SUDDIKSHANA KANNADA NEWS/ DAVANAGERE/ DATE:17-07-2024
ದಾವಣಗೆರೆ: ನಗರದ ವಿನೋಬ ನಗರದ 4ನೇ ಮುಖ್ಯ ರಸ್ತೆಯಲ್ಲಿರುವ ಕೆ.ಎಸ್.ವೈನ್ ಲ್ಯಾಂಡ್ ಸ್ಥಳಾಂತರಿಸದಿದ್ದರೆ ಜುಲೈ 19ರವರೆಗೆ ಗಡುವು ನೀಡಿದ್ದು, ಇಲ್ಲದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಮಹಿಳೆಯರು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿನೋಬನಗರದ ನಿವಾಸಿ ಅನುಪಮಾ ರವಿಕುಮಾರ್ ಅವರು, ಮದ್ಯದಂಗಡಿ ಸ್ಥಳಾಂತರಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಸಂಬಂಧಪಟ್ಟವರ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ. ಹಲವು ಬಾರಿ ಅಬಕಾರಿ ಇಲಾಖೆಯ ಗಮನಕ್ಕೆ ತಂದರೂ ಸಹ ಇದಕ್ಕೆ ಕಿವಿಗೊಡದೆ ನಿರ್ಲಕ್ಷ್ಯ ವಹಿಸಿದ್ದಾರೆ. ಕೂಡಲೇ ಬಾರ್ ಸ್ಥಳಾಂತರ ಮಾಡಬೇಕೆಂದು ಒತ್ತಾಯಿಸಿ ಜು.19 ರಂದು ಬೆಳಗ್ಗೆ 11.30 ಕ್ಕೆ ಬಾರ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.
ವಿನೋಬ ನಗರ. 4ನೇ ಮುಖ್ಯ ರಸ್ತೆ ಹೆಬ್ಬಾಗಿನಲ್ಲಿ ಮದ್ಯದಂಗಡಿ ಇದು, ಈ ರಸ್ತೆಯು ವಿನೋಬ ನಗರ, ಯಲ್ಲಮ್ಮ ನಗರ, ಶಾಂತಿ ನಗರಕ್ಕೆ ಹೋಗುವ ನಿವಾಸಿಗಳಿಗೆ ಬಹಳಷ್ಟು ತೊಂದರೆಗಳಾಗುತ್ತಿವೆ. ಈ ಅಂಗಡಿಯು ಹೆಬ್ಬಾಗಿಲಿನಲ್ಲಿರುವ ಕಾರಣ ಮದ್ಯಪಾನ ಸೇವಿಸುವವರು ರಸ್ತೆಯ ಮೇಲೆ, ರಸ್ತೆಯ ಬದಿಗೆ ಕುಡಿದು ಅಡ್ಡಾದಿಡ್ಡಿಯಾಗಿ ವಾಹನಗಳನ್ನು ನಿಲ್ಲಿಸುವುದು ಹಾಗೂ ಮದ್ಯಪಾನದ ನಶೆಯಲ್ಲಿ ಪರಸ್ಪರ ಜಗಳ ಮಾಡಿ ಸಾರ್ವಜನಿಕರಿಗೆ ಬಹಳಷ್ಟು ತೊಂದರೆ ಉಂಟು ಮಾಡುತ್ತಿದ್ದಾರೆ ಎಂದರು.
ಕುಡಿತದ ನಶೆಯಲ್ಲಿ ಅಕ್ಕ ಪಕ್ಕ ಇರುವಂತಹ ವಾಸ ಸ್ಥಳಗಳ ಮುಂದೆ ಮೂತ್ರ ವಿಸರ್ಜನೆ ಮಾಡುವುದು, ವಾಂತಿ ಮಾಡುವುದು ಮನೆಯಲ್ಲಿರುವ ವಿದ್ಯಾರ್ಥಿಗಳಿಗೆ ಇದರಿಂದ ಬಹಳ ತೊಂದರೆಯಾಗುತ್ತದೆ. ಅಕ್ಕ ಪಕ್ಕದ ಮನೆಯಲ್ಲಿರುವ ಹೆಣ್ಣು ಮಕ್ಕಳಿಗೆ ಮನೆಯಿಂದ ಹೊರಗೆ ಬರಲು ಇರಿಸು ಮುರುಸಾಗಿರುತ್ತದೆ. ಇದಲ್ಲದೇ ನಶೆಯಲ್ಲಿ ತಮ್ಮ ವಾಹನಗಳನ್ನು ಅಕ್ಕ ಪಕ್ಕದ ಮನೆಗಳ ಮುಂದೆ ನಿಲ್ಲಿಸಿ ತೊಂದರೆ ಕೊಡುವುದು ಸಾಮಾನ್ಯವಾಗಿದೆ ಎಂದು ಆರೋಪಿಸಿದರು. ಈ ಹಿಂದೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಖುದ್ದು ಈ ಮದ್ಯದ ಅಂಗಡಿ ಮಾಲೀಕರು ಅಂಗಡಿಯನ್ನು ಸ್ಥಳಾಂತರಿಸುವುದಾಗಿ ಲಿಖಿತ ರೂಪದಲ್ಲಿ ಪತ್ರ ನೀಡಿದ್ದರು. ಆದರೂ ಸಹ ಅಬಕಾರಿ ಇಲಾಖೆಯವರು ಈ ಮದ್ಯದ ಅಂಗಡಿ ಸ್ಥಳಾಂತರಿಸದೆ ಪರವಾನಿಗೆ ನವೀಕರಿಸಿದ್ದಾರೆ ಎಂದು ದೂರಿದರು.
ಗೋಷ್ಠಿಯಲ್ಲಿ ವಿಜಯಲಕ್ಷ್ಮೀ ನಿರಂಜನ್, ಭಾಗೀರಥಿ ಪಾಂಡುರಂಗ, ಸರೋಜಾ ವಿಜಯಕುಮಾರ್, ಷಂಷದ್ ಸೈಯದ್ ಸೈಫುಲ್ಲಾ, ನಿವೇದಿತಾ ಸಚ್ಚಿನ್, ವಿಜಯಮ್ಮ ಶೀಲವಂತ್ ಉಪಸ್ಥಿತರಿದ್ದರು.