SUDDIKSHANA KANNADA NEWS/ DAVANAGERE/ DATE:25-06-2024
ದಾವಣಗೆರೆ: ರಾಜ್ಯ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂಬ ಬೇಡಿಕೆ ಹೆಚ್ಚಾಗಿದೆ. ಸಚಿವ ಹೆಚ್. ಸಿ. ಮಹಾದೇವಪ್ಪ, ಕೆ. ಎನ್. ರಾಜಣ್ಣ ಸೇರಿದಂತೆ ಹಲವರು ಜಾತಿ ಆಧಾರದ ಮೇಲೆ ಡಿಸಿಎಂ ಸ್ಥಾನ ನೀಡಬೇಕೆಂಬ ಬೇಡಿಕೆ ಇಟ್ಟಿದ್ದರೆ. ದಾವಣಗೆರೆಯಲ್ಲಿ ಚನ್ನಗಿರಿ ಕಾಂಗ್ರೆಸ್ ಶಾಸಕ ಮತ್ತೆ ಹಳೇ ಮಾತು ಪುನರುಚ್ಚರಿಸಿದ್ದಾರೆ.
ಜಾತಿ ಆಧಾರದ ಮೇಲೆ ಉಪಮುಖ್ಯಮಂತ್ರಿ ಸ್ಥಾನ ಡಿ. ಕೆ. ಶಿವಕುಮಾರ್ ಅವರಿಗೆ ನೀಡಿಲ್ಲ. ಸಿಎಂ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾರೆ. ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಇನ್ನು ಡಿ. ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಲಿ, ಬೇಕಾದರೆ ಐದು ಡಿಸಿಎಂ ಕೊಡಲಿ ಎಂದು ಹೇಳುವ ಮೂಲಕ ವಿವಾದದ ಕಿಡಿ ಹಚ್ಚಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ತನ್ನ ಕ್ಷೇತ್ರದ ಅಭ್ಯರ್ಥಿಗಳನ್ನು ಗೆಲ್ಲಿಸದ ಸಚಿವರ ರಾಜೀನಾಮೆ ಪಡೆಯಬೇಕು ಎಂದು ಹೇಳಿ ಡಿ. ಕೆ. ಶಿವಕುಮಾರ್ ಕೆಂಗಣ್ಣಿಗೆ ಗುರಿಯಾಗಿದ್ದ ಶಿವಗಂಗಾ ಬಸವರಾಜ್ ಮತ್ತೆ ಡಿ. ಕೆ. ಶಿವಕುಮಾರ್ ಸಿಎಂ ಆಗಲಿ ಎಂದಿದ್ದಾರೆ. ಯಾಕೆಂದರೆ ಡಿ. ಕೆ. ಸುರೇಶ್ ಅವರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಾ. ಮಂಜುನಾಥ್ ಅವರ ವಿರುದ್ಧ ಹೀನಾಯ ಸೋಲು ಕಂಡಿದ್ದರು. ಕೆಲ ಕ್ಷೇತ್ರಗಳಲ್ಲಿ ಲೀಡ್ ಕೊಡಿಸದ ಸಚಿವರಾಗಿ ಮುಂದುವರಿಯಬಾರದು ಎಂದಿದ್ದರು. ಆಗ ಶಾಸಕರು ಬಾಯ್ ಮುಚ್ಚಿಕೊಂಡು ಇರಬೇಕು ಎಂದು ಡಿ. ಕೆ. ಶಿವಕುಮಾರ್ ಫರ್ಮಾನು ಹೊರಡಿಸಿದ್ದರು.
ಶಾಸಕರಾದ ಮೂರ್ನಾಲ್ಕು ತಿಂಗಳಿಗೆ ರಾಜೀನಾಮೆ ನೀಡುವುದಾಗಿ ಹೇಳಿದ್ದ ಶಿವಗಂಗಾ ಬಸವರಾಜ್ ಅವರು ಭ್ರಷ್ಟಾಚಾರ ಮಿತಿ ಮೀರಿದ್ದು, ಅಧಿಕಾರಿಗಳು ಮಾತು ಕೇಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ಮತ್ತೆ ಡಿ. ಕೆ. ಶಿವಕುಮಾರ್ ಅವರ ಪರ ಬ್ಯಾಟ್ ಬೀಸಿದ್ದು, ಇದು ಸಿದ್ದರಾಮಯ್ಯರ ಆಪ್ತರ ಕೆಂಗಣ್ಣಿಗೂ ಗುರಿಯಾಗಿದೆ.
ಹಿರಿಯ ಸಚಿವರು ಒತ್ತಡ ಹಾಕುತ್ತಿದ್ದಾರೆ. ಡಿಸಿಎಂ ಸ್ಥಾನ ನೀಡಬೇಕೆಂದು. ಜಾತಿ ಆಧಾರದ ಮೇಲೆ ಕೇಳುವುದರಲ್ಲಿ ತಪ್ಪೇನಿಲ್ಸ. ಎಲ್ಲಾ ಸಮುದಾಯಗಳಿಗೂ ಉಪಮುಖ್ಯಮಂತ್ರಿ ಸ್ಛಾನ ನೀಡಿ. ಡಿ. ಕೆ. ಶಿವಕುಮಾರ್ ಅವರನ್ನು ಸಿಎಂ ಅನ್ನಾಗಿ ಮಾಡಿ. 2013ರಲ್ಲಿ ಸಿಎಂ ಸಿದ್ದರಾಮಯ್ಯ ಅವರು ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದರು. ಡಿ. ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರೆ ಒಳ್ಳೆಯದು. ಕಳೆದ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ಫಲಿತಾಂಶ ನೋಡಿದ್ದೇವೆ. ಪಕ್ಷ ಸಂಘಟನೆಗೆ ಮತ್ತಷ್ಟು ಅನುಕೂಲವಾಗಲಿದೆ ಎಂದು ಶಿವಗಂಗಾ ಬಸವರಾಜ್ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ಕೇಳಿದರೆ ಡಿಸಿಎಂ ಡಿ. ಕೆ. ಶಿವಕುಮಾರ್ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೋ ಕಾದು ನೋಡಬೇಕಿದೆ.