SUDDIKSHANA KANNADA NEWS/ DAVANAGERE/ DATE:06-07-2024
ದಾವಣಗೆರೆ: ಕಾರು ಚಾಲನೆ ಮಾಡುವ ವೇಳೆ ಹೃದಯಘಾತವಾದ ಪರಿಣಾಮ ಅಡ್ಡಾದಿಡ್ಡಿ ಚಲಾಯಿಸಿ, ಮೂರು ಬೈಕ್, ಆಟೋ, ನಾಲ್ವರಿಗೆ ಡಿಕ್ಕಿ ಹೊಡೆದ ಘಟನೆ ನಗರದ ಕೆ. ಬಿ. ಬಡಾವಣೆಯ ಸಿದ್ಧಮ್ಮ ಪಾರ್ಕ್ ಬಳಿ ಶನಿವಾರ ರಾತ್ರಿ ನಡೆದಿದೆ.
ಕೆ. ಬಿ. ಬಡಾವಣೆಯ ಸಿದ್ಧಮ್ಮ ಪಾರ್ಕ್ ನ ತೇರು ಜನರಲ್ ಅಂಡ್ ಪ್ರಾವಿಜನ್ ಸ್ಟೋರ್ ನ ವನಜಾಕ್ಷಮ್ಮ, ಸಂಪತ್, ಪುಟ್ಟ ಬಾಲಕಿ ಸೇರಿದಂತೆ ನಾಲ್ಕು ಮಂದಿ ಹೆಚ್ಚು ಗಾಯಗೊಂಡಿದ್ದು, ಸದ್ಯಕ್ಕೆ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಹೈಟೆಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಶನಿವಾರ ರಾತ್ರಿ ನೇರ್ಲಗಿ ಗ್ರಾಮದ ಕುಟುಂಬವೊಂದು ಕಾರಿನಲ್ಲಿ ಪ್ರಯಾಣಿಸುತಿತ್ತು. ಸಿದ್ಧಮ್ಮ ಪಾರ್ಕ್ ನ ಸರ್ಕಲ್ ಬರುವ ಮುನ್ನವೇ ಕಾರು ಚಾಲನೆ ಮಾಡುತ್ತಿದ್ದ ವ್ಯಕ್ತಿಗೆ ಹಾರ್ಟ್ ಅಟ್ಯಾಕ್ ಆಗಿದೆ. ಪಕ್ಕದಲ್ಲಿದ್ದ ಆತನ ಪತ್ನಿ ಏನಾಯ್ತು ಎಂದು ಎಚ್ಚರಿಸುವ ಹೊತ್ತಿಗೆ ಕಾರು ಮೊದಲು ಆಟೋಗೆ ಡಿಕ್ಕಿ ಹೊಡೆದಿದೆ. ಆ ಬಳಿಕ ಅಲ್ಲಿಯೇ ನಿಂತಿದ್ದ ಪೊಲೀಸರ ಬೈಕ್ ಗೆ ಗುದ್ದಿದೆ. ಆ ಬಳಿಕ ಸಂಪತ್ ಅವರಿಗೂ ಡಿಕ್ಕಿ ಹೊಡೆದಿದ್ದು, ವನಜಾಕ್ಷಮ್ಮರ ಮೇಲೂ ಕಾರು ಹರಿದಿದೆ. ವನಜಾಕ್ಷಮ್ಮರ ಎರಡು ಕಾಲುಗಳು ಮುರಿದಿದ್ದು, ಸಂಪತ್ ಅವರಿಗೆ ಗಾಯಗಳಾಗಿವೆ. ಸಂಪತ್ ಅವರ ಪುತ್ರಿಗೆ ಕಾರು ಡಿಕ್ಕಿ ಹೊಡೆದರೂ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಕಾರು ಚಾಲಕನು ಡಿಕ್ಕಿ ಹೊಡೆದ ಬಳಿಕ ಕಾರು ನಿಂತಿದ್ದು, ಈ ವೇಳೆ ವ್ಯಕ್ತಿಯು ವಾಂತಿ ಮಾಡಿಕೊಂಡಿದ್ದಾರೆ. ಆ ಬಳಿಕ ನೀರು ಚಿಮುಕಿಸಿದಾಗ ಎಚ್ಚರವಾಗಿದೆ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಆತನ ಕುಟುಂಬದವರು ಪ್ರಯಾಣಿಸುತ್ತಿದ್ದ ಕಾರು ಆಗಿದ್ದು, ಕಾರಿನೊಳಗಿದ್ದ ಮಹಿಳೆ ಹಾಗೂ ಮಕ್ಕಳಿಗೆ ಯಾವುದೇ ತೊಂದರೆ ಆಗಿಲ್ಲ. ಸಿದ್ಧಮ್ಮ ಪಾರ್ಕ್ ನ ಮುಂಬದಿಯ ರಸ್ತೆಯು ರಕ್ತಸಿಕ್ತವಾಗಿತ್ತು. ಈ ಘಟನೆ ನೋಡಿದ ಜನರು ಹೌಹಾರಿದರು.
ಇದ್ದಕ್ಕಿದ್ದಂತೆ ಸಿನಿಮಿಯಾ ಶೈಲಿಯಲ್ಲಿ ಎರಗಿ ಬಂದ ಕಾರು ನೋಡುತ್ತಿದ್ದಂತೆ ಒಮ್ಮೆಲೆ ಭಯಭೀತರಾಗಿದ್ದಾರೆ. ಪಾರ್ಕ್ ನಲ್ಲಿನ ವಾಯು ವಿಹಾರಿಗಳು, ಅಕ್ಕಪಕ್ಕದ ನಿವಾಸಿಗಳು, ಸ್ಥಳೀಯರು ಒಮ್ಮೆಲೆ ಬೆಚ್ಚಿ ಬಿದ್ದಿದ್ದಾರೆ. ಕಾರು ಡಿಕ್ಕಿ ಹೊಡೆದ ರಭಸೆಕ್ಕೆ ಆಟೋ ಹಾಗೂ ನಾಲ್ಕು ಬೈಕ್ ಗಳು ಜಖಂಗೊಂಡಿವೆ. ರಸ್ತೆಯಲ್ಲಿ ಸಾವಿರಾರು ಬೈಕ್ ಗಳು, ಕಾರು, ಲಾರಿ ಸೇರಿದಂತೆ ವಾಹನಗಳು ಓಡಾಡುತ್ತವೆ. ಆದ್ರೆ, ಈ ರಸ್ತೆಯಲ್ಲಿ ಹೋಗುವವರಿಗೆ ಯಾವುದೇ ಹಾನಿ ಆಗಿಲ್ಲ. ಶಿವಪ್ಪನಾಯಕ ವೃತ್ತದಿಂದ ತ್ರಿಶೂಲ್ ಥಿಯೇಟರ್ ಮೂಲಕ ಪಿ. ಬಿ. ರಸ್ತೆ ಸಂಪರ್ಕಿಸುವ ರಸ್ತೆ ಇದಾಗಿದ್ದು, ಸಿದ್ಧಮ್ಮ ಪಾರ್ಕ್ ನ ರಸ್ತೆ ಸಮೀಪ ನಿಲ್ಲಿಸಿದ್ದ ಆಟೋ ಸಂಪೂರ್ಣ ಜಖಂಗೊಂಡಿದೆ.
ಸದ್ಯಕ್ಕೆ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದು, ಹೈಟೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಸ್ಥಳಕ್ಕೆ ಕೆಟಿಜೆ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.