ಬೆಂಗಳೂರು: ಸಿಎಂ, ಡಿಸಿಎಂ ವಿಚಾರವಾಗಿ ಸಾರ್ವಜನಿಕವಾಗಿ ಹಾಗೂ ಮಾಧ್ಯಮಗಳ ಮುಂದೆ ಮಾತನಾಡುವವರಿಗೆ ವಿಧಿಯಿಲ್ಲದೇ ನೋಟಿಸ್ ಕೊಟ್ಟು, ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ” ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಎಚ್ಚರಿಕೆ ನೀಡಿದರು.
ಸದಾಶಿವನಗರದ ನಿವಾಸದ ಬಳಿ ಮಾಧ್ಯಮದವರು ಸಿಎಂ ಬದಲಾವಣೆ ಬಗ್ಗೆ ಶನಿವಾರ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು “ಬಹಿರಂಗ ಹೇಳಿಕೆ ನೀಡುವವರು ಎಐಸಿಸಿ ಮತ್ತು ರಾಜ್ಯ ಘಟಕದಿಂದ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ. ಪಕ್ಷಕ್ಕೆ ಶಿಸ್ತು ಮುಖ್ಯ. ಶಿಸ್ತಿಲ್ಲದೆ ಯಾವುದೇ ಪಕ್ಷವಿಲ್ಲ. ಪಕ್ಷವನ್ನು ಅಧಿಕಾರಕ್ಕೆ ತರಲು ಎಷ್ಟು ಕಷ್ಟ ಪಟ್ಟಿದ್ದೇವೆ ಎಂಬುದು ನಮಗೆ ಗೊತ್ತಿದೆ. ಇಂದು ಇವರುಗಳು ಸುಖಾಸುಮ್ಮನೆ ಮಾತನಾಡುವ ಅವಶ್ಯಕತೆಯಿಲ್ಲ” ಎಂದರು.
“ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು, ನಾನು, ಸಿದ್ದರಾಮಯ್ಯ ಅವರು ಪಕ್ಷದ ಹಿತ ದೃಷ್ಟಿಯಿಂದ ಹೇಗೆ ಕೆಲಸ ಮಾಡಬೇಕು ಎನ್ನುವ ಬಗ್ಗೆ ತೀರ್ಮಾನಕ್ಕೆ ಬಂದಿದ್ದೇವೆ. ಈ ವಿಚಾರವಾಗಿ ಯಾವುದೇ ಮಂತ್ರಿಗಳು, ಶಾಸಕರು, ಸ್ವಾಮೀಜಿಗಳು ಮಾತನಾಡುವ ಅವಶ್ಯಕತೆ ಇಲ್ಲ” ಎಂದು ತಿಳಿಸಿದರು.
ಹೈಕಮಾಂಡ್ ಬಳಿ ಡಿಸಿಎಂ, ಸಿಎಂ ಬದಲಾವಣೆ ಬಗ್ಗೆ ಚರ್ಚೆಯಾಯಿತೇ ಎಂದು ಕೇಳಿದಾಗ “ಡಿಸಿಎಂ, ಸಿಎಂ ಬದಲಾವಣೆ ಬಗ್ಗೆ ಹೈಕಮಾಂಡ್ ಬಳಿ ಚರ್ಚೆಯಾಗಿಲ್ಲ. ಸ್ವಾಮೀಜಿಗಳು ಅಭಿಮಾನಪೂರ್ವಕವಾಗಿ ಮಾತನಾಡಿದ್ದಾರೆ. ಸ್ವಾಮೀಜಿಗಳ ಆಶೀರ್ವಾದ ಇದ್ದರೆ ಸಾಕು. ಅವರು ಒಳಗಿನಿಂದಲೇ ಹರಸಿದರೆ ಸಾಕು. ನಾನು ಸಿಎಂ ಆಗಲು ಯಾರೂ ಶಿಫಾರಸ್ಸು ಮಾಡುವುದು ಬೇಡ. ನಾನು ಮಾಡಿರುವ ಕೆಲಸವನ್ನು ನೋಡಿ ನಮ್ಮ ಪಕ್ಷದ ಹೈಕಮಾಂಡ್ ಸೂಕ್ತ ತೀರ್ಮಾನ ಮಾಡುತ್ತದೆ. ದಯವಿಟ್ಟು ಈ ವಿಚಾರ ಇಲ್ಲಿಗೆ ಮುಗಿಸಿಬಿಡಿ” ಎಂದು ಹೇಳಿದರು.
ಎಲ್ಲರೂ ಬಾಯಿಗೆ ಬೀಗ ಹಾಕಿಕೊಂಡರೆ ಉತ್ತಮ
ಹೆಚ್ಚುವರಿ ಡಿಸಿಎಂ ಬಗ್ಗೆ ಕೆಲವರು ಹೇಳಿಕೆ ಕೊಡುತ್ತಿದ್ದಾರಲ್ಲಾ ಎಂದು ಕೇಳಿದಾಗ “ಇದರ ಬಗ್ಗೆ ನನಗೆ ಗೊತ್ತಿಲ್ಲ. ಪಕ್ಷದ ಹಿತದೃಷ್ಟಿಯಿಂದ ಎಲ್ಲರೂ ಬಾಯಿಗೆ ಬೀಗ ಹಾಕಿಕೊಂಡರೆ ಉತ್ತಮ” ಎಂದರು.
ಸ್ವಾಮೀಜಿಗಳು ರಾಜಕಾರಣದ ಸುದ್ದಿಗೆ ಬರಬೇಡಿ
ಲಿಂಗಾಯತ ಸ್ವಾಮೀಜಿಗಳು ಸೇರಿದಂತೆ ಎಲ್ಲಾ ವಿಚಾರಗಳಲ್ಲಿ ಪದೇ, ಪದೇ ಸ್ವಾಮೀಜಿಗಳ ಮಧ್ಯಪ್ರವೇಶದ ಬಗ್ಗೆ ಕೇಳಿದಾಗ “ಯಾವ ಸ್ವಾಮೀಜಿಗಳು ಮಾತನಾಡಿಲ್ಲ, ಇವತ್ತೇ ಮಾತನಾಡಿದ್ದು ಅವರು. ಎಲ್ಲಾ ಸ್ವಾಮೀಜಿಗಳಿಗೂ ಕೈ ಮುಗಿಯುತ್ತೇನೆ, ನಮ್ಮ ರಾಜಕಾರಣದ ಸುದ್ದಿಗೆ ನೀವು ಬರಲು ಹೋಗಬೇಡಿ” ಎಂದು.
ಸಿಎಂ ಬದಲಾವಣೆ ಬಗ್ಗೆ ಸ್ವಾಮೀಜಿಗಳಿಗೆ ಹೇಳಿಕೊಟ್ಟು ಹೇಳಿಕೆ ನೀಡಿಸಲಾಗಿದೆ ಎನ್ನುವ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಪರಮೇಶ್ವರ್ ಅವರ ಸಂಭಾಷಣೆ ಬಗ್ಗೆ ಕೇಳಿದಾಗ “ಇದರ ಬಗ್ಗೆ ನನಗೇನೂ ಗೊತ್ತಿಲ್ಲ” ಎಂದರು.