ ಈ ಬಾರಿ ಪ್ರತಿಯೊಬ್ಬ ಕನ್ನಡಿಗನೂ ನಮ್ಮ ಭಾಷೆ, ಸಂಸ್ಕೃತಿ, ಪರಂಪರೆಯ ಧ್ಯೋತಕವಾದ ಕನ್ನಡದ ಧ್ವಜವನ್ನು ಸ್ವ-ಇಚ್ಛೆಯಿಂದ, ಹೆಮ್ಮೆಯಿಂದ ಪ್ರತಿಯೊಬ್ಬರ ಮನೆಯ ಮೇಲೆ ಹಾರಿಸುವ ಮೂಲಕ ಕನ್ನಡದ ಹಬ್ಬವನ್ನು ಆಚರಿಸಬೇಕಾಗಿದೆ ಎಂದು ಹೇಳಿದ್ದಾರೆ.
ಈಗಿರುವ ಕನ್ನಡ ಬಾವುಟದ ಹಳದಿ ಬಣ್ಣವು ಕನ್ನಡಿಗರ ಸ್ವಾಭಿಮಾನ, ಶಾಂತಿ ಮತ್ತು ರಕ್ಷಣೆಯ ಪ್ರತೀಕ. ಜತೆಗೆ ಕನ್ನಡ ನಾಡು ಚಿನ್ನದ ಬೀಡು ಎಂಬುದನ್ನು ಪ್ರತಿಪಾದಿಸುತ್ತದೆ. ಕೆಂಪು ಬಣ್ಣವು ಕನ್ನಡಿಗರ ಕ್ಷಾತ್ರತೇಜ, ತ್ಯಾಗ ಮತ್ತು ಕ್ರಾಂತಿಯ ಪ್ರತೀಕವಾಗಿದೆ .ಆಗಾಗಿ ಎಲ್ಲೆಡೆಯೂ ಹಳದಿ ಕೆಂಪು ಬಣ್ಣಗಳ ಬಾವುಟ ರಾರಾಜಿಸಲಿ.ಸ್ಫೂರ್ತಿಯ ಸೆಲೆ ಎಲ್ಲೆಡೆಯೂ ಪಸರಿಸಲಿ.ಎಲ್ಲರ ಮನ-ಮನೆಗಳಲ್ಲೂ ಕನ್ನಡತನ ಮೆರೆಯಲಿ ಎಂದು ಎಲ್.ಜಿ.ಮಧುಕುಮಾರ್ ಆಶಯ ವ್ಯಕ್ತಪಡಿಸಿದ್ದಾರೆ.