SUDDIKSHANA KANNADA NEWS/ DAVANAGERE/ DATE:23-08-2024
ದಾವಣಗೆರೆ(ಹರಿಹರ): ಪ್ರತಿಯೊಂದು ಜೀವಿಗೂ ಗಾಳಿಯ ನಂತರ ಅತ್ಯವಶ್ಯವಾಗಿ ಬೇಕಾಗಿರುವ ನೀರನ್ನು ಸಂರಕ್ಷಿಸಿ ಪೂಜಿಸುವ ಸಂಸ್ಕೃತಿ ನಮ್ಮದು ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ್ ಬೊಮ್ಮಾಯಿ ಹೇಳಿದರು.
ಅವರು ತುಂಗಭದ್ರಾ ತಟದಲ್ಲಿ ನಿರ್ಮಿಸಿರುವ ತುಂಗಾರತಿ ಮಂಟಪದಲ್ಲಿ ಹರಪೀಠ, ವೀರಶೈವ ಲಿಂಗಾಯತ ಪಂಚಮಸಾಲಿ ಮಹಿಳಾ ಘಟಕದಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶ್ರೀ ವಚನಾನಂದ ಸ್ವಾಮೀಜಿ ಜೊತೆಗೆ ತುಂಗಭದ್ರಾ ನದಿಗೆ ಬಾಗಿನ ಅರ್ಪಿಸಿ ಮಾತನಾಡಿದರು.
ಭಾರತೀಯರೆಂದರೆ ಸಂಸ್ಕೃತಿಯ ರಕ್ಷಕರು, ಕನ್ನಡ ನಾಡು, ನುಡಿ, ನೆಲ, ಜಲ, ಭಾಷೇಯ ಸಂರಕ್ಷಣೆ ಸರ್ವರ ಹಕ್ಕಾಗಿದೆ. ಅದರಂತೆ ಅಲ್ಲಿ ಗಂಗಾರತಿ, ಇಲ್ಲಿ ತುಂಗಾರತಿ ಎಂದು ನಂಬಿ ಮಧ್ಯ ಕರ್ನಾಟಕದ ನಮ್ಮೆಲ್ಲರ ಜೀವ ನದಿಯಾದ ತುಂಗಭದ್ರೆಗೆ ನಮಿಸುವುದಕ್ಕಾಗಿ ತುಂಗಾರತಿ ಮಂಟಪವನ್ನು ನಿರ್ಮಿಸಲು, ನಮ್ಮ ಸರಕಾರದ ಅವಧಿಯಲ್ಲಿ 30 ಕೋಟಿ ರೂ. ಅನುದಾನ ನೀಡಲಾಗಿದೆ ಎಂದರು.
ಮಂಟಪ ನಿರ್ಮಿಸಲು ಪ್ರೇರಣೆ:
ಈಗಾಗಲೇ 7 ಆರತಿ ಮಂಟಪ, ಧ್ಯಾನಾಸಕ್ತ ಶಿವನ ಮೂರ್ತಿ, ನದಿಗೆ ಕಲ್ಲಿನ ನೆಲಹಾಸು ನಿರ್ಮಿಸಿರುವುದು ಸಂತಸ ತಂದಿದೆ. ಉಳಿದೆಲ್ಲಾ ಕಾಮಗಾರಿಯೂ ಆದಷ್ಟು ಬೇಗ ಮುಕ್ತಾಯಗೊಳ್ಳಲಿ. ಗಂಗಾ ಸ್ನಾನ-ತುಂಗಾ ಪಾನ ಎನ್ನುವಂತೆ ಗಂಗಾ ನದಿಯ
ರಕ್ಷಣೆಗೆ ನಮ್ಮ ಪ್ರಧಾನಿ ಮೋದಿಜಿ ಅವರು ಮುಂದಾಗಿರುವುದೆ ನಾವಿಂದು ತುಂಗಭದ್ರಾ ನದಿಯ ರಕ್ಷಣೆ ಹಾಗೂ ಆರತಿ ಮಂಟಪ ನಿರ್ಮಿಸಲು ಪ್ರೇರಣೆಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ರೂವಾರಿ ಹರಿಹರ ಪಂಚಮಸಾಲಿ ಗುರುಪೀಠದ ಶ್ರೀ ವಚನಾನಂದ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಾಲ್ಮೀಕಿ ಗುರು ಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ, ಹೊಸಳ್ಳಿಯ ಹೇಮ-ವೇಮ ಪೀಠದ ಬಸವಕುಮಾರ ಸ್ವಾಮೀಜಿ, ಮಡಿವಾಳ ಮಾಚಿದೇವ ಶ್ರೀಗಳು, ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ದಾವಣಗೆರೆ ಸಂಸದರಾದ ಪ್ರಭಾ ಮಲ್ಲಿಕಾರ್ಜುನ, ಹರಮಠದ ಟ್ರಸ್ಟಿಗಳಾದ ಬಿ.ಸಿ. ಉಮಾಪತಿ, ಚಂದ್ರಶೇಖರ ಪೂಜಾರ, ನಂದಿಗಾವಿ ಶ್ರೀನಿವಾಸ್, ಬಸವರಾಜ ಎನ್.ಪಾಟೀಲ್, ಪವನ್ ಮಲ್ಲಾಡದ, ಶೇಖಪ್ಪ ನರಸಗೊಂಡರ, ಅಚ್ಚುತ್ಗೌಡ, ಪ್ರಕೃತಿ ಪ್ರಸನ್ನ, ಧನ್ಯಕುಮಾರ್, ಮಹಿಳಾ ಮುಖಂಡರು ಇದ್ದರು.