SUDDIKSHANA KANNADA NEWS/ DAVANAGERE/ DATE:09-03-2024
ದಾವಣಗೆರೆ: ದಾವಣಗೆರೆ ನೂತನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಹಲವು ಆಧುನಿಕ ಸೌಕರ್ಯಗಳನ್ನು ಹೊಂದಿದ್ದು ಮಲ್ಟಿಪ್ಲೆಕ್ಸ್ ಸಿನಿಮಾ ಹಾಲ್ಗಳ ಜೊತೆಗೆ ಪ್ರಯಾಣಿಕರಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಹೊಂದಿರುವ ರಾಜ್ಯದಲ್ಲಿನ ಮೊದಲ ಬಸ್ ನಿಲ್ದಾಣ ಇದಾಗಿದೆ ಎಂದು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿಯವರು ತಿಳಿಸಿದರು.
ಅವರು ರಾಜ್ಯ ರಸ್ತೆ ಸಾರಿಗೆ ನಿಗಮ, ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಾಣ ಮಾಡಲಾಗಿರುವ ದಾವಣಗೆರೆ ಮುಖ್ಯ ಬಸ್ ನಿಲ್ದಾಣ ಹಾಗೂ ಬೇತೂರು ರಸ್ತೆಯಲ್ಲಿನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ
ಲೋಕಾರ್ಪಣೆ ಮಾಡಿ ಮುಖ್ಯ ಬಸ್ ನಿಲ್ದಾಣದಲ್ಲಿ ಏರ್ಪಡಿಸಲಾದ ಸಮಾರಂಭದಲ್ಲಿ ಮಾತನಾಡಿದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ದಾವಣಗೆರೆ ಮುಖ್ಯ ಬಸ್ ನಿಲ್ದಾಣ ಮತ್ತು ಬೇತೂರು ರಸ್ತೆಯ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗಿದೆ. ಮುಖ್ಯ ಬಸ್ ನಿಲ್ದಾಣವನ್ನು ಶೇ 109.84 ಕೋಟಿಯಲ್ಲಿ 6.07 ಎಕರೆ ವಿಸ್ತೀರ್ಣದಲ್ಲಿ
ನಿರ್ಮಾಣ ಮಾಡಲಾಗಿದೆ. ಇದರಲ್ಲಿ ಶೇ 25 ರಷ್ಟು ನಿಗಮದ ಅನುದಾನ ಹಾಗೂ ಶೇ 75 ರಷ್ಟು ಸ್ಮಾರ್ಟ್ ಸಿಟಿ ಯೋಜನೆ ಅನುದಾನವಾಗಿದೆ. ಮತ್ತು ಬೇತೂರು ರಸ್ತೆಯಲ್ಲಿನ ಬಸ್ ನಿಲ್ದಾಣವನ್ನು 1.20 ಎಕರೆ ಜಾಗದಲ್ಲಿ
ರೂ.8.96 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ದಾವಣಗೆರೆಯಿಂದ ಪ್ರತಿನಿತ್ಯ 1400 ಕ್ಕಿಂತ ಹೆಚ್ಚು ಬಸ್ಗಳು ಬಂದು ಹೋಗುತ್ತವೆ. ಇಲ್ಲಿಗೆ ಆಗಮಿಸುವ ಬಸ್ಗಳ ಸಂಖ್ಯೆಯು ಹೆಚ್ಚಿದ್ದು ಅದಕ್ಕೆ ಬೇಕಾದ
ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದರು.
ಶಕ್ತಿ ತಂದ ಮೇಲೆ ಮಹಿಳೆಯರಿಗೆ ಶಕ್ತಿ:
ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ಸರ್ಕಾರ ಬಂದು 15 ದಿನಗಳಲ್ಲಿ ಮಹಿಳೆಯರು ಉಚಿತ ಪ್ರಯಾಣಿಸುವ ಶಕ್ತಿ ಯೋಜನೆಯನ್ನು ಜಾರಿಗೆ ತರಲಾಯಿತು. ಈ ಯೋಜನೆ ಜಾರಿಯಿಂದ ಮುಂದಿನ ದಿನಗಳಲ್ಲಿ ನಿಗಮದ ಬಸ್ಗಳಿಗೆ ಇಂಧನ ಭರಿಸಲು ಹಣವಿಲ್ಲದಂತಾಗುತ್ತದೆ ಎಂಬ ಭಾವನೆಯನ್ನು ನಿವಾರಣೆ ಮಾಡಿ ನಿಗಮವನ್ನು ಅತ್ಯುತ್ತಮವಾಗಿ ನಡೆಸಿಕೊಂಡು ಹೋಗಲಾಗುತ್ತಿದೆ. ಶಕ್ತಿ ಬಂದಾಗಿನಿಂದ ರಾಜ್ಯದಲ್ಲಿ 160 ಕೋಟಿಗಿಂತಲೂ ಹೆಚ್ಚಿನ ಮಹಿಳೆಯರು ಪ್ರಯಾಣಿಸಿದ್ದು ಇವರಿಗೆ ಆರ್ಥಿಕವಾಗಿ ಶಕ್ತಿ ತುಂಬಲಾಗಿದೆ ಎಂದು ವಿವರಿಸಿದರು.
ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ನೂತನ ಬಸ್ ನಿಲ್ದಾಣ ಉದ್ಘಾಟಿಸಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮೇಯರ್ ವಿನಾಯಕ್ ಬಿ.ಹೆಚ್, ಕೆ.ಎಸ್.ಆರ್.ಟಿ.ಸಿ. ನಿಗಮದ ಸಿಬ್ಬಂದಿ ಮತ್ತು ಜಾಗೃತ ವಿಭಾಗದದ ನಿರ್ದೇಶಕರಾದ ಡ.: ಕೆ.ನಂದಿನಿದೇವಿ, ಪಾಲಿಕೆ ಸದಸ್ಯರಾದ ಚಮನ್ಸಾಬ್, ಅಪರ ಜಿಲ್ಲಾಧಿಕಾರಿ
ಸೈಯ್ಯದಾ ಆಫ್ರೀನ್ ಭಾನು ಎಸ್.ಬಳ್ಳಾರಿ, ಸ್ಮಾರ್ಟ್ಸಿಟಿ ವ್ಯವಸ್ಥಾಪಕ ನಿರ್ದೇಶಕ ವೀರೇಶ್ಕುಮಾರ್, ಎಲೆಬೇತೂರು ಗ್ರಾ.ಪಂ.ಅಧ್ಯಕ್ಷ ರೇವಣಸಿದ್ದಪ್ಪ ಹಾಗೂ ಪಾಲಿಕೆ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.
ಕೆ.ಎಸ್.ಆರ್.ಟಿ.ಸಿ. ವಿಭಾಗೀಯ ನಿಯಂತ್ರಕ ಶ್ರೀನಿವಾಸ್ಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಭಾಗೀಯ ಸಂಚಾಲಕ ಫಕೃದ್ದೀನ್.ಡಿ ಸ್ವಾಗತಿಸಿದರು.