SUDDIKSHANA KANNADA NEWS/ DAVANAGERE/ DATE:04-10-2024
ಬೆಂಗಳೂರು: ಕಳೆದ ಕೆಲ ದಿನಗಳಿಂದ ಬಿಎಂಟಿಸಿ ಬಸ್ ಕಂಡಕ್ಟರ್ ಹಾಗೂ ಚಾಲಕರ ಮೇಲೆ ಹಲ್ಲೆ ಪ್ರಕರಣ ನಡೆಯುತ್ತಿವೆ. ಈ ನಡುವೆ ಕೆಲ ಪ್ರಯಾಣಿಕರ ಕಿರಿಕಿರಿ ಹೇಳತೀರದ್ದಾಗಿದೆ. ಮಾತ್ರವಲ್ಲ, ಕಂಡಕ್ಟರ್ ಮೇಲೆ ಹಲ್ಲೆ ಕೂಡ ನಡೆಸಲಾಯಿತು. ಚಾಕುವಿನಿಂದ ಇರಿಯಲಾಗಿದೆ. ಕಂಡಕ್ಟರ್ ಮೇಲೂ ಹಲ್ಲೆಯಾಗಿದೆ. ಆದ ಕಾರಣ ಕಂಡಕ್ಟರ್, ಡ್ರೈವರ್ ಗಳು ಆತಂಕದಲ್ಲಿಯೇ ಕೆಲಸ ನಿರ್ವಹಿಸುವಂತಾಗಿದೆ.
ಈ ಹಿನ್ನೆಲೆಯಲ್ಲಿ ನಮಗೂ ಭದ್ರತೆ ಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ. ಅದೂ ನಮಗೂ ಗನ್ ಇಟ್ಟುಕೊಳ್ಳೋಕೆ ಅನುಮತಿ ನೀಡುವಂತೆ ಬಿಎಂಟಿಸಿ ಎಂಡಿಗೆ ಪತ್ರ ಬರೆದಿದ್ದಾರೆ. ಈ ವಿಚಿತ್ರ ಬೇಡಿಕೆಗೆ ಎಂಡಿ ಸುಸ್ತೋ ಸುಸ್ತೋ ಎಂಬಂತಾಗಿದೆ.
ಬೆಂಗಳೂರಿನ ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಅಕ್ಟೋಬರ್ 1ರಂದು ಸಂಜೆ 7 ಗಂಟೆ ಸುಮಾರಿಗೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಿಎಂಟಿಸಿ 13ನೇ ಘಟಕದ ವೋಲ್ವೋ ಬಸ್ ನಿರ್ವಾಹಕ ಯೋಗೇಶ್ ಎಂಬುವವರ ಮೇಲೆ ಚಾಕುವಿನಿಂದ ಪ್ರಯಾಣಿಕ ಇರಿದಿದ್ದ. ಈ ಘಟನೆ ಬೆನ್ನಲ್ಲೇ ಈಗ ಬಿಎಂಟಿಸಿಯ ಕಂಡಕ್ಟರ್, ಡ್ರೈವರ್ಗಳು ಬಿಎಂಟಿಸಿ ಎಂಡಿಗೆ ಪತ್ರ ಬರೆದಿದ್ದು ಗನ್ ಇಟ್ಟುಕೊಳ್ಳಲು ಅನುಮತಿ ನೀಡುವಂತೆ ಮನವಿ ಮಾಡಿದ್ದಾರೆ.
ಬಿಎಂಟಿಸಿ ಎಂಡಿ ರಾಮಚಂದ್ರನ್ ಅವರಿಗೆ ಪತ್ರ ಬರೆದಿರುವ ಬಿಎಂಟಿಸಿಯ ಡ್ರೈವರ್, ಕಂಡಕ್ಟರ್ಗಳು ಆತ್ಮ ರಕ್ಷಣೆಗಾಗಿ ಗನ್ ನೀಡುವಂತೆ ಕೇಳಿಕೊಂಡಿದ್ದಾರೆ.ಬಿಎಂಟಿಸಿ ಕಂಡಕ್ಟರ್ಗೆ ಚಾಕು ಇರಿತದ ಹಿನ್ನೆಲೆಯಲ್ಲಿ ಚಾಲಕ ಮತ್ತು ನಿರ್ವಾಹಕರಿಗೆ ಗನ್ ಲೈಸನ್ಸ್ ಪಡೆಯಲು ಅನುಮತಿ ನೀಡುವಂತೆ ಕೋರಿದ್ದಾರೆ.
