SUDDIKSHANA KANNADA NEWS/ DAVANAGERE/ DATE:02-08-2024
ದಾವಣಗೆರೆ: ಶಾಸಕರು, ಸಚಿವರು, ಸಂಸದರು ನಿಮ್ಮ ಮನೆಯವರೇ ಇದ್ದಾರೆ. ಅಧಿಕಾರವೂ ನಿಮ್ಮ ಬಳಿ ಇದೆ. ಮಹಾನಗರ ಪಾಲಿಕೆ, ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಸೇರಿದಂತೆ ಎಲ್ಲಾ ಹಗರಣಗಳ ತನಿಖೆ ನಡೆಸಿ. ಯಾರ್ಯಾರು ತಪ್ಪು ಮಾಡಿದ್ದಾರೆ ಅವರಿಗೆಲ್ಲರಿಗೂ ಶಿಕ್ಷೆಯಾಗಲಿ. ನಾವು ತಪ್ಪು ಮಾಡಿದ್ದು ತನಿಖೆಯಲ್ಲಿ ಸಾಬೀತಾದರೆ ಆ ತಕ್ಷಣದಲ್ಲೇ ಶಿಕ್ಷೆಗೆ ಒಳಪಡಿಸಲು ಸಿದ್ಧ. ತಾಕತ್ತಿದ್ದರೆ ತನಿಖೆ ನಡೆಸಿ ಎಂದು ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪರಿಗೆ ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಸವಾಲು ಹಾಕಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆಯಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ಯಾರ ಅವಧಿಯಲ್ಲಿ ನಡೆದಿದೆ ಎಂಬುದು ಎಲ್ಲರಿಗೂ ಗೊತ್ತು. ವಿನಾಕಾರಣ ಬಿಜೆಪಿ ವಿರುದ್ಧ ಆರೋಪ ಮಾಡುವುದನ್ನು ಬಿಟ್ಟು ಸೂಕ್ತ, ಪಾರದರ್ಶಕ
ತನಿಖೆ ನಡೆಸಿ. ಆಗ ಎಲ್ಲಾ ಸತ್ಯವೂ ಹೊರ ಬರಲಿದೆ ಎಂದು ಹೇಳಿದರು.
ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಪದಗ್ರಹಣ ಸಂದರ್ಭದಲ್ಲಿ ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಶಾಮನೂರ ಶಿವಶಂಕರಪ್ಪನವರು ಲೋಕಸಭಾ ಮಾಜಿ ಸದಸ್ಯ ಜಿ. ಎಂ.ಸಿದ್ದೇಶ್ವರ ಮತ್ತು ಅವರ ಕುಟುಂಬ, ಬಿಜೆಪಿ ಅವಧಿಯಲ್ಲಿ ಆದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಮೇಲೆ ತ್ರಿವತರದ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಶಾಮನೂರು ಶಿವಶಂಕರಪ್ಪನವರು ನಾವು ಯಾರ ಕಾಲ ಹಿಡಿಯುವವರಲ್ಲ, ಸಡ್ಡು ಹೋಡೆಯುರು ಎಂದು ಹೇಳಿದ್ದಿರಿ. ಆದ್ರೆ. ಸತ್ಯ ಏನು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದು ತಿಳಿಸಿದರು.
ಡಾ. ಜಿ. ಎಂ. ಸಿದ್ದೇಶ್ವರ ಮತ್ತು ಅವರ ತಂದೆ ಜಿ. ಮಲ್ಲಿಕಾರ್ಜುನಪ್ಪನವರನ್ನು ದಾವಣಗೆರೆಗೆ ಕರೆ ತಂದವರು ನಾವು ಎಂದು ಹೇಳಿದ್ದೀರಿ. ಹಾಗಾದರೆ ದಿವಂಗತ ಚನ್ನಯ ಒಡೆಯರ್ ಅವರು 1996 ರ ಲೋಕಸಭಾ ಚುನಾವಣೆಯಲ್ಲಿ ಸೋಲಲು ನೀವೇ ಕಾರಣ. ಹಿಂದುಳಿದ ವರ್ಗಗಳ ನಾಯಕನಿಗೆ ಸೋಲಿಸಿ ಬೆನ್ನಿಗೆ ಚೂರಿ ಹಾಕಿದ್ದು ಸತಃ ನೀವೆ ಒಂದು ಒಪ್ಪಿಕೊಂಡಂತೆ ಆಯಿತು ಎಂದು ವಾಗ್ದಾಳಿ ನಡೆಸಿದರು.
2019ರ ಲೋಕಸಭಾ ಚುನಾವಣೆಯಲ್ಲಿ ಸೋಲು ಕಟ್ಟಿಟ್ಟ ಬುತ್ತಿ ಎಂದು ಮನವರಿಕೆ ಆದ ತಕ್ಷಣ ಚುನಾವಣಾ ಕಣದಿಂದ ಹಿಂದಕ್ಕೆ ಸರಿದು ಹಿಂದುಳಿದ ವರ್ಷದ ನಾಯಕನಿಗೆ ಟಿಕೆಟ್ ಕೊಡಿಸುವ ನಾಟಕ ಮಾಡಿದ್ದು ಗೊತ್ತು. ಕಾಂಗ್ರೆಸ್ ನ ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ ಕತ್ತು ಕೊಯ್ದು ಸೋಲಿಗೆ ಕಾರಣ ಆದವರು ಯಾರು? ಸಿದ್ದೇಶ್ವರ ಮತ್ತು ಹಿಂದಿನ ದೂಡಾ ಅಧ್ಯಕ್ಷರ ಮೇಲೆ ಅನೇಕ ಗುರುತರ ಆರೋಪಗಳನ್ನು ಮಾಡಿದ್ದಿರಿ. ನಿಮಗೆ ನಿಜವಾಗಲೂ ಸೆಡ್ಡು ಹೊಡೆಯುವ ತಾಕತ್ತಿದ್ದರೆ ನಿಮ್ಮದೆ ರಾಜ್ಯ ಸರ್ಕಾರ, ನಿಮ್ಮದೇ ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರ, ಮಂತ್ರಿ, ಸಂಸದರು, ನೀವೇ ಎಂ.ಎಲ್.ಎ ಆಗಿದ್ದು, ಎಲ್ಲಾ ನಿಮ್ಮ ಕಪಿಮುಷ್ಠಿಯಲ್ಲಿದೆ. ಹಾಗೆಯೇ ಈ ಹಿಂದೆ ಆಗಿರುವ ಎಲ್ಲಾ ಪ್ರಕರಣಗಳ ತನಿಖೆಗೆ ಕೊಡಿ. ಆಗ ಯಾರು ಏನು ಮಾಡಿದರು ಎಂಬುದು ಜನರಿಗೆ ಗೊತ್ತಾಗುತ್ತದೆ ಎಂದು ಸವಾಲು ಹಾಕಿದರು.
ಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಶಿವನಗೌಡ ಪಾಟೀಲ್, ಜಯಪ್ರಕಾಶ್ ಕೊಂಡಜ್ಜಿ, ಟಿಂಕರ್ ಮಂಜಣ್ಣ ಮತ್ತಿತರರು ಹಾಜರಿದ್ದರು.