SUDDIKSHANA KANNADA NEWS/ DAVANAGERE/ DATE:25-06-2024
ದಾವಣಗೆರೆ: ರಾಜ್ಯದಲ್ಲಿ ಉತ್ತಮ ಮಳೆ-ಬೆಳೆಗಾಗಿ ಪ್ರಾರ್ಥಿಸಿ ಚಿತ್ರದುರ್ಗ ಜಿಲ್ಲೆಯ ಸಿರಿಗೆರೆ ಗ್ರಾಮದ ಮಾವಿನ ತೋಪು ಅಂಗಳದಲ್ಲಿನ ಬೃಹನ್ಮಠದ ಶ್ರೀ ಕಾಶಿ ಮಹಾಲಿಂಗ ಸ್ವಾಮೀಜಿ ಗದ್ದುಗೆ ಬಳಿ ಅನ್ನದಾಸೋಹ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಅನ್ನದಾಸೋಹ ಕಾರ್ಯಕ್ರಮಕ್ಕೆ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಧರ್ಮಗುರುಗಳನ್ನು ಸ್ವಾಗತಿಸುವಾಗ, ಮೆರವಣಿಗೆ ಸೇರಿ ಧಾರ್ಮಿಕ ಕಾರ್ಯಕ್ರಮ ವೇಳೆ ಪಟಾಕಿ ಸಿಡಿಸುವುದು ಸರಿಯಲ್ಲ. ಪಟಾಕಿ ಪರಿಸರಕ್ಕೆ ಕಂಟಕ ಎಂಬ ಅರಿವು ಭಕ್ತರಲ್ಲಿ ಮೂಡಬೇಕು ಎಂದು ಕರೆ ನೀಡಿದರು.
ಪಟಾಕಿ ಸಿಡಿತದಿಂದ ಕೆಟ್ಟ ಹೊಗೆ ಹೊರಹೊಮ್ಮುತ್ತದೆ. ಪರಿಸರಕ್ಕೆ ಅಷ್ಟೇ ಅಲ್ಲದೆ ಮನುಷ್ಯನಿಗೂ ಮಾರಕ ಆಗಿದೆ. ಈ ವಾಸ್ತವ ಸತ್ಯ ಅರಿತು ಇಂತಹ ಚಟುವಟಿಕೆಗಳಿಂದ ದೂರವಾಗಬೇಕು. ಶ್ರದ್ಧೆ-ಭಕ್ತಿಯಿಂದ ಸರಳವಾಗಿ ಧಾರ್ಮಿಕ ಕಾರ್ಯಕ್ರಮಗಳು ಆಗಬೇಕಿದೆ. ಈ ನಿಟ್ಟಿನಲ್ಲಿ ಭಕ್ತರ ಹೊಣೆಗಾರಿಕೆ ಹೆಚ್ಚು ಎಂದರು.
ಕಾಶಿ ಮಹಾಲಿಂಗ ಶ್ರೀಗಳು ನಡೆದ ಬಂದ ದಾರಿ, ಹಲವಾರು ಘಟನೆಗಳ ಕುರಿತು ಭಕ್ತರಿಗೆ ತಿಳಿಸಿದ ಶ್ರೀಗಳು, ಅವರ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕಿದೆ. ಒಳ್ಳೆಯತನ, ಭಕ್ತಿ, ಬದ್ಧತೆ ಮೈಗೂಡಿಸಿಕೊಳ್ಳಬೇಕು. ಜೀವನದಲ್ಲಿ ಸಾಧನೆಗೆ ಛಲ ಬೇಕು ಎಂದು ತಿಳಿಸಿದರು.
ಭಕ್ತಿಯಿಂದ ಪ್ರಾರ್ಥಿಸಿದರೆ ವರುಣ ಕೂಡ ಕೃಪೆ ತೋರಲಿದ್ದಾನೆ ಎಂಬ ನಂಬಿಕೆ ಅನಾದಿ ಕಾಲದಿಂದಲೂ ಇದೆ. ಆದ್ದರಿಂದ ಮಳೆಗಾಗಿ ಪ್ರಾರ್ಥನೆ ಸರಿಯಿದೆ. ಜತೆಗೆ ಗಿಡ ನೆಟ್ಟು ಪೋಷಣೆ ಮಾಡುವ ಶ್ರದ್ಧೆ ಕೂಡ ಅಗತ್ಯ. ಮರಗಳು ಇದ್ದಲ್ಲಿ ಮಳೆ ಸುರಿಯುತ್ತದೆ ಎಂಬ ಸತ್ಯ ಅರಿತುಕೊಳ್ಳಬೇಕು ಎಂದು ಹೇಳಿದರು.
ಸಿರಿಗೆರೆ ಹಾಗೂ ಸುತ್ತಮುತ್ತಲಿನ ಭಕ್ತರು ಪಾಲ್ಗೊಂಡಿದ್ದರು. ಪಾಯಸ, ಕಡ್ಲೆ ಕಾಳು ಪಲ್ಯ ಅನ್ನ-ಸಾಂಬಾರು, ಮಜ್ಜಿಗೆ ವ್ಯವಸ್ಥೆ ಮಾಡಲಾಯಿತು. ಶ್ರೀಗಳು ಭಕ್ತರಿಗೆ ಪ್ರಸಾದ ವಿತರಿಸಿದರು. ಗ್ರಾಪಂ ಅಧ್ಯಕ್ಷೆ ಹಾಲಮ್ಮ ಭೈರಪ್ಪ ಇತರರಿದ್ದರು.