SUDDIKSHANA KANNADA NEWS/ DAVANAGERE/ DATE:10-03-2024
ದಾವಣಗೆರೆ: ಬೆಳಗಾವಿ ರಾಮಮಂದಿರಕ್ಕೆ ಬಾಂಬ್ ಬೆದರಿಕೆ ಬಂದಿರುವ ವಿಚಾರ ಗಮನಕ್ಕೆ ಬಂದಿದ್ದು, ರಾಜ್ಯದ ಮುಜರಾಯಿ ಇಲಾಖೆಗೆ ವ್ಯಾಪ್ತಿಗೊಳಪಡುವ ಎಲ್ಲಾ ದೇವಸ್ಥಾನಗಳಲ್ಲಿಯೂ ಬಿಗಿ ಭದ್ರತೆ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಮಾಹಿತಿ ನೀಡಿದರು.
ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕರ್ನಾಟಕದ ಎಲ್ಲಾ ದೇಗುಲಗಳಲ್ಲಿಯೂ ಹೈ ಅಲರ್ಟ್ ಘೋಷಿಸಲಾಗಿದೆ. ದೇವಸ್ಥಾನಕ್ಕೆ ಬರುವ ಭಕ್ತಾದಿಗಳನ್ನು ತಪಾಸಣೆಗೊಳಪಡಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಬೆಳಗಾವಿಯ ನಿಪ್ಪಾಣಿಯ ಶ್ರೀರಾಮಮಂದಿರ ದೇವಾಲಯವನ್ನು ಸ್ಫೋಟಿಸೋದಾಗಿ ಬಾಂಬ್ ಬೆದರಿಕೆ ಪತ್ರ ಬಂದಿರುವುದು ನಿಜ. ಹಾಗಾಗಿ ದೇವಾಲಯಗಳಲ್ಲಿ ಭದ್ರತೆಯನ್ನು ಹೆಚ್ಚಿಸೋದಕ್ಕೆ ಸೂಚನೆ ನೀಡಲಾಗಿದೆ. ಅಧಿಕಾರಿಗಳಿಗೆ ಎಚ್ಚರ ವಹಿಸುವಂತೆ ಸೂಚಿಸಿದ್ದೇನೆ ಎಂದು ಹೇಳಿದರು.
ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳುವುದಕ್ಕೆ ಮುಜರಾಯಿ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಅವರು ಸೂಕ್ತ ಭದ್ರತೆ ಕುರಿತಂತೆ ಆದೇಶ ಮಾಡಲಿದ್ದಾರೆ ಎಂದು ಹೇಳಿದರು.