ವೈಟ್ ಫೀಲ್ಡ್ ಬಳಿಯ ಐಟಿಪಿಎಲ್ ಬಿಎಂಟಿಸಿ ಬಸ್ ಸ್ಟ್ಯಾಂಡ್ ನಲ್ಲಿ ಬಿಎಂಟಿಸಿ ಕಂಡಕ್ಟರ್ ಯೋಗೇಶ್ ಅವರಿಗೆ ಜಾರ್ಖಂಡ್ ಮೂಲದ ಹರ್ಷ ಸಿನ್ಹಾ ಚಾಕು ಇರಿದಿದ್ದ. ಕಂಡಕ್ಟರ್ ಯೋಗೇಶ್ ಸದ್ಯ ವೈದೇಹಿ ಆಸ್ಪತ್ರೆ ಐಸಿಯುನಲ್ಲಿ ಚಿಕಿತ್ಸೆ
ಪಡೆಯುತ್ತಿದ್ದಾರೆ. ಇದೀಗ ಬಿಎಂಟಿಸಿ ಕಂಡಕ್ಟರ್ ಡ್ರೈವರ್ ಗಳಿಗೆ ಆತ್ಮರಕ್ಷಣೆಗಾಗಿ ಗನ್ ಇಟ್ಟುಕೊಳ್ಳಲು ಅನುಮತಿ ನೀಡುವಂತೆ ಮನವಿ ಮಾಡಲಾಗಿದ್ದು, ಪ್ರತಿ ದಿನ 24 ಗಂಟೆ ತಮ್ಮ ಜೀವದ ಹಂಗು ತೊರೆದು ಬೃಹತ್ ಬೆಂಗಳೂರು ಮಹಾನಗರದ ಸಂಚಾರಿ ದಟ್ಟಣೆಯಲ್ಲಿ, ಕಲುಷಿತ ವಾಯುಮಾಲಿನ್ಯದಿಂದ ನಿರಂತರ ಕರ್ತವ್ಯ ನಿರ್ವಹಿಸುವ ಚಾಲಕ ಮತ್ತು ನಿರ್ವಾಹಕರು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ, ಹಾಗಾಗಿ, ಆರೋಗ್ಯ ಮತ್ತು ರಕ್ಷಣೆಗೆ ಹೆಚ್ಚಿನ ಒತ್ತು ನೀಡುವಂತೆ ಮನವಿ ಮಾಡಿದ್ದಾರೆ.
ಕುಟುಂಬದ ಸದಸ್ಯರೊಂದಿಗೆ ಸಮಯ ಕಳೆಯಲು ಸಾಧ್ಯವಾಗಿರುವುದಿಲ್ಲ. ಆದರೆ, ಸಂಚಾರಿ ದಟ್ಟಣೆಯಲ್ಲಿ ವಾಹನ ಸವಾರರ ಹಾಗೂ ಬಸ್ಸಿನ ಪ್ರಯಾಣಿಕರ ಜೊತೆಯಲ್ಲಿ ಸಣ್ಣ ಸಣ್ಣ ವಿಷಯಗಳಿಗೆ ಗಲಾಟೆಯಾಗಿ ಅವರಿಂದ ಮಾರಣಾಂತಿಕ ಹಲ್ಲೆಗೆ ಒಳಗಾಗಿರುವುದು ಸರ್ವೆ ಸಾಮಾನ್ಯವಾಗಿದೆ. ಸಂಸ್ಥೆಯ ಕನ್ನಡಿಗ ನೌಕರರ ಮೇಲೆ ಅನ್ಯ ರಾಜ್ಯದ ಪ್ರಯಾಣಿಕರಿಂದ ಮಾರಣಾಂತಿಕ ಹಲ್ಲೆ ನಡೆಯುತ್ತಿದೆ. ಉದಾಹಣೆಗೆ ದಿನಾಂಕ:01/10/2024 ರಂದು ಘಟಕ-13 ನಿರ್ವಾಹಕರಿಗೆ ಮಾರಣಾಂತಿಕ ಹಲ್ಲೆ ನೆಡೆದ ಘಟನೆಯೇ ಸಾಕ್ಷಿಯಾಗಿರುತ್ತದೆ.
ಆದ್ದರಿಂದ ಇವರುಗಳ ಜೀವ ರಕ್ಷಣೆಗಾಗಿ ಗನ್ ಲೈಸನ್ಸ್ ಪಡೆಯಲು ಅನುಮತಿ ಕೊಡಿಸಬೇಕಾಗಿ ಸಮಸ್ತ ಸಾರಿಗೆ ಸಂಸ್ಥೆಯ ನೌಕರರ ಪರವಾಗಿ ತಮ್ಮಲ್ಲಿ ಮನವಿಮಾಡಿಕೊಳ್ಳುತ್ತೇನೆ ಎಂದು ಬಿಎಂಟಿಸಿ ಕಂಡಕ್ಟರ್ ಕಂ ಡ್ರೈವರ್ ಯೋಗೇಶ್ ಗೌಡ ಅವರು ಪತ್ರ ಬರೆದಿದ್ದಾರೆ. ಇದು ಈಗ ಸಾರಿಗೆ ಇಲಾಖೆಯ ಮುಜುಗರಕ್ಕೂ ಕಾರಣವಾಗಿದೆ.