ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಮತ್ತು ಬಾಗಲಕೋಟೆ ಕ್ಷೇತ್ರದ ಉಪಚುನಾವಣೆಗಳು 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ. ಈ ಕಾರಣಕ್ಕಾಗಿ ಈ ಎರಡೂ ಉಪಚುನಾವಣೆಗಳು ಮಹತ್ವದ್ದು. ಕಾಂಗ್ರೆಸ್ ಪಕ್ಷವು ಈ ಎರಡೂ ಕ್ಷೇತ್ರಗಳಲ್ಲಿ ಗೆಲ್ಲಲೇಬೇಕಿದೆ. ಈ ಬಗ್ಗೆ ಎಐಸಿಸಿ ವರಿಷ್ಠರು ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಾಧ್ಯಕ್ಷ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಉಸ್ತುವಾರಿ ಸಮಿತಿ ಸಂಚಾಲಕ ಮಂಜುನಾಥ ಭಂಡಾರಿ ಹೇಳಿದ್ದಾರೆ.
ಡಾ. ಶಾಮನೂರು ಶಿವಶಂಕರಪ್ಪನವರ ನಿಧನದಿಂದ ತೆರವಾಗಿರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಏಪ್ರಿಲ್ 9ರಂದು ಉಪ ಚುನಾವಣೆ ನಿಗದಿ ಆದ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಪಕ್ಷದ ಅಭ್ಯರ್ಥಿ ಆಯ್ಕೆ ಸಂಬಂಧ ಕರೆದಿದ್ದ ಜಿಲ್ಲಾ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಸಮಿತಿಯಲ್ಲಿ ಸಚಿವರು ಇದ್ದು, ವಿಧಾನಮಂಡಲ ಅಧಿವೇಶನ ನಡೆಯುತ್ತಿರುವುದರಿಂದ ಬರಲು ಆಗಿಲ್ಲ. ಅಧಿವೇಶನದಲ್ಲಿ ನಾನೂ ಭಾಗವಹಿಸಬೇಕಿತ್ತು. ಆದರೆ ಪಕ್ಷದ ಕರ್ತವ್ಯದ ಮೇರೆಗೆ ಬಂದಿದ್ದೇನೆ. ಈ ಎರಡೂ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಬೇಕು. ಎರಡು ಉಪಚುನಾವಣೆಗಳು ಮುಂದಿನ ವಿಧಾನಸಭೆ ಚುನಾವಣೆಯ ದಿಕ್ಸೂಚಿ. ಮುಂದೆ ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ ಚುನಾವಣೆಗಳು ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಗೆಲ್ಲಲೇಬೇಕಿದೆ. ಆಗ ಮಾತ್ರ ನಿಮಗೂ ಮುಂದೆ ಉತ್ತಮ ಅವಕಾಶ ಬರುತ್ತವೆ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಹಾಗೂ ಡಿ. ಕೆ. ಶಿವಕುಮಾರ್ ಅವರು ಈ ಎರಡೂ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲೇಬೇಕೆಂಬ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ವೇದಿಕೆ ಮೇಲೆ ಕುಳಿತವರಿಂದ ಚುನಾವಣೆ ಎದುರಿಸಲು ಆಗಲ್ಲ. ಕಾರ್ಯಕರ್ತರು ಈ ಚುನಾವಣೆ ಮಾಡಬೇಕು. ತಮ್ಮೆಲ್ಲರ ಅಭಿಪ್ರಾಯ ಪಡೆದು ಚುನಾವಣೆಯಲ್ಲಿ ಗೆಲ್ಲಲು ಕಾರ್ಯತಂತ್ರ ರೂಪಿಸಲು ನಿಮ್ಮ ಅಭಿಪ್ರಾಯ ಪಡೆಯುತ್ತೇನೆ. ಹೆಚ್. ಎಂ. ರೇವಣ್ಣ, ಆಂಜನೇಯ ಅವರು ಹೇಳಿದ ಹಾಗೆ ಸ್ಪಷ್ಟವಾದ ಚಿತ್ರಣ ಕೊಡಬೇಕು. ನೀವು ಬಹಿರಂಗವಾಗಿ ಹೇಳಬಹುದು, ಇಲ್ಲದಿದ್ದರೆ ಬರೆದುಕೊಡಬಹುದು. ಈ ಸೂಚನೆಗಳನ್ನು ಪಕ್ಷದ ವರಿಷ್ಟರಿಗೆ ಮುಟ್ಟಿಸುವ ಜವಾಬ್ದಾರಿ ನಮ್ಮದು. ನಮಗೆ ನೀಡಿರುವ ಜವಾಬ್ದಾರಿಯನ್ನು ಲೋಪದೋಷಗಳು ಬರದಂತೆ ನಾವು ಮಾಡುತ್ತೇವೆ ಎಂದು ತಿಳಿಸಿದರು.
ಚುನಾವಣೆ ಅಭ್ಯರ್ಥಿ ಆಯ್ಕೆ ಮಾಡುವ ಜವಾಬ್ದಾರಿ ವರಿಷ್ಠ ಮಂಡಳಿಗೆ ಬಿಟ್ಟದ್ದು. ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಸಲಹೆ ನೀಡಿದ್ದಾರೆ. ನಿಮ್ಮ ಸಲಹೆ, ಸೂಚನೆ ಖಂಡಿತವಾಗಿಯೂ ವರಿಷ್ಠರಿಗೆ ತಲುಪಿಸುತ್ತೇವೆ. ಡಿ. ಕೆ. ಶಿವಕುಮಾರ್ ಭೇಟಿ ಮಾಡಿ ವರದಿ ನೀಡುತ್ತೇವೆ ಎಂದು ಹೇಳಿದರು.
- 2028 Karnataka Assembly Election
- 2028ರ ವಿಧಾನಸಭೆ ಚುನಾವಣೆ ದಿಕ್ಸೂಚಿ
- Bagalkot Bypoll
- Congress Strategy
- Davanagere South By-election
- DK Shivakumar
- Karnataka Politics News
- KPCC
- Manjunath Bhandari
- Shamanur Shivashankarappa
- Siddaramaiah
- ಕರ್ನಾಟಕ ರಾಜಕೀಯ
- ಕಾಂಗ್ರೆಸ್ ಕಾರ್ಯಕರ್ತರ ಸಭೆ
- ಡಿ. ಕೆ. ಶಿವಕುಮಾರ್
- ದಾವಣಗೆರೆ ದಕ್ಷಿಣ ಉಪಚುನಾವಣೆ
- ಬಾಗಲಕೋಟೆ ಉಪಚುನಾವಣೆ
- ಮಂಜುನಾಥ ಭಂಡಾರಿ
- ಶಾಮನೂರು ಶಿವಶಂಕರಪ್ಪ
- ಸಿದ್ದರಾಮಯ್ಯ





Leave a comment