SUDDIKSHANA KANNADA NEWS/ DAVANAGERE/ DATE:05-08-2024
ದಾವಣಗೆರೆ: ಚಿತ್ರದುರ್ಗ ಜಿಲ್ಲೆಯ ಸಿರಿಗೆರೆಯ ತರಳಬಾಳು ಬೃಹನ್ಮಠದಲ್ಲಿ ಏಕವ್ಯಕ್ತಿ ಡೀಡ್ ರದ್ದುಪಡಿಸದಿದ್ದರೆ 50 ಸಾವಿರ ಜನರೊಂದಿಗೆ ಸಿರಿಗೆರೆ ಮಠಕ್ಕೆ ತೆರಳಿ ಪ್ರತಿಭಟನೆ ನಡೆಸೋಣ ಎಂದು ಉದ್ಯಮಿ ಅಣಬೇರು ರಾಜಣ್ಣ ಎಚ್ಚರಿಕೆ ನೀಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಮಾತ್ರವಲ್ಲ, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಿರೋಧಕ್ಕೆ ಕಾರಣವಾಗಿದೆ. ಮಠದ ಬಗ್ಗೆ ಮಾತನಾಡಿದರೆ ನಾವು ಸಹ ಸುಮ್ಮನಿರುವುದಿಲ್ಲ ಎಂದು ಪೋಸ್ಟರ್ ಗಳನ್ನು ಹರಿಬಿಡಲಾಗಿದೆ.
ದಾವಣಗೆರೆಯ ಹೊರವಲಯದ ಅಪೂರ್ವ ರೆಸಾರ್ಟ್ ನಲ್ಲಿ ನಡೆದ ತರಳಬಾಳು ಮಠದ ಸದ್ಭಕ್ತರ ಸಭೆಯಲ್ಲಿ ಮಾತನಾಡಿದ ಅಣಬೇರು ರಾಜಣ್ಣ ಅವರು ತುಂಬಾ ವರ್ಷಗಳಿಂದ ಏಕವ್ಯಕ್ತಿ ಹೆಸರಿನಲ್ಲಿ ಡೀಡ್ ಇರುವುದು
ಸರಿಯಲ್ಲ. ಇತ್ತೀಚೆಗಷ್ಟೇ ಈ ವಿಚಾರ ಗೊತ್ತಾಗಿದೆ. ಕೂಡಲೇ ಡೀಡ್ ರದ್ದುಪಡಿಸಬೇಕು. ಇಲ್ಲದಿದ್ದರೆ ಮಠಕ್ಕೆ ಹೋಗಿ ಪ್ರತಿಭಟನೆ ನಡೆಸೋಣ ಎಂದು ಕರೆ ನೀಡಿದ್ದು, ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ತಿರುಗೇಟು ನೀಡಲಾಗಿದೆ.
ಮಠದ ಪರಂಪರೆ, ಇತಿಹಾಸ, ಸಿರಿಗೆರೆ ಶ್ರೀಗಳ ಸಾಮಾಜಿಕ, ಶೈಕ್ಷಣಿಕ, ನೀರಾವರಿ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಕ್ರಾಂತಿಕಾರಕ ಕೆಲಸ ನಡೆದಿವೆ. ಉದ್ಯಮಿಗಳು, ರಾಜಕಾರಣಿಗಳು ತನ್ನ ಕುಟುಂಬದವರಿಗೆ ಅಧಿಕಾರ, ಸ್ವತ್ತು, ಆಸ್ತಿ ಮಾಡಿಕೊಳ್ಳಲು ಮುಂದಾಗಿದ್ದಾರೆ. ಆದ್ರೆ ಶ್ರೀಗಳು ಸಮಾಜದ, ಎಲ್ಲಾ ವರ್ಗದವರ ಶ್ರೇಯೋಭಿವೃದ್ಧಿಗೆ ಕಟಿಬದ್ಧರಾಗಿ ಕೆಲಸ ಮಾಡುತ್ತಿದ್ದಾರೆ. ಶ್ರೀಗಳ ಬಗ್ಗೆ ಹಗುರವಾಗಿ ಮಾತನಾಡಿದರೆ ನಾವೂ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಪೋಸ್ಟ್ ಹಾಕಲಾಗಿದೆ.
ಸಾದರ ಲಿಂಗಾಯತ ಸಮುದಾಯವು ಶೋಚನೀಯ ಸ್ಥಿತಿಗೆ ತಲುಪಿದೆ. ಇದಕ್ಕೆ ಕಾರಣ ಯಾರೆಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಶಿಸ್ತು, ಸಂಸ್ಕಾರ ಕಲಿಸಿದ ಮಠ ಸಿರಿಗೆರೆ. ಆದ್ರೆ, ಈ ಮಠದಲ್ಲಿ ಕೆಲವರು ರೌಡಿಗಳಂತೆ ವರ್ತಿಸುತ್ತಿದ್ದಾರೆ.
ಯಾರಾದರೂ ಪ್ರಶ್ನಿಸಿದರೆ ಪೊಲೀಸ ಠಾಣೆಗೆ ದೂರು ಕೊಡುತ್ತಾರೆ. ಇದನ್ನು ಮಠಾಧಿಪತಿಗಳು ಮಾಡುತ್ತಾರಾ ಎಂದು ಖಾರವಾಗಿ ಅಣಬೇರು ರಾಜಣ್ಣ ಪ್ರಶ್ನಿಸಿದ್ದರು.
ಮಠದ ವ್ಯಾಪ್ತಿಗೆ ಒಳಪಟ್ಟ ಶೈಕ್ಷಣಿಕ ಸಂಸ್ಥೆಗಳು ಮುಚ್ಚುವ ಹಂತ ತಲುಪಿದ್ದು, ಕಲ್ಯಾಣ ಮಂಟಪಗಳು ಹಾಳಾಗುವ ಹಂತ ತಲುಪಿವೆ. ಮತ್ರವಲ್ಲ, ಮಠಕ್ಕೆ ಹೋದವರಿಗೆ ಅನ್ನದಾಸೋಹವನ್ನೂ ನೀಡುತ್ತಿಲ್ಲ. ಸಭೆಗೆ ಹೋಗಬೇಡಿ ಎಂದು ಹಲವರಿಗೆ ಕರೆ ಮಾಡಿ ಹೇಳಲಾಗಿದೆ. ಎಲ್ಲರೂ ಭಕ್ತರೇ ಇದ್ದಾರೆ. ಮಠದ ವಿದ್ಯಾಸಂಸ್ಥೆಗಳು ಹಾಳಾಗುವ ಹಂತ ತಲುಪದಿದ್ದರೂ ಸುಮ್ಮನಿರಬೇಕಾ ಎಂದು ಹೇಳಿದ್ದರು. ಇದಕ್ಕೂ ಸಹ ಹಲವರು ಫೇಸ್ ಬುಕ್, ವಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಿದ್ದಾರೆ.