SUDDIKSHANA KANNADA NEWS/ DAVANAGERE/ DATE:17-06-2024
ದಾವಣಗೆರೆ: ಪೆಟ್ರೋಲ್, ಡೀಸೆಲ್ ಬೆಲೆ ವಿರೋಧಿಸಿ ಜಿಲ್ಲಾ ಬಿಜೆಪಿಯು ವಿಭಿನ್ನವಾಗಿ ಪ್ರತಿಭಟನೆ ನಡೆಸಿತು. ನಗರದ ಜಯದೇವ ವೃತ್ತದಲ್ಲಿ ಎತ್ತಿನ ಗಾಡಿಯ ಮೂಲಕ ಆಗಮಿಸಿದ ಕೇಸರಿ ಕಲಿಗಳು ಎಸಿ ಕಚೇರಿಯವರೆಗೆ ಎತ್ತಿನ ಗಾಡಿಯಲ್ಲಿ ಬಂದು ಮನವಿ ಸಲ್ಲಿಸಿದರು.
ಈ ವೇಳೆ ಹುಂಡಿಗೆ ಹಣ ಹಾಕುವ ಮೂಲಕ ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿ ವಿರುದ್ದ ಆಕ್ರೋಶ ವ್ಯಕ್ತಪಡಿಸಲಾಯಿತು.
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳ ಆರ್ಥಿಕ ಹೊರೆ ನಿಭಾಯಿಸಲು ಸಾಧ್ಯವಾಗದೆ ಆರ್ಥಿಕವಾಗಿ ದಿವಾಳಿಯಾಗಿದೆ. ಪಂಚ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಚಿಲ್ಲರೆ ಮಾರಾಟ ತೆರಿಗೆಯನ್ನು ದಿಢೀರನೆ ದೊಡ್ಡ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ. ಇದರಿಂದ ರಾಜ್ಯದಲ್ಲಿ ಏಕಾಏಕಿ 1 ಲೀಟರ್ ಪೆಟ್ರೋಲ್ ಬೆಲೆಯನ್ನು 3 ರೂ ಮತ್ತು ಡೀಸೆಲ್ ದರವನ್ನು 3 ರೂ 50 ಪೈಸೆ ಹೆಚ್ಚಳವಾಗಿದೆ ಎಂದು ಆರೋಪಿಸಿ ಜಿಲ್ಲಾ ಬಿಜೆಪಿಯು ಪ್ರತಿಭಟನೆ ನಡೆಸಿತು. ನಗರದ ಜಯದೇವ ವೃತ್ತದಲ್ಲಿ ಜಮಾವಣೆಗೊಂಡು ಎಸಿ ಕಚೇರಿಯವರೆಗೆ ಮೆರವಣಿಗೆಯಲ್ಲಿ ತೆರಳಿ ಮನವಿ ಸಲ್ಲಿಸಲಾಯಿತು.
ಜನರ ಸಂಚಾರ ಹಾಗೂ ಸರಕು ಸಾಗಣೆ ವೆಚ್ಚ ಜಾಸ್ತಿಯಾಗಿ ಎಲ್ಲಾ ಸೇವೆಗಳ ಮತ್ತು ದಿನನಿತ್ಯ ವಸ್ತುಗಳ ಬೆಲೆ ದುಬಾರಿಯಾಗುತ್ತವೆ. ಜನರು ದಿನ ನಿತ್ಯ ಖರೀದಿಸುವ ತರಕಾರಿ, ಔಷಧಿ, ದಿನಸಿ ವಸ್ತುಗಳು ಸೇರಿದಂತೆ ಎಲ್ಲಾ ಬೆಲೆ ಗಗನಕ್ಕೇರುತ್ತವೆ. ಇದರಿಂದ ಸಹಜವಾಗಿಯೇ ಬಡವರ ಮತ್ತು ಜನಸಾಮಾನ್ಯರ ತಿಂಗಳ ವೆಚ್ಚ ಹೆಚ್ಚುತ್ತದೆ. ಜನರು ಜೀವನ ಸಾಗಿಸುವುದು ಕಷ್ಟಕರವಾಗುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ 1 ವರ್ಷದಲ್ಲಿ ಹಾಲು, ಆಲ್ಕೋಹಾಲ್, ಸ್ಟ್ಯಾಂಪ್ ಡ್ಯೂಟಿ ಶುಲ್ಕ, ಆಸ್ತಿ ಮಾರ್ಗಸೂಚಿ ದರ, ವಿದ್ಯುತ್ ದರ ಹೆಚ್ಚಿಸಿ, ಈಗ ಪೆಟ್ರೋಲ್ ಡೀಸೆಲ್ ಬೆಲೆ
ಹೆಚ್ಚಳ ಮಾಡಿದೆ. ರಾಜ್ಯದ ಜನರ ತಲೆ ಮೇಲೆ ಕಲ್ಲು ಚಪ್ಪಡಿ ಹಾಕಿ, ಜೀವ ಹಿಂಡುತ್ತಿದೆ ಎಂದು ಆರೋಪಿಸಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಪಂಚ ಗ್ಯಾರಂಟಿಗಳು ಕೈ ಹಿಡಿಯಲಿವೆ ಎಂಬ ಭ್ರಮೆಯಲ್ಲಿದ್ದ ಕಾಂಗ್ರೆಸ್ ಸರ್ಕಾರ ರಾಜ್ಯದ ಜನರ ತೀರ್ಪಿನಿಂದ ಸೋತು, ಸೇಡನ್ನು ತೀರಿಸಿಕೊಳ್ಳಲು ರಾಜ್ಯದ ಜನರಿಗೆ ಬೆಲೆ ಏರಿಕೆಯ ಶಿಕ್ಷೆ ನೀಡುತ್ತಿದೆ. ಇಂತಹ ಸೇಡಿನ ರಾಜಕಾರಣ ಮಾಡುವ ಕಾಂಗ್ರೆಸ್ ಪಕ್ಷ ತನ್ನ ಬೆಲೆ ಏರಿಕೆಯ ನೀತಿಯನ್ನು ಹಿಂಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಜನರು ಕಾಂಗ್ರೆಸ್ ಮುಕ್ತ ರಾಜ್ಯವನ್ನಾಗಿ ಮಾಡಿ ಸೇಡು ತೀರಿಸಿಕೊಳ್ಳುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಈಗ ಹೆಚ್ಚಿಸಿರುವ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯನ್ನು ರಾಜ್ಯ ಸರ್ಕಾರ ಪುನರ್ ಪರಿಶೀಲಿಸಿ, ದರ ಏರಿಕೆ ಕ್ರಮವನ್ನು ಸಂಪೂರ್ಣವಾಗಿ ಹಿಂಪಡೆಯಬೇಕು. ಹಿಂದಿನ ಹಂಗಾಮಿನಲ್ಲಿ ರಾಜ್ಯದ ರೈತರು ಭೀಕರ ಬರದಿಂದ ಕಂಗೆಟ್ಟಿದ್ದಾರೆ. ತಕ್ಷಣವೇ ಹಿಂದಿನ ಬಿಜೆಪಿ ಸರ್ಕಾರ ಜಾರಿ ತಂದಿದ್ದ ಕೃಷಿ ಚಟುವಟಿಕೆಗಳಿಗಾಗಿ ರೈತರು ಖರೀದಿಸಿದ ಡೀಸೆಲ್ ವೆಚ್ಚವನ್ನು ಅವರ ಖಾತೆಗಳಿಗೆ ಜಮಾ ಮಾಡುವ ರೈತಶಕ್ತಿ ಯೋಜನೆಯನ್ನು ಮರು ಜಾರಿಗೊಳಿಸಿ, ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು.
2021ರ ನವೆಂಬರ್ ತಿಂಗಳಲ್ಲಿ ಅಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 100 ರೂ ದಾಟಿದ್ದರಿಂದ ಪೆಟ್ರೋಲ್ ಮೇಲಿನ ಮಾರಾಟ ತೆರಿಗೆಯನ್ನು ಶೇ.35 ರಿಂದ
ಶೇ.25.92 ಗೆ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಶೇ.24 ರಿಂದ ಶೇ.14.34 ಕ್ಕೆ ಇಳಿಸಿ, ಕೋವಿಡ್ ಹೊಡೆತಕ್ಕೆ ತತ್ತರಿಸಿದ ರಾಜ್ಯದ ಜನತೆಗೆ ನೆರವಾಗಿತ್ತು. ಅದೇ ರೀತಿಯಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಮಾರಾಟ ತೆರಿಗೆಯನ್ನು ಕಡಿಮೆ ಮಾಡಿ, ಕಡಿಮೆ ದರದಲ್ಲಿ ತೈಲ ಸಿಗುವಂತೆ ಮಾಡಬೇಕು ಎಂದು
ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ , ಶಾಸಕ ಬಿ.ಪಿ.ಹರೀಶ್, ಜಿಲ್ಲಾ ಬಿಜೆಪಿ ನಿಕಟಪೂರ್ವ ಅಧ್ಯಕ್ಷ ವೀರೇಶ್ ಹನಗವಾಡಿ,ಯಶವಂತ್ ರಾವ್ ಜಾಧವ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೇಬಾಳು, ಬಿ.ಎಸ್.ಜಗದೀಶ್, ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ, ಮಾಜಿ ಶಾಸಕ ಎಂ.ಬಸವರಾಜ್ ನಾಯ್ಕ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಬಿ.ಜಿ.ಅಜಯ್ ಕುಮಾರ್, ಮಾಡಾಳು ಮಲ್ಲಿಕಾರ್ಜುನ, ಲೋಕಿಕೆರೆ ನಾಗರಾಜ್, ಶಿವನಹಳ್ಳಿ ರಮೇಶ್, ಹೆಚ್. ಎನ್.ಶಿವಕುಮಾರ್, ಬಿ. ಟಿ. ಸಿದ್ದಪ್ಪ, ವಸಂತ ಕುಮಾರ್, ಆರ್. ಎಲ್.ಶಿವಪ್ರಕಾಶ್ ಮತ್ತಿತರರು ಪಾಲ್ಗೊಂಡಿದ್ದರು.