SUDDIKSHANA KANNADA NEWS/ DAVANAGERE/ DATE:20-06-2024
ದಾವಣಗೆರೆ: ಯುಜಿಸಿ ನೆಟ್ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಕಾರಣ ರದ್ದುಗೊಳಿಸಲಾಗಿದ್ದು, ಕೇಂದ್ರ ಸರ್ಕಾರದ ನಿರ್ಲಕ್ಷ್ಯವೇ ಕಾರಣ. ಈ ಪ್ರಕರಣದ ಬಗ್ಗೆ ಸಿಬಿಐಗೆ ವಹಿಸಲು ನಿರ್ಧರಿಸಿರುವುದು ದೇಶವೇ ತಲೆತಗ್ಗಿಸುವ ವಿಚಾರ ಎಂದು ಅಖಿಲ ಭಾರತ ಕಾಂಗ್ರೆಸ್ ಯುವ ಘಟಕದ ರಾಷ್ಟ್ರೀಯ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಹೇಳಿದ್ದಾರೆ.
ನೆಟ್ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ರಾಷ್ಟ್ರೀಯ ಸೈಬರ್ ಅಪರಾಧ ಬೆದರಿಕೆ ವಿಶ್ಲೇಷಣಾ ಘಟಕ ವರದಿ ನೀಡಿದ ಆಧಾರದ ಮೇಲೆ ಪರೀಕ್ಷೆ ರದ್ದುಗೊಳಿಸಲಾಗಿದೆ. ಇದಕ್ಕೆ ಯಾರು ಹೊಣೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಕಳೆದ ಜೂನ್ – ಜುಲೈ ತಿಂಗಳಿನಲ್ಲಿ ನಡೆದ ಯುಜಿಸಿ ನೆಟ್ ಪರೀಕ್ಷೆಯಲ್ಲಿ ಉನ್ನತ ಮಟ್ಟದ ಪಾರದರ್ಶಕತೆ ಹಾಗೂ ಪಾವಿತ್ರ್ಯತೆ ಕಾಯ್ದುಕೊಂಡಿಲ್ಲ. ಹೊಸದಾಗಿ ಪರೀಕ್ಷೆ ನಡೆಸಲು ನಿರ್ಧರಿಸಿರುವುದು ಸ್ವಾಗತಾರ್ಹ. ಇಂಥ ಅತ್ಯುನ್ನತ ಪರೀಕ್ಷೆ ಅಕ್ರಮವಾಗಿ ನಡೆದಿರುವುದು ದುರಂತ ಎಂದು ಹೇಳಿದ್ದಾರೆ.
ಹನ್ನೊಂದು ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹೆಸರು ನೊಂದಾಯಿಸಿದ್ದರು. ಆದ್ರೆ ಕಿರಿಯ ಸಂಶೋಧನಾ ಫೆಲೋಶಿಪ್, ಸಹಾಯಕ ಪ್ರಾಧ್ಯಾಪಕರ ಹುದ್ದೆ ನೇಮಕಾತಿ ಹಾಗೂ ವಿಶ್ವವಿದ್ಯಾನಿಲಯಗಳ ಪಿಹೆಚ್ ಡಿ ಪ್ರವೇಶಕ್ಕೆ ನೆಟ್ ಪರೀಕ್ಷೆ ನಡೆಸಲಾಗುತ್ತದೆ. ವೈದ್ಯಕೀಯ ಪ್ರವೇಶಕ್ಕೆ ನಡೆಸಲಾಗುವ ನೀಟ್ ನಲ್ಲಿ ಅಕ್ರಮ ನಡೆದಿದೆ ಎಂದಾದರೆ ಯಾವ ಮಟ್ಟದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ ಎಂದು ಖಾಲಿದ್ ಅಹ್ಮದ್ ಪ್ರಶ್ನಿಸಿದ್ದಾರೆ.